ವರ್ತಕರು ಎಪಿಎಂಸಿ ಆವರಣಕ್ಕೆ ಮಳಿಗೆ ಸ್ಧಳಾಂತರಿಸಿ

| Published : Feb 06 2025, 12:15 AM IST

ವರ್ತಕರು ಎಪಿಎಂಸಿ ಆವರಣಕ್ಕೆ ಮಳಿಗೆ ಸ್ಧಳಾಂತರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ವರ್ತಕರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು

ಪಟ್ಟಣದ ವರ್ತಕರು ತಮ್ಮ ಮಳಿಗೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡುವ ಮೂಲಕ ಮಾದರಿ ಕೃಷಿ ಉತ್ಪನ್ನ ಮಾರುಕಟ್ಟೆ ಮಾಡಲು ಸಹಕಾರ ನೀಡಬೇಕು ಎಂದು ಎಪಿಎಂಸಿ ಆಡಳಿತಾಧಿಕಾರಿ ಹಾಗೂ ತಹಸಿಲ್ದಾರ್ ವೈ.ಕೆ. ಗುರುಪ್ರಸಾದ್ ಮನವಿ ಮಾಡಿದರು.

ಹನೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕರೆಯಲಾಗಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ವಿಶಾಲವಾದ 12 ಎಕರೆ ನಿವೇಶನದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ತೆರೆಯಲಾಗಿದೆ. ಆದರೆ ರೈತರು, ವರ್ತಕರ ಸಮನ್ವಯದ ಕೊರತೆಯಿಂದ ಪಾಳು ಬಿದ್ದಿದೆ. ಇದೀಗ ಸರ್ಕಾರ ಪ್ರತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿಯೂ ವ್ಯಾಪಾರ ವಹಿವಾಟು ನಡೆಸಬೇಕೆಂದು ಆದೇಶ ಹೊರಡಿಸಿರುವುದರಿಂದ ಪಟ್ಟಣದ ತರಕಾರಿ, ಹಣ್ಣು, ದಿನಸಿ ಮಾರಾಟ ಮಾಡುವ ವರ್ತಕರು ತಮ್ಮ ಮಳಿಗೆಗಳನ್ನು ಎಪಿಎಂಸಿಗೆ ಸ್ಥಳಾಂತರ ಮಾಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಎಪಿಎಂಸಿ ಸಹಾಯಕ ನಿರ್ದೇಶಕ ಬಸವಣ್ಣ ಮಾತನಾಡಿ, ಹನೂರು ನೂತನ ತಾಲೂಕಾದ ನಂತರ ಸರ್ಕಾರ ತಾಲೂಕಿಗೆ ಪ್ರತ್ಯೇಕ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ. ಪಟ್ಟಣದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಕಾರಣಾಂತರದಿಂದ ಸ್ಥಗಿತವಾಗಿದೆ. ಇದೀಗ ಪ್ರಾರಂಭಿಸಲು ಹಲವಾರು ಸಭೆ ನಡೆಸಿದರೂ ಪ್ರಯೋಜನವಾಗಿರಲಿಲ್ಲ, ಇದೀಗ ವರ್ತಕರು ತಮ್ಮ ಮಳಿಗೆಗಳನ್ನು ಸ್ಥಳಾಂತರ ಮಾಡಲು ಸಹಮತ ನೀಡಿರುವುದು ಸಂತಸ ತಂದಿದೆ. ಹನೂರು ಭಾಗದಲ್ಲಿ ಮುಸುಕಿನ ಜೋಳ ಹಾಗೂ ಅರಿಶಿನ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಈ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಟ್ಟು ರೈತರನ್ನು ಸದೃಢರಾಗಿ ಮಾಡಬೇಕೆಂಬುದು ನಮ್ಮ ಅಭಿಲಾಷೆಯಾಗಿದೆ. ಪಟ್ಟಣದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಅಂತರ ರಾಜ್ಯ ಗಡಿಗೆ ಹೊಂದಿಕೊಂಡಂತೆ ಇರುವುದರಿಂದ ರೈತರು ಹಾಗೂ ವರ್ತಕರು ಸಹಕರಿಸಿದರೆ ಉತ್ತಮ ಮಾರುಕಟ್ಟೆಯನ್ನಾಗಿ ಪರಿವರ್ತಿಸಬಹುದು. ರೈತರು ಬೆಳೆದ ಪದಾರ್ಥಗಳನ್ನು ನೇರವಾಗಿ ಮಾರುಕಟ್ಟೆಗೆ ತಂದು ಮಾರಾಟ ಮಾಡಿದರೆ ಅವರ ಆದಾಯವನ್ನು ದ್ವಿಗುಣ ಮಾಡಬಹುದು. ಬೇಡಿಕೆ ಹೆಚ್ಚಾದಂತೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆಯೂ ಸಿಗಲಿದೆ. ಈ ನಿಟ್ಟಿನಲ್ಲಿ ವರ್ತಕರು, ವ್ಯಾಪಾರಸ್ಥರಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಇಲಾಖೆ ಬದ್ಧವಾಗಿದ್ದು ಹಂತ ಹಂತವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.

ಎಪಿಎಂಸಿ ಕಾರ್ಯದರ್ಶಿ ನಾಗೇಶ್ ಮಾತನಾಡಿ, ಹನೂರು ಪಟ್ಟಣದಲ್ಲಿ ಮಾರುಕಟ್ಟೆ ಪ್ರಾರಂಭಿಸಲು ಈಗಾಗಲೇ ವರ್ತಕರ ಜೊತೆ ಚರ್ಚೆ ನಡೆಸಲಾಗಿದೆ ಮುಂದಿನ ದಿನಗಳಲ್ಲಿ ರೈತರು ಹಾಗೂ ರೈತ ಸಂಘದ ಅವರ ಜೊತೆ ಚರ್ಚೆ ನಡೆಸಿ ಅತಿ ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರಾರಂಭ ಮಾಡಲು ದಿನಾಂಕ ನಿಗದಿ ಮಾಡಲಾಗುವುದು. ಪಟ್ಟಣದ ಮಾರುಕಟ್ಟೆ ಅಭಿವೃದ್ಧಿಪಡಿಸಲು ಈಗಾಗಲೇ 14 ಕೋಟಿ ಹಣ ನೀಡುವಂತೆ ಇಲಾಖೆಗೆ ಮನವಿ ಮಾಡಲಾಗಿದೆ. ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ಇರುವುದರಿಂದ ಹೆಚ್ಚಿನ ಸಮಸ್ಯೆಯಾಗುವುದಿಲ್ಲ, ಉಳಿದಂತೆ ರಸ್ತೆ ಚರಂಡಿ ವಿದ್ಯುತ್ ದೀಪದ ಸೌಲಭ್ಯವನ್ನು ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅತಿ ಶೀಘ್ರದಲ್ಲಿಯೇ ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಪಟ್ಟಣದ ಬಹುತೇಕ ವರ್ತಕರು ತಮ್ಮ ಮಳಿಗೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡಲು ಒಪ್ಪಿಗೆ ಸೂಚಿಸಿದರು.

ಈ ವೇಳೆ ವರ್ತಕರು ಮಾತನಾಡಿ, ನಾವು ಮಳಿಗೆಗಳನ್ನು ಸ್ಥಳಾಂತರ ಮಾಡುತ್ತೇವೆ, ಹಣ್ಣು ತರಕಾರಿ ದಿನಸಿ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವ್ಯಾಪಾರಸ್ಥರನ್ನು ಕಡ್ಡಾಯವಾಗಿ ನಿಯಮದಂತೆ ಎಪಿಎಂಸಿಗೆ ಸ್ಥಳಾಂತರ ಮಾಡಬೇಕು ನೀವು ಎಲ್ಲರಿಗೂ ಒಂದೇ ಕಾನೂನು ಪಾಲನೆ ಮಾಡಿ ಆಗ ಉತ್ತಮ ಮಾರುಕಟ್ಟೆಯನ್ನಾಗಿ ಮಾಡಲು ನಮ್ಮ ಸಹಕಾರವು ಇರುತ್ತದೆ ಎಂದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಗಿರೀಶ್, ಮಹಾದೇಶ್, ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಗುಪ್ತ, ವರ್ತಕರಾದ ಎಲ್ ರಾಜೇಂದ್ರ, ರಾಜಣ್ಣ, ರಾಜೇಂದ್ರ ಗುಪ್ತ, ಮಹದೇವಸ್ವಾಮಿ, ಹರೀಶ್, ಪ್ರಕಾಶ್, ಶ್ರೀನಿವಾಸ್, ನಾಗೇಂದ್ರ, ಸಿದ್ದಪ್ಪ, ಸೋಮಶೇಖರ್ ಗುಪ್ತ, ಎಪಿಎಂಸಿ ಮಾರುಕಟ್ಟೆಯ ಎಫ್ ಡಿ ಎ ಪ್ರಕಾಶ್, ಮಾರುಕಟ್ಟೆ ಮೇಲ್ವಿಚಾರಕ ಶೇಖರ್ ರಾಜ್, ಸಿಬ್ಬಂದಿ ನವೀನ್ ಸೇರಿದಂತೆ ಇನ್ನಿತರರು ಹಾಜರಿದ್ದರು.