ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ ಐತಿಹಾಸಿಕ ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿರುವ ಗೋಪಾಲಸ್ವಾಮಿ ಹೊಂಡ, ಹೊರ ಆವರಣದಲ್ಲಿರುವ ಸಿಹಿನೀರು ಹೊಂಡ, ಸಂತೆ ಹೊಂಡ ಎಲ್ಲವೂ ಭರ್ತಿಯಾಗಿವೆ. ಜಲಪಾತ್ರೆಗಳು ತುಂಬಿ ತುಳುಕಾಡುವ ದೃಶ್ಯಾವಳಿಗಳು ಒಂದೆಡೆ ಮನಸ್ಸಿಗೆ ಮುದ ನೀಡಿದರೆ ಮತ್ತೊಂದೆಡೆ ವ್ಯಾಪಾರಿಗಳ ಮನದಲ್ಲಿ ತಲ್ಲಣಗಳ ಸೃಷ್ಟಿಸಿವೆ. ಕನಿಷ್ಟ ಮೂರು ತಿಂಗಳು ದುಬಾರಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಾದ ಅನಿವಾರ್ಯತೆ ಅವರದ್ದಾಗಿದೆ. ಮೂವತ್ತು ವರ್ಷಗಳ ಹಿಂದೆ ಸಂತೆ ಹೊಂಡದ ಪಕ್ಕದಲ್ಲಿ ನಗರಸಭೆಗೆ ಸೇರಿದ ಆಸ್ತಿಯಲ್ಲಿ ಎಸ್‌ಎಲ್‌ಎನ್ ರಂಗಮಂದಿರವಿತ್ತು. ವರ್ಷದ ಆರು ತಿಂಗಳು ಇಲ್ಲಿ ನಾಟಕ ಕಂಪನಿಗಳು ನೆಲೆಯೂರಿ ಸಾಮಾಜಿಕ, ಐತಿಹಾಸಿಕ ನಾಟಕಗಳ ಪ್ರದರ್ಶನ ಮಾಡುತ್ತಿದ್ದವು. ಸಂತೆ ಹೊಂಡಕ್ಕೆ ಅಂಟಿಕೊಂಡಿದ್ದ ಈ ಜಾಗವನ್ನು ಪುರಪಿತೃಗಳು ನಿವೇಶನಗಳನ್ನಾಗಿ ವಿಂಗಡಿಸಿ ಬಹಿರಂಗ ಹರಾಜು ಮೂಲಕ ವಿಲೇ ಪಡಿಸಿದ ನಂತರ ಸಮಸ್ಯೆ ಎದುರಾಗಿದೆ. ಹರಾಜಿನಲ್ಲಿ ನಿವೇಶನಕೊಂಡ ಮಾಲೀಕರು ಸೆಲ್ಲರ್ ಒಳಗೊಂಡ ಬಹುಮಹಡಿ ವಾಣಿಜ್ಯ ಮಳಿಗೆ ನಿರ್ಮಿಸಿದಾಗಲೇ ಅವರಿಗೆ ಪಕ್ಕದಲ್ಲಿಯೇ ಇರುವ ಸಂತೆ ಹೊಂಡದ ನೆನಪಾಗಿದೆ. ಹೊಂಡ ಭರ್ತಿಯಾದಾಗ ಉತ್ತರ ಭಾಗದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಣ್ಣ ಸಣ್ಣ ತೂಬುಗಳ ಮಾದರಿಯ ಕೋಡಿಗಳ ನಿರ್ಮಿಸಲಾಗಿತ್ತು. ಇದರ ಮೂಲಕ ನೀರು ರಾಜ ಕಾಲುವೆ ಸೇರಿ ನಂತರ ಮಲ್ಲಾಪುರ ಕೆರೆಯತ್ತ ಮುಖ ಮಾಡುತ್ತಿತ್ತು. ಸಂತೆ ಹೊಂಡದ ಸುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳು ನಿರ್ಮಾಣವಾದಾಗ ನೀರು ಹೊರ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿ ಸೆಲ್ಲರ್‌ಗಳಲ್ಲಿ ಬಸಿಯ ತೊಡಗಿತು. ಪರಿಣಾಮ ಸೆಲ್ಲರ್‌ನಲ್ಲಿ ಸಂಗ್ರಹಿಸಿದ ವಾಣಿಜ್ಯ ವಹಿವಾಟಿನ ಎಲ್ಲ ಪರಿಕರಗಳು ನೀರಿನಲ್ಲಿ ತೇಲಲು ಶುರುವಾದವು. ಇದರಿಂದ ತಪ್ಪಿಸಿಕೊಳ್ಳಲು ವ್ಯಾಪಾರಸ್ಥರು ದಿನದ 24 ಗಂಟೆ ಮೋಟಾರು ಪಂಪು ಇಟ್ಟು ನೀರು ಹೊರ ಹಾಕಲು ಯತ್ನಿಸುತ್ತಿದ್ದಾರೆ. ಕೆಲವರಂತೂ ನೀರು ಹೊರ ಹಾಕುವ ಉಸಾಬರಿಯೇ ಬೇಡವೆಂದು ಸೆಲ್ಲರ್ ವಹಿವಾಟು ಮರೆತಿದ್ದಾರೆ. ಸದಾ ಒಂದುವರೆ ಅಡಿಯಷ್ಟು ಈ ಸೆಲ್ಲರ್‌ಗಳಲ್ಲಿ ನೀರು ಸಂಗ್ರಹವಾಗಿರುತ್ತದೆ. ಸಂತೆ ಹೊಂಡದ ಪಕ್ಕದಲ್ಲಿರುವ ಉದ್ಯಮಿ ಎಂ.ಎ.ಸೇತೂರಾಂ ಅವರ ಅಮೋಘ ಹೋಟೆಲ್ ನ ವಾಹನ ನಿಲುಗಡೆಯ ಸೆಲ್ಲರ್‌ನಲ್ಲಿ ಸದಾ ಒಂದು ಅಡಿ ನೀರು ನಿಂತಿರುತ್ತದೆ. ಮೋಟಾರು ಪಂಪುಗಳ ಮೂಲಕ ಹೊರ ಹಾಕಿದರೂ, ಮರಳಿ ನೀರು ಬಸಿದು ಸಂಗ್ರಹವಾಗುತ್ತದೆ. ಹಾಗಾಗಿ ಕಟ್ಟಡಕ್ಕೆ ಆಗುವ ಅಪಾಯ ತಪ್ಪಿಸಿಕೊಳ್ಳಲು ನಿತ್ಯ ಮೋಟರು ಪಂಪುಗಳ ಚಾಲನೆ ಮಾಡುವುದು ಅನಿವಾರ್ಯವಾಗಿದೆ. ಸಂತೆ ಹೊಂಡ ಮುಕ್ಕಾಲು ಭಾಗ ತುಂಬಿದಾಗ ಮಾತ್ರ ಈ ಸಮಸ್ಯೆ ಎದುರಾಗುತ್ತದೆ. ಅಲ್ಲಿಯ ತನಕ ವ್ಯಾಪಾರಸ್ಥರ ವಹಿವಾಟಿಗೆ ತೊಂದರೆ ಏನಿಲ್ಲ. ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಕೇವಲ ಹದಿನೈದು ದಿನದಲ್ಲಿ ಸಂತೆ ಹೊಂಡ ಭರ್ತಿಯಾಗಿತ್ತು. ಐತಿಹಾಸಿಕ ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿ ಮಳೆಯಾದರೆ ಮಾತ್ರ ಸಂತೆ ಹೊಂಡ ಭರ್ತಿಯಾಗುತ್ತೆ. ಗೋಪಾಲಸ್ವಾಮಿ ಹೊಂಡ ತುಂಬಿ ನಂತರ ತಣ್ಣೀರು ದೋಣಿ, ಒನಕೆ ಓಬವ್ವ ಕಿಂಡಿ ಮೂಲಕ ಹರಿದು ಬರುವ ನೀರು ಸಿಹಿನೀರು ಹೊಂಡ ಭರ್ತಿ ಮಾಡುತ್ತದೆ. ಈ ಹೊಂಡ ಕೋಡಿ ಬಿದ್ದ ನಂತರ ಪಾಳೆಗಾರರ ಕಾಲದಲ್ಲಿ ನಿರ್ಮಿಸಲಾದ ಸುರಂಗದ ಮೂಲಕ ಸಂತೆ ಹೊಂಡಕ್ಕೆ ಹರಿದು ಬರುತ್ತದೆ. ಜಲ ಸಂಗ್ರಹದ ಈ ಬಗೆಯ ಲಿಂಕ್ ರಾಜ್ಯದ ಬೇರಾವ ಪಟ್ಟಣದಲ್ಲಿಯೂ ಕಾಣಸಿಗದು. ಚಿತ್ರದುರ್ಗ ಕೋಟೆ ಒಳ ಆವರಣದಲ್ಲಿನ ಗುಡ್ದದಲ್ಲಿ ಬಸಿಯುವ ನೀರು ಸಂತೆಹೊಂಡಕ್ಕೆ ಬರುತ್ತಿರುವುದರಿಂದ ಅದು ಬೇಗ ಖಾಲಿಯಾಗದು. ಕನಿಷ್ಟ ಮೂರು ತಿಂಗಳಾದರೂ ವ್ಯಾಪಾರಸ್ಥರು ನೀರನ್ನು ಮೋಟಾರು ಪಂಪುಗಳ ಮೂಲಕ ಹೊರ ಹಾಕುವ ಸಾಹಸ ಮಾಡಲೇಬೇಕು.