ಸಾರಾಂಶ
- ಆವರಗೆರೆ ಬಳಿ ಆದಿಶಕ್ತಿ ಶೋ ರೂಂ ಮುಂದೆ ನಿಲ್ಲಿಸಿದ್ದ ಕಾರುಗಳು ಜಖಂ । ₹2 ಲಕ್ಷಕ್ಕೂ ಅಧಿಕ ನಷ್ಟ - ಕರಿನಾಯ್ಕನಹಳ್ಳಿ ರುದ್ರೇಶ ಟ್ರ್ಯಾಕ್ಟರ್ ಚಲಾಯಿಸಿದ ವ್ಯಕ್ತಿ । ಸಾಲಾಗಿ ನಿಲ್ಲಿಸಲಾಗಿದ್ದ ಹೊಸ ಕಾರುಗಳು - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಂಠಪೂರ್ತಿ ಕುಡಿದು ಅಮಲಿನಲ್ಲಿ ತೇಲುತ್ತಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬ ಊರಿಗೆ ಮರಳುವ ಭರದಲ್ಲಿ ಶೋ ರೂಂ ಬಳಿ ಸರ್ವೀಸ್‌ಗೆ ತಂದು ನಿಲ್ಲಿಸಿದ್ದ ಕಾರುಗಳ ಮೇಲೆ ಟ್ರ್ಯಾಕ್ಟರ್ ನುಗ್ಗಿಸಿ ಘಟನೆ ಗುರುವಾರ ಮಧ್ಯಾಹ್ನ ನಗರದ ಆವರಗೆರೆ ಬಳಿ ನಡೆದಿದೆ. ಘಟನೆಯಿಂದ ನಾಲ್ಕೈದು ಕಾರುಗಳು ಜಖಂಗೊಂಡಿದ್ದು, ಕುಪಿತಗೊಂಡ ಶೋ ರೂಂ ಸಿಬ್ಬಂದಿ ಕುಡುಕನಿಗೆ ಅಮಲು ಇಳಿಯುವಂತೆ ಧರ್ಮದೇಟು ನೀಡಿದ್ದಾರೆ.ತಾಲೂಕಿನ ಕರಿನಾಯ್ಕನಹಳ್ಳಿ ಗ್ರಾಮದ ರುದ್ರೇಶ ಕುಡಿದು ಟ್ರ್ಯಾಕ್ಟರ್ ಚಾಲನೆ ಮಾಡಿದ ಮಹಾರಾಯ. ಅಮಲಿನಲ್ಲಿದ್ದ ರುದ್ರೇಶ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಆವರಗೆರೆ ಸಮೀಪದ ಟಾಟಾ ಮೋಟಾರ್ಸ್‌ನ ಶ್ರೀ ಆದಿಶಕ್ತಿ ಕಾರ್ ಶೋ ರೂಂ ಮುಂದೆ ಬಂದಿದ್ದಾನೆ. ಈ ವೇಳೆ ಕಾರುಗಳಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿದ್ದಾನೆ.
ಕರಿನಾಯ್ಕನಹಳ್ಳಿಯಿಂದ ಬೆಳಗ್ಗೆ ಟ್ರ್ಯಾಕ್ಟರ್ ಸರ್ವೀಸ್‌ಗೆಂದು ರುದ್ರೇಶ ಹೋಗಿದ್ದು, ಕೆಲಸ ತಡವಾಗುತ್ತದೆ ಎಂಬ ಕಾರಣಕ್ಕೆ ಉರಿಬಿಸಿಲಿನಲ್ಲಿ ಮದ್ಯ ಸೇವನೆ ಮಾಡಿದ್ದಾನೆ. ಈ ಮಧ್ಯೆ ಟ್ರ್ಯಾಕ್ಟರ್ ಸರ್ವೀಸ್ ಕೆಲಸವೂ ಆಗಿದೆ. ಅಮಲೇರಿದ್ದರೂ ರುದ್ರೇಶ ಟ್ರ್ಯಾಕ್ಟರ್ ಪಡೆದುಕೊಂಡು ತನ್ನೂರು ಕರಿನಾಯ್ಕನಹಳ್ಳಿಗೆ ವಾಪಸಾಗಲು ಹೊರಟಿದ್ದಾನೆ. ಜನದಟ್ಟಣೆ, ವಾಹನ ದಟ್ಟಣೆಯಿದ್ದರೂ ನಗರದಲ್ಲಿ ಎಲ್ಲಿಯೂ ಸಣ್ಣ ಅಪಘಾತವೂ ಆಗದಂತೆ ಸಾಗಿದ್ದಾನೆ. ಆದರೆ, ಆವರಗೆರೆ ಗ್ರಾಮ ಹಾದುಹೋಗುವಾಗ ಟಾಟಾ ಮೋಟಾರ್ಸ್‌ನ ಆದಿಶಕ್ತಿ ಶೋ ರೂಂ ಮುಂದೆ ತಲುಪಿದ್ದಾನೆ. ಈ ವೇಳೆ ಬಿರುಬಿಸಿಲಿನ ಮಧ್ಯೆ ಅಮಲು ಹೆಚ್ಚಾಗಿ, ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿದೆ. ಪರಿಣಾಮ ಸಾಲು ಸಾಲಾಗಿ ನಿಲ್ಲಿಸಿದ್ದ ಹೊಸ ಕಾರುಗಳು, ಸರ್ವೀಸ್‌ಗೆ ಬಂದಿದ್ದ ಕಾರುಗಳಿಗೆ ಟ್ರ್ಯಾಕ್ಟರ್ ಗುದ್ದಿಸಿದ್ದಾನೆ.ಘಟನೆಯಲ್ಲಿ 5 ಕಾರುಗಳು ಜಖಂಗೊಳ್ಳುವಂತೆ ಮಾಡಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ, ಗಂಭೀರ ಅಪಾಯಗಳು ಆಗಿಲ್ಲ. ಟ್ರ್ರ್ಯಾಕ್ಟರ್ ಗುದ್ದಿದ ರಭಸಕ್ಕೆ ಕಾರುಗಳಂತೂ ಸಾಕಷ್ಟು ಜಖಂ ಆಗಿವೆ. ಐದೂ ಕಾರುಗಳ ಡೋರ್, ಬ್ಯಾನೆಟ್, ಸಿಗ್ನಲ್ ಲೈಟ್ಸ್, ಗಾಜುಗಳು, ಬ್ರೇಕಿಂಗ್ ಲೈಟ್ಸ್‌ಗಳ ಭಾಗ ಡಿಕ್ಕಿಯಿಂದ ಜಖಂಗೊಂಡಿವೆ.
ಕಾರುಗಳಿಗೆ ಡಿಕ್ಕಿಹೊಡೆದ ಸದ್ದು ಕೇಳಿ ತಕ್ಷಣವೇ ಶೋ ರೂಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕೆಂಡಾಮಂಡಲವಾಗಿದ್ದರು. ಅಮಲಿನಲ್ಲಿ ತೇಲುತ್ತಿದ್ದ ಚಾಲಕ ರುದ್ರೇಶನನ್ನು ಹಿಡಿದು, ಧರ್ಮದೇಟು ನೀಡಿದರು. ಹಣ್ಣುಗಾಯಿ ನೀರುಗಾಯಿ ಆಗುವಂತೆ ಹೊಡೆದ ತಿಂದರೂ ಆತ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ಅಮಲಿನಲ್ಲಿ ತೇಲಾಡುತ್ತಿದ್ದ. ಕಡೆಗೆ ಪೊಲೀಸರಿಗೆ ಫೋನ್ ಮಾಡಿ, ರುದ್ರೇಶನನ್ನು ವಶಕ್ಕೆ ಒಪ್ಪಿಸಲಾಯಿತು. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ ₹2 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.ಆದಿಶಕ್ತಿ ಮೋಟಾರ್ಸ್ ಮುಂದೆ ಸರ್ವೀಸ್‌ಗೆ ವಾಹನ ತಂದಿದ್ದ ಮಾಲೀಕರು ತಮ್ಮ ವಾಹನಗಳ ಸ್ಥಿತಿ ಕಂಡು ಕಕ್ಕಾಬಿಕ್ಕಿಯಾಗಿದ್ದರು. ಕೆಲವರು ಆಗಷ್ಟೇ ಕಾರನ್ನು ತಂದು ನಿಲ್ಲಿಸಿದವರು, ಈಗಾಗಲೇ ಸರ್ವೀಸ್ ಆಗಿದ್ದ, ಆಗಬೇಕಿದ್ದ ವಾಹನಗಳ ಉಸ್ತುವಾರಿ ವಹಿಸಿದ್ದವರು ಕಾರುಗಳು ಜಖಂಗೊಂಡಿದ್ದು ಕಂಡು ಮನಸಿನಲ್ಲಿ ಕುದಿಯುತ್ತಿದ್ದರು. ಮುತುವರ್ಜಿಯಿಂದ, ಪ್ರೀತಿಯಿಂದ ನೋಡಿಕೊಂಡಿದ್ದ ಕಾರುಗಳಿಗೆ ಬಂದೊದಗಿದ ದುಸ್ಥಿತಿ ಕಂಡು ರುದ್ರೇಶನನ್ನು ಶಪಿಸಿದರು.
- - - - 30ಕೆಡಿವಿಜಿ1, 2, 3, 4:ದಾವಣಗೆರೆಯ ಆವರಗೆರೆ ಬಳಿ ಟಾಟಾ ಮೋಟಾರ್ಸ್‌ನ ಆದಿಶಕ್ತಿ ಶೋ ರೂಂ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಟ್ರಾಕ್ಟರ್ ಡಿಕ್ಕಿ ಹೊಡೆದು, ಜಖಂಗೊಂಡಿರುವುದು. -30ಕೆಡಿವಿಜಿ5, 6:
ಅಮಲಿನಲ್ಲಿ ತೇಲುತ್ತಿರುವ ಟ್ರ್ಯಾಕ್ಟರ್ ಚಾಲಕ ರುದ್ರೇಶ.