ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುದಿ.ಆರ್. ಧ್ರುವನಾರಾಯಣ ಅವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನಂಜನಗೂಡಿನಲ್ಲಿ ನಿರ್ಮಾಣವಾಗಿರುವ ರೇಲ್ವೆ ಮೇಲ್ಸೇತುವೆಗೆ ಧೀಮಂತ ರಾಜಕಾರಣಿ ವಿ. ಶ್ರೀನಿವಾಸಪ್ರಸಾದ್ ಅವರ ಹೆಸರು ನಾಮಕರಣಗೊಳಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ ಎಂದು ಶ್ರೀನಿವಾಸಪ್ರಸಾದ್ ಅವರ ಪುತ್ರಿ ಪ್ರತಿಮಾ ಪ್ರಸಾದ್ ಹೇಳಿದರು.ನಗರಸಭಾ ಆಡಳಿತ ಏರ್ಪಡಿಸಿದ್ದ ಪಟ್ಟಣದ ರೇಲ್ವೆ ಮೇಲ್ಸೇತುವೆಗೆ ವಿ. ಶ್ರೀನಿವಾಸ ಪ್ರಸಾದ್ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ನಂಜನಗೂಡು ಕ್ಷೇತ್ರಕ್ಕೆ ಹಲವಾರು ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ, ಅಂತೆಯೇ ಆರ್. ಧ್ರುವನಾರಾಯಣ್ ಕೂಡ ಈ ಭಾಗದ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಧ್ರುವನಾರಾಯಣ್ ಅವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನಂಜನಗೂಡಿನಲ್ಲಿ ನಿರ್ಮಾಣವಾಗಿರುವ ರೇಲ್ವೆ ಮೇಲ್ಸೇತುವೆಗೆ ವಿ. ಶ್ರೀನಿವಾಸಪ್ರಸಾದ್ ಹೆಸರನ್ನು ನಾಮಕರಣಗೊಳಿಸಿ ಇಬ್ಬರ ನಡುವಿನ ಬಾಂಧವ್ಯಕ್ಕೆ ಗೌರವ ಸಲ್ಲಿಸಿದ್ದಾರೆ, ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನಮ್ಮ ಕುಟುಂಬದ ಪರವಾಗಿ ನಾನು ಭಾಗವಹಿಸಿದ್ದೇನೆ, ಪ್ರಸಾದ್ ಮತ್ತು ಆರ್. ಧ್ರುವನಾರಾಯಣ್ ನಡುವೆ ಉತ್ತಮ ಬಾಂಧವ್ಯವಿತ್ತು, ರಾಜಕೀಯ ಹೊರತಾಗಿ ಎರಡು ಕುಟುಂಬ ವರ್ಗದವರು ಆ ಬಾಂಧವ್ಯವನ್ನು ಒಗ್ಗಟ್ಟಿನಿಂದ ಮುಂದುವರಿಸುವ ಮೂಲಕ ಗಟ್ಟಿಗೊಳಿಸುತ್ತೇವೆ ಎಂದರು.ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ವಿ. ಶ್ರೀನಿವಾಸ ಪ್ರಸಾದ್ ಅವರು ನಾಡುಕಂಡ ಧೀಮಂತ ಶ್ರೇಷ್ಠ ರಾಜಕಾರಣಿ, ಸಮಾಜದಲ್ಲಿ ಶೋಷಿತರ ದಿಟ್ಟ ಧ್ವನಿಯಾಗಿ ಜನಮನ್ನಣೆ ಗಳಿಸಿದ್ದರು. ಅವರ ದೂರದೃಷ್ಟಿ ಅವರ ಚಿಂತನೆಗಳು, ಕ್ಷೇತ್ರದಲ್ಲಿ ಅವರು ಮಾಡಿರುವ ಕೆಲಸಗಳ ಮೂಲಕ ಜೀವಂತವಾಗಿದೆ. ನಂಜನಗೂಡು ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ, ಈ ಹಿನ್ನೆಲೆ ಅವರಿಗೆ ಗೌರವ ಸೂಚಿಸುವ ಸಲುವಾಗಿ ನಗರಸಭಾ ಆಡಳಿತ ರೇಲ್ವೆ ಮೇಲ್ಸೇತುವೆ ಮತ್ತು ಈ ರಸ್ತೆಗೆ ವಿ. ಶ್ರೀನಿವಾಸ ಪ್ರಸಾದ್ ಹೆಸರನ್ನು ನಾಮಕರಣಗೊಳಿಸಿದೆ ನನ್ನ ತಂದೆ ಆರ್. ಧ್ರುವನಾರಾಯಣ್ ಅವರ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಹೆಸರನ್ನು ನಾಮಕರಣ ಗೊಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ, ನಾನು ಕಾನೂನು ಪದವಿಯ ವ್ಯಾಸಂಗದ ವೇಳೆ ಬೆಂಗಳೂರಿನ ಶ್ರೀನಿವಾಸಪ್ರಸಾದ್ ಅವರ ಶಾಸಕರ ಕೊಠಡಿಯಲ್ಲಿ ಉಳಿದು ಕೋಚಿಂಗ್ ಪಡೆದಿದ್ದೆ, ಆದ್ದರಿಂದ ನನ್ನ ಜೀವನದಲ್ಲೂ ಕೂಡ ವಿ. ಶ್ರೀನಿವಾಸ ಪ್ರಸಾದ್ ಅವರ ಕೊಡುಗೆ ಇದೆ. ಆದ್ದರಿಂದ ನಾನು ಕ್ಷೇತ್ರದ ಶಾಸಕರಾಗಿ ವಿ. ಶ್ರೀನಿವಾಸಪ್ರಸಾದ್ ಅವರ ಹೆಸರನ್ನು ಶಾಶ್ವತಗೊಳಿಸುವ ಕೆಲಸವನ್ನು ಮಾಡುತ್ತೇನೆ ಎಂದರು.ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಮಾರುತಿ, ರಾಮಸ್ವಾಮಿ, ಭರತ್ ರಾಮಸ್ವಾಮಿ, ಮುಖಂಡರಾದ ಯು.ಎನ್. ಪದ್ಮನಾಭರಾವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಸಿ.ಎಂ. ಶಂಕರ್, ಶ್ರೀಕಂಠನಾಯಕ, ವಾಲ್ಮೀಕಿ ನಿಗಮ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ನಗರಸಭಾ ಸದಸ್ಯರಾದ ಗಂಗಾಧರ್, ಎಸ್. ಪಿ. ಮಹೇಶ್, ಪ್ರದೀಪ್, ಗಾಯತ್ರಿ, ಜಿ.ಪಂ. ಮಾಜಿ ಸದಸ್ಯ ಲತಾಸಿದ್ದಶೆಟ್ಟಿ, ಶಶಿರೇಖಾ, ಮುಖಂಡರಾದ ದೊರೆಸ್ವಾಮಿ ನಾಯಕ, ಮುರುಗೇಶ್, ಕುಳ್ಳಯ್ಯ, ಅಬ್ದುಲ್ ಖಾದರ್, ಜಿ. ಬಸವರಾಜು, ಪುಟ್ಟಸ್ವಾಮಿ, ಡಿವೈಎಸ್ಪಿ ರಘು, ಇನ್ಸ್ಪೆಕ್ಟರ್ ರವೀಂದ್ರ, ಶ್ರೀನಿವಾಸಪ್ರಸಾದ್ ಅಭಿಮಾನಿ ಬಳಗದವರು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.