ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಬರ ಪರಿಸ್ಥಿತಿ ಇರುವುದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವ ಜೊತೆಗೆ ಗ್ರಾಪಂ ಮಟ್ಟದಲ್ಲಿ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಂಡು ಪ್ರತಿ ಮನೆಗೆ ತೆರಳಿ ಕೂಲಿ ಬೇಡಿಕೆ ಸಂಗ್ರಹಿಸುವುದು ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಭೆಗಳನ್ನು ಆಯೋಜಿಸಿ, ನರೇಗಾ ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮುದ್ದಿನ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ಇರುವುದರಿಂದ ಕೂಲಿ ಬಯಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ 15 ದಿನಗಳ ಒಳಗಾಗಿ ಕೆಲಸ ನೀಡಬೇಕು. ಒಂದು ವೇಳೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಕೆಲಸ ನೀಡದೇ ಇದ್ದಲ್ಲಿ ಅಂಥ ಫಲಾನುಭವಿಗಳಿಗೆ ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ಕೊಡಿಸಲು ಜಿಪಂ ಸಿಇಒ ಈಗಾಗಲೇ ಸೂಚನೆ ನೀಡಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬರ ನಿರ್ವಹಣೆಗೆ ಸರ್ವ ರೀತಿಯಿಂದಲೂ ಸನ್ನದ್ದರಾಗಿರಬೇಕು. ಪ್ರಗತಿ ಕುಂಠಿತ ಇರುವ ಗ್ರಾಮ ಪಂಚಾಯಿತಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು. ನರೇಗಾ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳ ಕುರಿತು ದಾಖಲೆಗಳನ್ನು ಸರ್ಕಾರದ ಆದೇಶದಂತೆ 21 ಚೆಕ್‌ಲಿಸ್ಟ್ ಪ್ರಕಾರ ಅನುಕ್ರಮವಾಗಿ ದಾಖಲೀಕರಣ ಮಾಡಬೇಕು ಎಂದರು.ರಾಜ್ಯ ಸರ್ಕಾರದ ಆದೇಶದಂತೆ ಕೂಸಿನ ಮನೆ (ಶಿಶುಪಾಲನಾ) ಕೇಂದ್ರಗಳನ್ನು ಆರಂಭಿಸಲು ತಿಳಿಸಿರುವುದರಿಂದ ನಮ್ಮ ತಾಲೂಕಿನಲ್ಲಿ ಒಟ್ಟು 7 ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಗುರಿ ಹೊಂದಿದ್ದು, ಈಗಾಗಲೇ ಇವುಗಳ ಸ್ಥಳ ಕಟ್ಟಡ ಪರಿಶೀಲನೆಯಾಗಿದ್ದು, ಕೇಂದ್ರದ ದುರಸ್ತಿ ಹಾಗೂ ಬಣ್ಣ ಹಚ್ಚಿ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಿ ಮಕ್ಕಳಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಿ ಅತಿ ತುರ್ತಾಗಿ ಪ್ರಾರಂಭಿಸಲು ತಿಳಿಸಿದರು.
2024-25ನೇ ಸಾಲಿನ ನರೇಗಾ ಯೋಜನೆಗೆ ಸಂಬಂಧಿಸಿದ ಎಲ್ಲ ಗ್ರಾಮ ಪಂಚಾಯಿತಿಗಳ ಕ್ರಿಯಾಯೋಜನೆ ಸಿದ್ಧಪಡಿಸಿ, ನಿಗದಿಪಡಿಸಿದ ನಮೂನೆಯಲ್ಲಿ ಡಿ.31ರ ಒಳಗಾಗಿ ತಾಲೂಕು ಪಂಚಾಯಿತಿಗೆ ಸಲ್ಲಿಸಲು ಸೂಚಿಸಿದರು.ನಂತರ ಗ್ರಾಪಂ ಸಿಬ್ಬಂದಿಗ ಅನುಮೋದನೆ, ಗ್ರಂಥಾಲಯ ಸಿಬ್ಬಂದಿ ಸಂಭಾವನೆ, ಆಸ್ತಿ ಸಮೀಕ್ಷೆ, ತೆರಿಗೆ ವಸೂಲಾತಿ, ಸಕಾಲ, ಇ-ಹಾಜರಾತಿ, ವಸತಿ ಯೋಜನೆ, ಹೆಚ್ಚುವರಿ ಮನೆಗಳ ಪ್ರಗತಿ ಸೇರಿ ವಿವಿಧ ಯೋಜನೆಗಳ ಕುರಿತು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಆನಂದ ಕೊಟ್ಯಾಳ, ತಾಪಂ ಅಧಿಕಾರಿಗಳು, ಸಿಬ್ಬಂದಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.