ಸಾರಾಂಶ
ಕಟ್ಟಡದ ಚಾವಣಿಯ ಮೇಲಿರುವ ಗೋಪಾರಾಕೃತಿಯ ಭಾಗವೂ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಸಂಚರಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಕುಂದಗೋಳ:
ಪಟ್ಟಣದ ತಹಸೀಲ್ದಾರ್ ಕಚೇರಿ ಕಟ್ಟಡದ ಗೋಪುರ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಇದರ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 1994ರ ಅವಧಿಯಲ್ಲಿ ಮಾಜಿ ಶಾಸಕ ದಿ. ಗೋವಿಂದಪ್ಪ ಜುಟ್ಟಲ್ ಅವರು ಉದ್ಘಾಟಿಸಿದ ಈ ಕಟ್ಟಡದಲ್ಲಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆ, ವಿವಾಹ ನೋಂದಾಣಾಧಿಕಾರಿಗಳ ಕಚೇರಿ, ಉಪ ಖಜಾನೆ ಕಾರ್ಯಾಲಯ, ದೃಢೀಕರಣ ನಕಲು ವಿತರಣಾ ವಿಭಾಗ, ಭೂ ಮಾಪನ ಇಲಾಖೆ, ಚುನಾವಣಾ ವಿಭಾಗ ಹೀಗೆ ಹಲವು ಇಲಾಖೆಗಳ ಕಚೇರಿಗಳು ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.ನಿತ್ಯವೂ ಗ್ರಾಮೀಣ ಪ್ರದೇಶಗಳಿಂದ ನೂರಾರು ಜನರು ಇಲ್ಲಿಗೆ ಬರುತ್ತಾರೆ. ಈ ಕಟ್ಟಡದ ಚಾವಣಿಯ ಮೇಲಿರುವ ಗೋಪಾರಾಕೃತಿಯ ಭಾಗವೂ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಸಂಚರಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಕಚೇರಿಯ ಸುತ್ತಲೂ ನೀರು ನಿಲ್ಲುತ್ತಿದೆ. ಒಳಗಡೆ ಶೌಚಾಲಯದ ಸ್ಥಿತಿಯಂತೂ ಹೇಳತೀರದಾಗಿದೆ. ಬರುವ ಜನರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯಿಲ್ಲ, ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಹೀಗೆ ಅವ್ಯವಸ್ಥೆಯಿಂದ ಕೂಡಿರುವ ಈ ಕಟ್ಟಡದ ದುರಸ್ತಿಗೆ ಈಗಲಾದರು ಕ್ರಮಕೈಗೊಳ್ಳಬೇಕು ಎಂದು ಕಚೇರಿ ಕೆಲಸಕ್ಕೆ ಆಗಮಿಸಿದ್ದ ಗ್ರಾಮೀಣ ಭಾಗದ ರಮೇಶ, ನಾಗರಾಜ, ಮುದುಕಪ್ಪ, ವೀರಭದ್ರಪ್ಪ ಎಂಬುವರು ಒತ್ತಾಯಿಸಿದ್ದಾರೆ.