ಸಾರಾಂಶ
ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಪಾರಂಪರಿಕ ಹುತ್ತರಿ ಹಬ್ಬದ ಸಂಭ್ರಮಕ್ಕೆ ಕೊಡಗು ಸಜ್ಜಾಗಿದೆ. ಈ ಬಾರಿ ಡಿ.೧೪ರಂದು ಶನಿವಾರ ಹುಣ್ಣಿಮೆಯ ದಿನ ಕೊಡಗಿನಲ್ಲಿ ಹುತ್ತರಿ ಹಬ್ಬ ಆಚರಣೆಗೆ ಜಿಲ್ಲೆಯ ಮಂದಿ ಕಾತರರಾಗಿದ್ದಾರೆ.
ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮನೆ ಮಂದಿಯೆಲ್ಲಾ ಸಂಭ್ರಮದಿಂದ ಪಾಲ್ಗೊಂಡು ಆಚರಿಸುವ ಹುತ್ತರಿ ಹಬ್ಬ ಕೊಡಗಿನ ವಿಶೇಷ. ಕೊಡವ ನುಡಿಯ ಪುತ್ತರಿ (ಪುದಿಯ ಅರಿ) ಅಂದರೆ ಹೊಸ ಅಕ್ಕಿ. ಇದು ಕನ್ನಡದಲ್ಲಿ ಹುತ್ತರಿ ಎಂದಾಗಿದೆ. ವ್ಯವಸಾಯವನ್ನೇ ಮಾಡಿ ಬದುಕುವ ಬಹುತೇಕ ರೈತಾಪಿ ವರ್ಗ ಪೈರುಗಳು ಬೆಳೆದಾಗ ಶಾಸ್ತ್ರೋಕ್ತವಾಗಿ ಕುಯ್ದು ತಂದು ಮನೆ ತುಂಬಿಸಿಕೊಳ್ಳುವುದೇ ಈ ಹುತ್ತರಿ ಹಬ್ಬದ ವೈಶಿಷ್ಟ್ಯ. ಆಚರಣೆ ಹೇಗೆ?:ಮೊದಲು ಕುಟುಂಬದ ಹಿರಿಯ ಮನೆಮಂದಿಯೊಂದಿಗೆ ನೆರೆ ಕಟ್ಟುವ ಕಾರ್ಯದಲ್ಲಿ ತೊಡಗುತ್ತಾರೆ. ಆ ಬಳಿಕ ನಿಗದಿ ಪಡಿಸಿದ ಸಮಯಕ್ಕೆ ಗದ್ದೆಗೆ ತೆರಳಿ ಭತ್ತದ ಕದಿರುಗಳನ್ನು ಪೂಜಿಸಿ ಆ ಬಳಿಕ ‘ಪೊಲಿ ಪೊಲಿಯೇ ದೇವಾ’ ಎಂದು ಕೂಗುತ್ತಾ ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕತ್ತರಿಸಿ ತಂದು ದೇವಾಲಯವನ್ನು, ಮನೆಯನ್ನು ತುಂಬಿಕೊಳ್ಳುತ್ತಾರೆ. ಮತ್ತೊಂದೆಡೆ ಮಕ್ಕಳು, ಯುವಕರು ಪಟಾಕಿ ಸಿಡಿಸುವುದರಲ್ಲಿ ತಲ್ಲೀನರಾಗುತ್ತಾರೆ.
ಒಟ್ಟಿನಲ್ಲಿ ಎಲ್ಲೆಲ್ಲೂ ಪಟಾಕಿ, ಬಾಣ ಬಿರುಸುಗಳ ಸಂಭ್ರಮ. ಹುತ್ತರಿಯ ರಾತ್ರಿ ಸಮಯದ ಪರಿವೆಯೇ ಇಲ್ಲದೆ ವಿಶೇಷ ಊಟೋಪಚಾರಗಳು ನಡೆಯುತ್ತವೆ. ಹುತ್ತರಿಯಂದು ಅಡುಗೆ ವೈವಿಧ್ಯಮಯವಾಗಿದ್ದು. ಬಾಳೆಹಣ್ಣಿನಿಂದ ತಯಾರಿಸಿದ ‘ತಂಬಿಟ್ಟು’ ಸವಿಯುತ್ತಾರೆ.ಮೊದಲೆಲ್ಲ ಹುತ್ತರಿ ಹಬ್ಬವೆಂದರೆ ವಾರಗಟ್ಟಲೆ ಸಂಭ್ರಮ. ಹಬ್ಬ ಒಂದು ದಿನವಾದರೂ ಅದಕ್ಕೆ ಸಂಬಂಧಿಸಿದ ಆಚರಣೆಗಳೂ ವಾರಗಟ್ಟಲೆ ಜರಗುತ್ತಿದ್ದವು. ಹುತ್ತರಿಯ ನಂತರ ದಿನಗಳಲ್ಲಿ ಮಂದ್ ಎಂಬ ಊರ ಕ್ರೀಡಾಂಗಣದಲ್ಲಿ ಊರವರೆಲ್ಲರೂ ಸೇರಿ ಹಾಡುತ್ತಾ, ನೃತ್ಯ, ಕುಣಿತ ಮತ್ತು ಶೌರ್ಯ ಪ್ರದರ್ಶನ ಹೋರಾಟಗಳಲ್ಲಿ ನಿರತರಾಗಿರುತ್ತಿದ್ದರು. ಎರಡೂ ಕೈಗಳಲ್ಲಿ ಬೆತ್ತದ ಬಾರು ಕೋಲುಗಳನ್ನು ಹಿಡಿದು ಅವುಗಳನ್ನು ವಿವಿಧ ಭಂಗಿಗಳಲ್ಲಿ ಕ್ರಮಬದ್ಧವಾಗಿ ಬೀಸುತ್ತಾ ಕುಣಿಯುವ ಕೋಲಾಟ ‘ಹುತ್ತರಿ ಕೋಲಾಟ’ವೆಂದೇ ಪ್ರಸಿದ್ಧಿ ಪಡೆದಿದೆ.
ನಾಪೋಕ್ಲು ಬಿದ್ದಾಟಂಡ ವಾಡೆಯಲ್ಲಿ ಜನಪ್ರಿಯ ಹುತ್ತರಿ ಕೋಲಾಟ ನಡೆಯುತ್ತದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಹುತ್ತರಿ ಕೋಲಾಟ ನಡೆಯುತ್ತದೆ. ಕ್ರೀಡೆ, ಕುಣಿತಗಳು ವರ್ಷದಿಂದ ವರ್ಷಕ್ಕೆ ಗ್ರಾಮಾಂತರ ಪ್ರದೇಶಗಳಿಂದ ಕ್ಷೀಣಿಸಿದೆ ಎಂದರೆ ತಪ್ಪಲ್ಲ............
ಡಿ.14ರಂದು ಆಚರಣೆಗೆ ದಿನ ನಿಗದಿ‘ಹುತ್ತರಿ’ಯನ್ನು ಡಿ.೧೪ರಂದು ಆಚರಿಸಲು ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಇತ್ತೀಚೆಗೆ ದಿನ ನಿಗದಿಪಡಿಸಲಾಗಿದೆ.ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದ ಆವರಣದಲ್ಲಿ ನಾಡಿನ 13 ತಕ್ಕಮುಖ್ಯಸ್ಥರು, ದೇಗುಲದ ತಕ್ಕಮುಖ್ಯಸ್ಥರು ಭಕ್ತಜನ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಂಪ್ರದಾಯದಂತೆ ಅಮ್ಮಂಗೇರಿ ಜ್ಯೋತಿಷ್ಯರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹುತ್ತರಿ ದಿನ ಮತ್ತು ಆಚರಗೆ ಸಮಯ ನಿಗದಿಪಡಿಸಿದ್ದಾರೆ.
ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನವಾದ ಶನಿವಾರ ರಾತ್ರಿ ೭.೩೦ಕ್ಕೆ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ನೆರೆ ಕಟ್ಟುವುದು, ೮.೩೦ಕ್ಕೆ ಕದಿರು ಕೊಯ್ಯುವುದು ಮತ್ತು ೯.೩೦ ಗಂಟೆಗೆ ಪ್ರಸಾದ ಸ್ವೀಕಾರ ಮಾಡಲು ಶುಭ ಗಳಿಗೆಯಾಗಿರುವುದನ್ನು ನಿರ್ಧರಿಸಲಾಗಿದೆ.............
ಸಾರ್ವಜನಿಕ ಆಚರಣೆಸಂಪ್ರದಾಯದಂತೆ ಪಾಡಿ ಶ್ರೀ ಇಗ್ಗುತ್ತಪ್ಪದಲ್ಲಿ ಪ್ರಥಮವಾಗಿ ಹುತ್ತರಿ ಆಚರಣೆ ನಡೆದು ಬಳಿಕ ನಾಡಿನೆಲ್ಲೆಡೆ ಆಚರಿಸಲಾಗುತ್ತದೆ. ಅದರಂತೆ ಹುತ್ತರಿಯಂದು ರಾತ್ರಿ ೭.೫೦ ಕ್ಕೆ ನೆರೆ ಕಟ್ಟುವುದು, ೮.೫೦ ಕ್ಕೆ ಕದಿರು ಕೊಯ್ಯುವುದು ಮತ್ತು ೯.೫೦ ಕ್ಕೆ ಪ್ರಸಾದ ಸ್ವೀಕರಿಸುವ ಮೂಲಕ ನಾಡಿನಾದ್ಯಂತ ಸಂಭ್ರಮದ ಹುತ್ತರಿ ಆಚರಣೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಕಲಾಡ್ಚ ಹಬ್ಬ- ಹುತ್ತರಿಗೆ ಮುನ್ನಾ ದಿನವಾದ ಶುಕ್ರವಾರ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ವಾರ್ಷಿಕ ಕಲಾಡ್ಚ ಹಬ್ಬ ನಡೆಯಲಿದೆ.