ಉಪ್ಪಿನಂಗಡಿ: ಪುತ್ತೂರಿನ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರದ್ದು ದೂರಗಾಮಿ ಯೋಚನೆಯಾದರೆ , ಬಿಜೆಪಿಯ ಕೆಲ ಮುಖಂಡರು ಸ್ವಾರ್ಥ ಸಾಧನೆಯ ಚಿಂತನೆಯನ್ನು ಮಾತ್ರ ಹೊಂದಿದ್ದಾರೆ. ಮೆಡಿಕಲ್ ಕಾಲೇಜು ಇರುವಲ್ಲೇ ಆಸ್ಪತ್ರೆಯಾದರೆ ಉಂಟಾಗುವ ಅನುಕೂಲತೆಯನ್ನು ಗ್ರಹಿಸಲಾರದಷ್ಟು ಬಿಜೆಪಿ ಮುಖಂಡರು ಬುದ್ದಿಹೀನರಾಗಬಾರದು ಎಂದು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ., ತೌಷಿಫ್ ಹೇಳಿದ್ದಾರೆ. ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಈ ತನಕ ಬಂದಿಲ್ಲ. ಮೆಡಿಕಲ್ ಲಾಬಿಯನ್ನು ಕಡೆಗಣಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ದಂಬಾಲು ಬಿದ್ದು, ತನ್ನ ಶಾಸಕತ್ವವನ್ನು ಪಣಕ್ಕಿಟ್ಟು ಪುತ್ತೂರಿಗೆ ಮೆಡಿಕಲ್ ಕಾಲೇಜು ಲಭಿಸುವಂತೆ ಮಾಡಿರುವುದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು. ಅವರು ಯಾವುದೇ ಭರವಸೆ ನೀಡಿದರೂ ಅದರ ಅನುಷ್ಠಾನಕ್ಕೆ ಸಂಬಧಿಸಿ ಯೋಜನಾಬದ್ದವಾಗಿ ಕಾರ್ಯತತ್ಪರತೆಯನ್ನು ಹೊಂದಿದ್ದಾರೆ. ಒಂದು ಮೆಡಿಕಲ್ ಕಾಲೇಜು ಅಸ್ತಿತ್ವಕ್ಕೆ ಬರಬೇಕಾದರೆ ಯಾವೆಲ್ಲಾ ಮೂಲಭೂತ ಸೌಕರ್ಯ ಬೇಕೆನ್ನುವುದನ್ನು ಮೊದಲೇ ಅಂದಾಜಿಸಿ ಅದಕ್ಕಾಗಿ ಶ್ರಮಿಸುವುದು ಅವರ ಜಾಯಾಮನ. ಅದರಂತೆ ಪುತ್ತೂರಿನ ಸೇಡಿಯಾಪು ಎಂಬಲ್ಲಿ ಮೆಡಿಕಲ್ ಕಾಲೇಜಿಗಾಗಿ ಮೀಸಲಿಟ್ಟ ೪೦ ಎಕರೆ ಜಾಗದಲ್ಲಿ ಕಾಲೇಜಿಗೆ ಪೂರಕವಾಗಿ ಆಸ್ಪತ್ರೆಯ ನಿರ್ಮಾಣಕ್ಕೆ ಶಾಸಕರು ಮುಂದಾದರೆ, ಅಲ್ಲಿ ಆಸ್ಪತ್ರೆ ಬೇಡ ಎಂದು ಪುತ್ತೂರಿನ ಬಿಜೆಪಿ ನಾಯಕರು ಯೋಜನೆಗೆ ಅಡ್ಡಗಾಲು ಹಾಕುತ್ತಿರುವುದು ವಿಷಾದನೀಯ ಎಂದರು.ಈ ಹಿಂದೆ ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಜಾಗವನ್ನು ಮೆಡಿಕಲ್ ಕಾಲೇಜಿಗಾಗಿ ಮೀಸಲಿರಿಸುವ ಕಾರ್ಯ ನಡೆದಿದ್ದರೆ, ಈಗಿನ ಶಾಸಕರ ಸತತ ಪ್ರಯತ್ನದ ಫಲವಾಗಿ ಮೆಡಿಕಲ್ ಕಾಲೇಜು ಪುತ್ತೂರಿಗೆ ಮಂಜೂರಾಗಿದೆ. ಪುತ್ತೂರಿನ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರ ಮಹತ್ತರ ಕೊಡುಗೆ ನೀಡುತ್ತಿರುವುದು ಬಿಜೆಪಿಗರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇದೇ ಮೆಡಿಕಲ್ ಕಾಲೇಜಿಗಾಗಿ ಮೀಸಲಿರಿಸಲಾದ ಜಾಗದಲ್ಲಿ ಮೀನಿನ ಘಟಕ ತೆರೆಯಲು ಈ ಹಿಂದಿನ ಬಿಜೆಪಿ ಸರಕಾರ ಪ್ರಯತ್ನಿಸಿರುವುದನ್ನು ಜನ ಮರೆತ್ತಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳೀಧರ್ ರೈ ಮಠಂತಬೆಟ್ಟು, ಡಾ. ರಾಜಾರಾಮ ಕೆ.ಬಿ., ವಿಕ್ರಂ ಶೆಟ್ಟಿ ಅಂತರ, ಸೇಸಪ್ಪ ನೆಕ್ಕಿಲು, ಗಣೇಶ್ ಬಿಳಿಯೂರು ಉಪಸ್ಥಿತರಿದ್ದರು.
ಪುತ್ತೂರು ಮೆಡಿಕಲ್ ಕಾಲೇಜಿಗೆ ಬಿಜೆಪಿ ಅಡ್ಡಗಾಲು: ತೌಷಿಫ್ ಆರೋಪ
ಪುತ್ತೂರಿನ ಅಭಿವೃದ್ಧಿ ವಿಚಾರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರದ್ದು ದೂರಗಾಮಿ ಯೋಚನೆಯಾದರೆ , ಬಿಜೆಪಿಯ ಕೆಲ ಮುಖಂಡರು ಸ್ವಾರ್ಥ ಸಾಧನೆಯ ಚಿಂತನೆಯನ್ನು ಮಾತ್ರ ಹೊಂದಿದ್ದಾರೆ. ಮೆಡಿಕಲ್ ಕಾಲೇಜು ಇರುವಲ್ಲೇ ಆಸ್ಪತ್ರೆಯಾದರೆ ಉಂಟಾಗುವ ಅನುಕೂಲತೆಯನ್ನು ಗ್ರಹಿಸಲಾರದಷ್ಟು ಬಿಜೆಪಿ ಮುಖಂಡರು ಬುದ್ದಿಹೀನರಾಗಬಾರದು ಎಂದು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ., ತೌಷಿಫ್ ಹೇಳಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.