ಚೇಲಾವರ ಜಲಪಾತದಲ್ಲಿ ಪ್ರವಾಸಿಗರ ಚೆಲ್ಲಾಟ

| Published : Jun 03 2024, 12:31 AM IST

ಸಾರಾಂಶ

ಕೆಲ ಯುವಕರು ಅಪಾಯವನ್ನು ಲೆಕ್ಕಿಸದೇ ಸಂಭ್ರಮಿಸುತ್ತಿದ್ದಾರೆ. ಈಗಾಗಲೇ ಜಲಪಾತದ ಸುಳಿಯಲ್ಲಿ ಸಿಲುಕಿ 40ಕ್ಕೂ ಅಧಿಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷವೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ಚೆಯ್ಯಂಡಾಣೆ ಗ್ರಾಮ ಪಂಚಾಯಿತಿಯ ಚೇಲಾವರದಲ್ಲಿ ಜಲಪಾತವೊಂದು ಮೈದುಂಬಿಕೊಳ್ಳುತ್ತಿದ್ದಂತೆ ವೀಕ್ಷಣೆಗೆ ಪ್ರವಾಸಿಗರೂ ಅಧಿಕ ಸಂಖ್ಯೆಯಲ್ಲಿ ದೌಡಾಯಿಸುತ್ತಿದ್ದಾರೆ. ಜಲಪಾತ ವೀಕ್ಷಣೆಯೊಂದಿಗೆ ನೀರಿನಲ್ಲಿ ಈಜಾಡಿ ಸಂಭ್ರಮಿಸುತ್ತಿದ್ದಾರೆ. ಆದರೆ ಕೆಲ ಯುವಕರು ಇಲ್ಲಿ ಅಪಾಯವನ್ನು ಲೆಕ್ಕಿಸದೆ ಹುಟ್ಟಾಟವಾಡುತ್ತಿದ್ದು, ತಮ್ಮ ಜೀವಕ್ಕೆ ಕುತ್ತು ತಂದೊಡ್ಡುತ್ತಿದ್ದಾರೆ.

ಭಾನುವಾರ ಮೂರು ಬಸ್‌ಗಳಲ್ಲಿ ಆಗಮಿಸಿದ ಪ್ರವಾಸಿಗರು, ಜಲಪಾತ ವೀಕ್ಷಣೆಯ ನೆಪದಲ್ಲಿ ಎಚ್ಚರಿಕೆಯ ಫಲಕಗಳನ್ನೂ ಲೆಕ್ಕಿಸದೆ ಜಲಪಾತದೆಡೆಗೆ ತೆರಳದಂತೆ ಮುಂಜಾಗ್ರತಾ ಕ್ರಮವಾಗಿ ಹಾಕಿದ್ದ ಬೇಲಿಗಳನ್ನು ಕಿತ್ತು ಬಿಸಾಡಿ ಜಲಪಾತದ ಕೆಳಗಿರುವ ಗುಂಡಿಯಲ್ಲಿ ಈಜಾಡಿದ್ದಾರೆ. ಮಾತ್ರವಲ್ಲದೆ ಬಂಡೆಗಳಲ್ಲಿ ಆಟವಾಡಿದ್ದು, ಸ್ಥಳೀಯರ ಎಚ್ಚರಿಕೆಗೂ ಕ್ಯಾರೇ ಅನ್ನದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮಳೆಗಾಲದಲ್ಲಿ ಮೈದುಂಬಿ ಜಲಧಾರೆಯಾಗಿ ಭೋರ್ಗರೆಯುವ ಚೇಲಾವರ ಜಲಪಾತ ಕೊಡಗಿನ ಪ್ರವಾಸಿ ನಕ್ಷೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಳೆಗಾಲದ ದಿನಗಳಲ್ಲಿ ಈ ಜಲಪಾತದ ಚೆಲುವು ಮನಮೋಹಕ. ಸೊಗಸಾದ ಜಲಪಾತದ ಸೌಂದರ್ಯವನ್ನು ವೀಕ್ಷಿಸಲು ಅಧಿಕ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ. ಕೊಡಗು ಜಿಲ್ಲೆಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಈ ಜಲಪಾತವಿದೆ.ಅಪಾಯಕಾರಿ ಪ್ರದೇಶ: ಜಲಪಾತ ವೀಕ್ಷಣೆಗಷ್ಟೇ ಎಂಬುದನ್ನು ಪ್ರವಾಸಿಗರು ತಿಳಿಯಬೇಕು. ಈಗಾಗಲೇ ಜಲಪಾತದ ಸುಳಿಯಲ್ಲಿ ಸಿಲುಕಿ 40ಕ್ಕೂ ಅಧಿಕ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷದಲ್ಲೇ ಇಬ್ಬರು ಪ್ರಾಣ ತೆತ್ತಿದ್ದಾರೆ. ಇದರ ಬಗ್ಗೆ ಅರಿವಿಲ್ಲದ ಪ್ರವಾಸಿಗರು ಜಲಪಾತದತ್ತ ತೆರಳದಂತೆ ಬೇಲಿ ಹಾಕಿ ಕಡಿವಾಣ ಹಾಕಲಾಗಿತ್ತು. ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು. ಆದರೆ ಇದು ಯಾವುದೂ ತಮಗೆ ಸಂಬಂದಿಸಿದ್ದಲ್ಲ ಎಂದುಕೊಂಡಿರುವ ಪ್ರವಾಸಿಗರು, ನೀರಿನಲ್ಲಿ ಚೆಲ್ಲಾಟವಾಡಿದ್ದಾರೆ. ಬಳಿಕ ಸ್ಥಳೀಯರ ಆಕ್ರೋಶದಿಂದ ಅಲ್ಲಿಂದ ತೆರಳಿದ್ದಾರೆ.

ಇಂತಹ ಕೆಲವು ಪ್ರಕರಣಗಳು ಇತ್ತೀಚೆಗೆ ಜರುಗಿದ್ದು, ಇನ್ನಾದರೂ ಪ್ರವಾಸಿಗರು ತಮ್ಮ ಹುಚ್ಚುತನ ನಿಲ್ಲಿಸಿ ಪ್ರವಾಸಿತಾಣಗಳಲ್ಲಿ ಹಾಕಲಾದ ಎಚ್ಚರಿಕೆಯ ಫಲಕಗಳನ್ನು ಪಾಲಿಸಬೇಕಿದೆ.

ಪ್ರವಾಸಿಗರಿಗೆ ನಾವು ಎಷ್ಟೇ ಎಚ್ಚರಿಕೆ ನೀಡಿದರೂ ನಮ್ಮ ಮಾತನ್ನು ಲೆಕ್ಕಿಸುವುದಿಲ್ಲ. ಹಲವು ಸಾರಿ ನಾಪೋಕ್ಲು ಪೊಲೀಸರಿಗೆ ಮಾಹಿತಿಯನ್ನು ನೀಡಿ ಕ್ರಮ ಕೈಗೊಳ್ಳಲಾಗಿದೆ. ಭಾನುವಾರ ಕೂಡ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತಕ್ಕೆ ಇಳಿದು ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಜೀವ ಹಾನಿ ಆಗುವ ಮೊದಲು ಇದಕ್ಕೆ ಸಂಬಂಧಿಸಿದವರು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದು ಚೇಲಾವರ ಗ್ರಾಮ ಸ್ಥಳೀಯ ಶಿವಕುಮಾರ್ ಹೇಳಿದರು.