ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪ್ರಖ್ಯಾತ ಪ್ರವಾಸಿ ಕೇಂದ್ರಕ್ಕೆ ಬರುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸದಿರುವ ಬಗ್ಗೆ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಪ್ರವಾಸೋದ್ಯಮ ಇಲಾಖೆ ಹಾಗೂ ದೇಗುಲದ ಆಡಳಿತದ ವಿರುದ್ಧ ಕಿಡಿಕಾರಿದರು.ಚನ್ನಕೇಶವ ದೇಗುಲಕ್ಕೆ ಬರುವ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದಿರುವ ಬಗ್ಗೆ ಮಾಧ್ಯಮದಲ್ಲಿ ಪ್ರಕಟಗೊಂಡ ಸುದ್ದಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪುರಸಭೆ ಅಧ್ಯಕ್ಷ ಎ ಆರ್ ಅಶೋಕ್ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದರು. ಪ್ರವಾಸಿಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪುರಸಭೆ ಅಧ್ಯಕ್ಷರು, ಶ್ರೀ ಚನ್ನಕೇಶವ ದೇಗುಲಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ರಜಾ ದಿನಗಳಲ್ಲಿ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಿತಾಣಕ್ಕೆ ಬರುತ್ತಾರೆ. ಆದರೆ ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದೆ ಹಿಡಿಶಾಪ ಹಾಕುತ್ತಿದ್ದಾರೆ. ಇದು ಮಾಧ್ಯಮದಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬೇಸರವಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆ ಹಾಗೂ ದೇಗುಲದ ಅಭಿವೃದ್ಧಿಗೆ ಲಕ್ಷಾಂತರ ರು. ಹಣ ಬರುತ್ತಿದೆ. ಆದರೆ ಬಂದಂತಹ ಹಣ ಅಧಿಕಾರಿಗಳಿಗೆ ಸಾಕಾಗುತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರಿಲ್ಲ. ಮೂಲಭೂತ ಸೌಕರ್ಯ ಇಲ್ಲ. ಸಮರ್ಪಕ ಶೌಚಾಲಯ ಇಲ್ಲದೆ ಬಯಲು ಶೌಚಾಲಯಕ್ಕೆ ಹೋಗಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕ ವಾಗಿ ಶೌಚಾಲಯ ವ್ಯವಸ್ಥೆ ಮಾಡಿದ್ದರು. ಆದರೆ ಅದರ ವ್ಯವಸ್ಥೆ ಈಗ ಸಂಪೂರ್ಣ ಹಾಳಾಗಿದೆ. ಪ್ರವಾಸಕ್ಕೆ ಬಂದಿರುವ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಳತೀರದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಿರುವ ದೇವಸ್ಥಾನ ಆಡಳಿತ ಮಂಡಳಿ ಇದ್ದರೂ ಇಲ್ಲದಂತಾಗಿದೆ. ಹಣದ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿದ್ದು, ಬಂದಂತ ಪ್ರವಾಸಿಗರಿಗೆ ಯಾವುದೇ ಅನುಕೂಲ ಕಲ್ಪಿಸಲು ಮುಂದಾಗಿಲ್ಲ. ಕೂಡಲೇ ಇದನ್ನು ಸರಿಪಡಿಸದಿದ್ದರೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ ಎಂದರು.ಸ್ಥಳೀಯ ವಾರ್ಡ್ ಸದಸ್ಯರಾದ ಜಗದೀಶ್ ಹಾಗೂ ದಿವ್ಯ ಗಿರೀಶ್ ಮಾತನಾಡಿ, ಇಲ್ಲಿಗೆ ಬರುವ ಪ್ರವಾಸಿಗರು ದೇಗುಲದ ಸುತ್ತಮುತ್ತಲಿನ ಅವ್ಯವಸ್ಥೆ ಕಂಡು ಹಿಡಿಶಾಪ ಹಾಕಿ ಹೋಗುತ್ತಿದ್ದಾರೆ. ಪ್ರತಿನಿತ್ಯ ಪುರಸಭೆಯವರು ಸ್ವಚ್ಛತೆ ಮಾಡಿ ಹೋಗುತ್ತಾರೆ. ನಂತರ ಇನ್ನು ಆಡಳಿತ ಮಂಡಳಿಯವರು ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಮೌನ ವಹಿಸುತ್ತಾರೆ. ರಜಾ ದಿನಗಳಲ್ಲಿ ಬರುವ ವಿದ್ಯಾರ್ಥಿಗಳು ಹಾಗೂ ಮಕರ ಸಂಕ್ರಾಂತಿಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳು ಶೌಚಾಲಯಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇರುವ ಒಂದು ಶೌಚಾಲಯದಲ್ಲಿ 300 ಜನರು ಹೇಗೆ ಹೋಗಲು ಸಾಧ್ಯ ಎಂಬುದನ್ನು ಇಲ್ಲಿನ ಶಾಸಕರು ಗಮನ ಹರಿಸಬೇಕು. ಶೌಚಾಲಯದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಪ್ರವಾಸೋದ್ಯಮ ಇಲಾಖೆ ಈ ಜಾಗ ನಮ್ಮದು ನಾವು ಅಭಿವೃದ್ಧಿ ಪಡುಸುತ್ತೇವೆ ಎಂದು ಹೇಳುತ್ತಾರೆ. ಹೀಗಿರುವ ಹಳೆ ಶೌಚಾಲಯ ದುರಸ್ತಿ ಮಾಡಿಸಿಲ್ಲ. ಹಣದ ವ್ಯವಹಾರಕ್ಕೆ ಟೆಂಡರ್ ಇದ್ದಾಗ ಕಿತ್ತಾಡಿಕೊಳ್ಳುತ್ತಾರೆ. ಮೂಲಸೌಕರ್ಯ ನೀಡದ ಇವರಿಗೆ ಮುಂದಿನ ದಿನದಲ್ಲಿ ಪುರಸಭೆಯಿಂದ ಸ್ವಚ್ಛತೆ ಮಾಡುವುದನ್ನು ನಿಲ್ಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಯುತ್ತದೆ. ಜಿಲ್ಲಾಧಿಕಾರಿಗಳಿಗೆ ಇಲ್ಲಿಯ ದುಸ್ಥಿತಿ ಬಗ್ಗೆ ನಾವು ಖುದ್ದಾಗಿ ಅವರಿಗೆ ಮನವರಿಕೆ ಮಾಡಲು ನಿಯೋಗ ತೆರಳಲಾಗುತ್ತದೆ ಎಂದರು.
ಮಾಜಿ ಪುರಸಭೆ ಉಪಾಧ್ಯಕ್ಷ ಸತೀಶ್ ಮಾತನಾಡಿ, ಇಲ್ಲಿರುವ ಅಧಿಕಾರಿಗಳು ಉಡಾಫೆ ವರ್ತನೆ ತೋರುತ್ತಿದ್ದು ಅವರು ನಿರ್ವಹಿಸಬೇಕಾದ ಕೆಲಸವನ್ನು ಬೇರೊಬ್ಬರಿಗೆ ವಹಿಸಿದ್ದಾರೆ. ಇಲ್ಲಿಯ ಅವ್ಯವಸ್ಥೆ ಬಗ್ಗೆ ಒಂದು ದಿನವೂ ಬಂದು ಗಮನಿಸಿಲ್ಲ. ಇವರ ಧೋರಣೆ ಇದೇ ರೀತಿ ಮುಂದುವರಿದಲ್ಲಿ ದೇಗುಲ ಸುತ್ತಲಿನ ನಾಲ್ಕು ವಾರ್ಡ್‌ನ ಎಲ್ಲಾ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಲೋಹಿತ್, ಹರೀಶ್, ದಬ್ಬೆ ನಾರಾಯಣ್, ಸುರೇಶ್, ರಘು ಇದ್ದರು.