ಕಟೀಲಿನ ಆನೆ ಮಹಾಲಕ್ಷ್ಮೀ ನೋಡಲು ಸ್ವಿಜರ್ಲ್ಯಾಂಡ್‌ನಿಂದ ಬಂದ ಪ್ರವಾಸಿಗರು

| Published : Feb 11 2024, 01:49 AM IST

ಸಾರಾಂಶ

ಸೈಕಲ್‌ನಲ್ಲಿ ಇಪ್ಪತೆರಡು ರಾಷ್ಟ್ರಗಳನ್ನು ಸುತ್ತಿ ಭಾರತಕ್ಕೆ ಆಗಮಿಸಿದ ಈ ಪ್ರವಾಸಿಗರು, ಶನಿವಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

ಮೂಲ್ಕಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ಆನೆ ಮಹಾಲಕ್ಷ್ಮೀಯನ್ನು ನೋಡಲು ಸ್ವಿಜರ್ಲ್ಯಾಂಡ್‌ ದೇಶದಿಂದ ಇಬ್ಬರು ಪ್ರವಾಸಿಗರು ಕಟೀಲು ಕ್ಷೇತ್ರಕ್ಕೆ ಸೈಕಲ್‌ನಲ್ಲಿ ಆಗಮಿಸಿದ್ದಾರೆ.

ಕಟೀಲು ಕ್ಷೇತ್ರದಲ್ಲಿ ದುರ್ಗೆಯ ಸಾನಿಧ್ಯದ ಜೊತೆಗೆ ಕ್ಷೇತ್ರದ ಆನೆ ಮಹಾಲಕ್ಷ್ಮೀ ಎಲ್ಲರ ಅಚ್ಚುಮೆಚ್ಚು. ಸಾಧು ಸ್ವಭಾವದ ಈ ಆನೆ ಕ್ರಿಕೆಟ್, ಫುಟ್ಬಾಲ್ ಆಡುವ ಮೂಲಕ ಭಕ್ತರ ಗಮನವನ್ನು ಸೆಳೆದಿದ್ದಾಳೆ. ಸೈಕಲ್‌ನಲ್ಲಿ ಇಪ್ಪತೆರಡು ರಾಷ್ಟ್ರಗಳನ್ನು ಸುತ್ತಿ ಭಾರತಕ್ಕೆ ಆಗಮಿಸಿದ ಈ ಪ್ರವಾಸಿಗರು, ಶನಿವಾರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಕ್ಲಾಡಿಯೋ ಬ್ರಾಂಡ್ಲಿ ಮತ್ತು ಉರ್ಸ್ ಸೈಕಲ್‌ನಲ್ಲೇ ಪ್ರಪಂಚ ಸುತ್ತುತ್ತಿದ್ದು, ಇಪ್ಪತ್ತೆರಡರ ಹರೆಯ ಕ್ಲಾಡಿಯೋ ತನ್ನ ಅಂಕಲ್‌ ಉರ್ಸ್ ಜೊತೆಗೆ ಪರ್ಯಟನೆಯಲ್ಲಿದ್ದಾರೆ. 2022ರ ಸೆಪ್ಟೆಂಬರ್ 7ರಂದು ಸ್ವಿಜರ್ಲ್ಯಾಂಡ್‌ನಿಂದ ಸೈಕಲ್ ಪ್ರಯಾಣ ಆರಂಭಿಸಿದ ಇವರು ಮಂಗೋಲಿಯಾ, ಮಧ್ಯಏಷ್ಯಾ, ಇರಾನ್, ಒಮಾನ್ ರಾಷ್ಟ್ರಗಳನ್ನು ಕ್ರಮಿಸಿ ಸದ್ಯ ಕಟೀಲಿನಲ್ಲಿದ್ದಾರೆ. ಒಮಾನ್‌ನಿಂದ ಕೊಚ್ಚಿನ್‌ಗೆ ಆಗಮಿಸಿದ ಇವರು ಕಳೆದ ಎಂಟು ದಿನಗಳಿಂದ ಭಾರತ ಪ್ರವಾಸದಲ್ಲಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನೆ ಮಹಾಲಕ್ಷ್ಮೀಯನ್ನು ಕಾಣಲು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಗೂಗಲ್‌ನಲ್ಲಿ ದೇವಳದ ಆನೆಯ ಬಗ್ಗೆ ಅರಿತಿರುವ ಇವರು, ಆನೆಯ ವಿಶೇಷತೆಗಳ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡಿದ್ದಾರೆ. ದೇಶದೊಳಗೆ ರೈಲಿನಲ್ಲಿ ಸಂಚರಿಸುವ ಇವರು ಬಳಿಕ ಸೈಕಲ್‌ನಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಸೈಕಲ್ ಪ್ರಯಾಣದ ಬಗ್ಗೆ ಕ್ಲಾಡಿಯೋ ಬ್ರಾಂಡ್ಲಿ ಮಾತನಾಡಿ, ನಿಧಾನಗತಿಯ ಪ್ರಯಾಣದಿಂದ ಜನರನ್ನು ತಲುಪಲು ಸಾಧ್ಯ. ಭಾರತದ ಲೋಕಲ್ ರೆಸ್ಟೋರೆಂಟ್ ಗಳಲ್ಲಿ ಆಹಾರ ಸವಿದಿದ್ದೇವೆ. ಭಾರತದ ಜನರು ತುಂಬಾ ಒಳ್ಳೆಯವರು. ಜನರು ತುಂಬಾ ಕೇರ್ ಮಾಡುತ್ತಾರೆ. ಸೈಕಲ್ ನನ್ನ ಬೆಸ್ಟ್ ಫ್ರೆಂಡ್. ಕರಾವಳಿಯ ಹಲವು ಭಾಗಗಳಿಗೆ ಭೇಟಿ ನೀಡಿದ್ದು ಮುಂದೆ ಬೀಚ್ ಹೌಸ್‌ಗಳಿಗೆ ಹೋಗಿ ನೇಪಾಳದ ಮೂಲಕ ಭಾರತದಿಂದ ಮುಂದಿನ ರಾಷ್ಟ್ರಕ್ಕೆ ಭೇಟಿ ನೀಡುತ್ತೇವೆ ಎಂದು ಹೇಳಿದ್ದಾರೆ.