ಸಾರಾಂಶ
ಕಾಂಡನಕೊಲ್ಲಿ ಗ್ರಾಮದಲ್ಲಿ ಹುಲಿ ಸಂಚಾರ ಕುರುಹು ಕಂಡುಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಾಲೇರಿಯ ಬಿಜ್ಜಂಡ ಸುಬ್ರಮಣಿ ತೋಟದಿಂದ ಇಳಿದು ಮುದ್ವರ ಬೋಪಯ್ಯ ಅವರ ಗದ್ದೆಯಿಂದ ಬಾರಿಕೆ ತೋಟಕ್ಕೆ ಹೋಗಿರುವ ಸುಳಿವು ಸಿಕ್ಕಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸಮೀಪದ ಹಾಲೇರಿ ಕಾಂಡನಕೊಲ್ಲಿ ಗ್ರಾಮದಲ್ಲಿ ಹುಲಿ ಸಂಚಾರ ಕುರುಹು ಕಂಡುಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಾಲೇರಿಯ ಬಿಜ್ಜಂಡ ಸುಬ್ರಮಣಿ ತೋಟದಿಂದ ಇಳಿದು ಮುದ್ವರ ಬೋಪಯ್ಯ ಅವರ ಗದ್ದೆಯಿಂದ ಬಾರಿಕೆ ತೋಟಕ್ಕೆ ಹೋಗಿರುವ ಸುಳಿವು ಸಿಕ್ಕಿದೆ. ತೋಟದ ಮಾಲೀಕ ಯಶೋಧರ ಅವರು ವಾಕಿಂಗ್ ತೆರಳಿದಾಗ ಹುಲಿಯ ಹೆಜ್ಜೆಗುರುತು ಹಾಗೂ ರಕ್ತದ ಕಲೆಗಳು ಕಂಡು ಬಂದಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಲಿಖಿತ ಮಾಹಿತಿ ನೀಡಿದ್ದಾರೆ.ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.
.............ಆರೋಗ್ಯ ಉಚಿತ ತಪಾಸಣೆ, ರಕ್ತದಾನ ಶಿಬಿರ
ಆದಿಚುಂಚನಗಿರಿ ಆಸ್ಪತ್ರೆ ಮತ್ತು ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ 4ರಂದು ಕುಶಾಲನಗರದಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ ಕೆ ದಿನೇಶ್ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕುಶಾಲನಗರದ ಭಾರತ್ ಗ್ಯಾಸ್ ಕಚೇರಿ ಬಳಿ ಎಪಿಸಿಎಂಎಸ್ ಕಟ್ಟಡ ಸಭಾಂಗಣದಲ್ಲಿ ಅಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಶಿಬಿರ ನಡೆಯಲಿದೆ ಎಂದರು.ಶಿಬಿರದಲ್ಲಿ ಹೃದ್ರೋಗ ತಜ್ಞರು, ನರರೋಗ, ಮೂತ್ರಪಿಂಡ, ಮಧುಮೇಹ, ಕ್ಯಾನ್ಸರ್ ತಪಾಸಣೆ, ಸ್ತ್ರೀರೋಗ ತಜ್ಞರು ದಂತ ವೈದ್ಯ ತಜ್ಞರು ಮಕ್ಕಳ ತಜ್ಞರು ಸೇರಿದಂತೆ 100ಕ್ಕೂ ಅಧಿಕ ವೈದ್ಯಕೀಯ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದರು.
ಶಿಬಿರದಲ್ಲಿ ಇಸಿಜಿ ಮತ್ತು ರಕ್ತ ಪರೀಕ್ಷೆ ಉಚಿತವಾಗಿ ಮಾಡುವ ಮೂಲಕ ಔಷಧಿಗಳನ್ನು ನೀಡಲಾಗುವುದು ಎಂದರು.ವೈದ್ಯಕೀಯ ತಪಾಸಣೆ ನಡೆಸಿ ವ್ಯಾಧಿಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಿ ಅಗತ್ಯ ಬಂದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ತೆರಳಲು ಗುರುತಿನ ಚೀಟಿ ನೀಡಲಾಗುವುದು ಹಾಗೂ ಆಸ್ಪತ್ರೆ ವಾಹನದಲ್ಲಿಯೇ ಕರೆತಂದು ಹೆಚ್ಚಿನ ಚಿಕಿತ್ಸೆ ನೀಡಿ ಪುನಃ ವಾಪಸ್ ಕಳುಹಿಸಿಕೊಡಲಾಗುವುದು ಎಂದು ದಿನೇಶ್ ಮಾಹಿತಿ ನೀಡಿದರು.ಕುಶಾಲನಗರ ಸುತ್ತಮುತ್ತ ಗಿರಿಜನರ ಹಾಡಿಗಳಿಂದ ಶಿಬಿರಕ್ಕೆ ತೆರಳಲು ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.ಶಿಬಿರಾರ್ಥಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ ಎಂ ಪ್ರಕಾಶ್, ನಿರ್ದೇಶಕ ಮಧುಕುಮಾರ್ ಇದ್ದರು.