ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು/ಸಿಂಧನೂರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಹೋರಾಟ-ಕರ್ನಾಟಕ, ಎಸ್ಕೆಎಂ-ಜೆಸಿಟಿಯು ಜಿಲ್ಲಾ ಸಮಿತಿಯಿಂದ ರಾಯಚೂರಿನಲ್ಲಿ ಮತ್ತು ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿ ಸಿಂಧನೂರು ತಾಲೂಕು ಘಟಕದ ವತಿಯಿಂದ ನಗರದಲ್ಲಿ ಜನತಾ ಗಣರಾಜ್ಯೋತ್ಸವ ಟ್ರ್ಯಾಕ್ಟರ್‌ಗಳ ಪೆರೇಡ್ ನಡೆಸಲಾಯಿತು.ಉಭಯ ನಗರಗಳ ಪ್ರಮುಖ ರಸ್ತೆ, ವೃತ್ತಗಳಲ್ಲಿ ರೈತರು, ಕಾರ್ಮಿಕರು ಟ್ರ್ಯಾಕ್ಟರ್‌ಗಳ ಪೆರೇಡ್ ಉದ್ದಕ್ಕೂ ಹಲಗೆ ಬಾರಿಸುತ್ತಾ ಘೋಷಣೆ ಕೂಗಿದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೊಳಿಸಬೇಕು. ರಾಜ್ಯದಲ್ಲಿ ಜಾರಿಗೊಳಿಸಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಹಾಗೂ ಕೃಷಿ ಪಂಪ್ಸೆಟ್‌ಗೆ ಉಚಿತ ವಿದ್ಯುತ್ ರದ್ದುಪಡಿಸುವ ವಿದ್ಯುತ್ ತಿದ್ದುಪಡಿ ಮಸೂದೆ-2022ನ್ನು ರದ್ದುಪಡಿಸಬೇಕು. ಕೃಷಿ ಸಬ್ಸಿಡಿ ಕಡಿತ ಮಾಡಿರುವುದನ್ನು ಹಿಂಪಡೆಯಬೇಕು. ಸಾಲ ನೀಡಿದ ಬ್ಯಾಂಕ್‌ಗಳು ರೈತರ ಆಸ್ತಿಗಳನ್ನು ಜಪ್ತಿ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಮತ್ತು ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ದೆಹಲಿ ಹೋರಾಟದಲ್ಲಿ ರೈತರ ಮೇಲೆ ಹಾಕಿರುವ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ರಾಯಚೂರಿನ ಪೆರೇಡ್‌ನಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಖಾಜಾ ಅಸ್ಲಂ ಅಹಮ್ಮದ್, ಕೆ.ಜಿ.ವಿರೇಶ್, ಪ್ರಭಾಕಾರ ಪಾಟೀಲ್, ಡಿ.ಎಸ್.ಶರಣಬಸವ, ದೇವರಾಜ ನಾಯಕ, ಆಂಜನೇಯ್ಯ ಕುರುಬದೊಡ್ಡಿ ಸೇರಿ ಅನೇಕರು ಇದ್ದರು.ಸಿಂಧನೂರಿನ ಹೋರಾಟದಲ್ಲಿ ಒಕ್ಕೂಟದ ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಬಾಷುಮಿಯಾ, ಶರಣಪ್ಪ ಮರಳಿ, ಎಸ್.ದೇವೇಂದ್ರಗೌಡ,ಮುಖಂಡರಾದ ವೆಂಕನಗೌಡ ಗದ್ರಟಗಿ, ಚಂದ್ರಶೇಖರ ಕ್ಯಾತನಟ್ಟಿ, ಅಮೀನಪಾಷಾ ದಿದ್ದಿಗಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.