ಕೋಟೆ, ಮುರುಘಾಮಠಕ್ಕೆ ಪ್ರವಾಸಿಗರ ಲಗ್ಗೆ

| Published : Jan 02 2025, 12:32 AM IST

ಕೋಟೆ, ಮುರುಘಾಮಠಕ್ಕೆ ಪ್ರವಾಸಿಗರ ಲಗ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಐತಿಹಾಸಿಕ ಚಿತ್ರದುರ್ಗಕೋಟೆ ವಿಕ್ಷಣೆಗೆ ಟಿಕೆಟ್ ಪಡೆಯಲು ಪ್ರವಾಸಿಗರ ನೂಕು ನುಗ್ಗಲು ಉಂಟಾಗಿತ್ತು

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹೊಸ ವರ್ಷದ ಸಂಭ್ರಮಾಚರಣೆಗೆ ಬುಧವಾರ ಪ್ರವಾಸಿಗರು ಅಕ್ಷರಶಃ ಚಿತ್ರದುರ್ಗಕ್ಕೆ ಲಗ್ಗೆ ಇಟ್ಟಿದ್ದರು. ಎಲ್ಲಿ ನೋಡಿದರೂ ಜನವೋ ಜನ. ರಾಜ್ಯದ ವಿವಿಧ ಜಿಲ್ಲೆಗಳ ನೋಂದಣಿ ಹೊಂದಿದ ವಾಹನಗಳದ್ದೇ ದರ್ಬಾರು. ಐತಿಹಾಸಿಕ ಏಳು ಸುತ್ತಿನ ಕೋಟೆ, ಮುರುಘಾಮಠ ಪ್ರವಾಸಿಗರಿಂದ ತುಂಬಿ ತುಳುಕಾಡಿತು.

ಪ್ರತಿ ವರ್ಷಾರಂಭದಲ್ಲಿ ಚಿತ್ರದುರ್ಗ ಇಂತಹ ದೃಶ್ಯಗಳಿಗೆ ಸಾಕ್ಷಿಯಾಗುತ್ತದೆ. ಕೋವಿಡ್ ವೇಳೆ ಬಣಗುಟ್ಟಿದ್ದು ಬಿಟ್ಟರೆ ನಂತರದಲ್ಲಿ ಪ್ರವಾಸಿಗರ ಸಂಖ್ಯೆ ಇಮ್ಮಡಿಯಾಗಿದೆ. ತಮ್ಮ ಊರುಗಳಿಂದಲೇ ತಂದ ಕೇಕನ್ನು ಕೈಲಿಡಿದು ಏಳು ಸುತ್ತಿನ ಕೋಟೆ ಏರುವ ಪ್ರವಾಸಿಗರು ಮೆಟ್ಟಿಲು, ಬತೇರುಗಳ ಮೇಲೆ ಕುಳಿತು ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಬುಧವಾರ ಕೋಟೆ ಒಳ ಆವರಣದಲ್ಲಿ ಕೇಕ್ ಹಿಡಿದವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಇಮ್ಮಡಿಯಾಗಿತ್ತು. 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಕೋಟೆಗೆ ಲಗ್ಗೆ ಇಟ್ಟು ಹೋಗಿದ್ದಾರೆ.

ಚಿತ್ರದುರ್ಗದ ಮುರುಘಾಮಠದಲ್ಲಿಯೂ ಇಂತಹದ್ದೇ ದೃಶ್ಯ ಕಂಡು ಬಂತು. ಮುರುುಘಾ ವನ, ಕಾಯಕ ಗ್ರಾಮ ನೋಡಲು ನೂಕು ನುಗ್ಗಲು ಉಂಟಾಗಿತ್ತು. ಮ್ಯೂಜಿಯಂ, ಮಠ, ಮುರುಘಾವನ ವೀಕ್ಷಣೆಗೆ ಬರೋಬ್ಬರಿ 18 ಸಾವಿರ ಮಂದಿ ಭೇಟಿ ಕೊಟ್ಟಿದ್ದಾರೆ. ಪ್ರವಾಸಿಗರ ಲಗ್ಗೆ ಹಿನ್ನಲೆ ಪ್ರತಿ ಹೋಟೆಲ್‌ಗಳು ತುಂಬಿ ತುಳುಕಾಡಿದವು. ಕೋಟೆಗೆ ಹೋಗುವ ರಸ್ತೆ ದಟ್ಟ ವಾಹನ ಸಂಚಾರದಿಂದ ನಲುಗಿತ್ತು.