ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ವನ್ಯಜೀವಿಗಳಿಂದ ಕೃಷಿ ಬೆಳೆ ಮತ್ತು ರೈತನ ಬದುಕನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿ ರೈತರು ಗುರುವಾರದಿಂದ ನಗರದ ಹೊರ ವಲಯದ ಅರಣ್ಯ ಇಲಾಖೆ ಕಚೇರಿ ಕಟ್ಟಡದ ಮೇಲ್ಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.ರಾಜ್ಯ ರೈತಸಂಘ ಹಾಗೂ ಸಮಾನ ಮನಸ್ಕರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ರೈತರು, ತಮ್ಮ ಪ್ರಮುಖವಾದ 21 ಬೇಡಿಕೆಗಳು ಈಡೇರುವವರೆಗೂ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಪಟ್ಟು ಹಿಡಿದರು.
ಈ ವೇಳೆ ರೈತ ಸಂಘ ಮುಖಂಡರಾದ ಪುಟ್ಟಸ್ವಾಮಿ ಮಾತನಾಡಿ, ಈವರೆಗೆ ಅರಣ್ಯ ಇಲಾಖೆಗೆ ಆರು ಮನವಿ ಪತ್ರಗಳನ್ನು ಸಲ್ಲಿಸಿದ್ದು, ಅವೆಲ್ಲವೂ ಅರಣ್ಯ ರೋಧನೆಯಾಗಿವೆ. ಬೆಳೆ ಮತ್ತು ರೈತನ ಬದುಕು ನಾಶವಾಗಿದೆ. ಒಂದು ತೆಂಗಿನ ಮರಕ್ಕೆ 2 ಸಾವಿರ ರು. ಪರಿಹಾರ ನಿಗದಿ ಮಾಡಲಾಗಿದೆ. ಇಲ್ಲಿವರೆಗೆ ಕೇವಲ 25 ಕೋಟಿ ರು. ಪರಿಹಾರ ಅಷ್ಟೇ ವಿತರಿಸಿದ್ದು, ಇದು ಭಿಕ್ಷೆ ನೀಡಿದಂತಾಗಿದೆ ಎಂದು ಟೀಕಿಸಿದರು.ಆನೆಗಳು ಇಲ್ಲಿಗೆ ಬರುತ್ತಿದ್ದರೆ ಅದಕ್ಕೆ ಅರಣ್ಯಾಧಿಕಾರಿಗಳ ಕರ್ತವ್ಯ ಲೋಪವೇ ಕಾರಣ. ಇದರಿಂದಾಗಿ ರೈತರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ರೇಲ್ವೆ ಬ್ಯಾರಿಕೇಡ್, ಸೋಲಾರ್ ತಂತಿ ಅಳವಡಿಸಿದ್ದರೂ ಆನೆಗಳು ಲಗ್ಗೆ ಇಡುತ್ತಲೇ ಇವೆ. ಇಟಿಎಫ್ ಮಾನಿಟರ್ ಸರಿಯಾಗಿ ಆಗುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಬೇಕು. ಅರಣ್ಯ ಇಲಾಖೆಗೆ ಪಂಚೇಂದ್ರಿಯಗಳಿದ್ದರೆ ಭರವಸೆ ನೀಡುವುದನ್ನು ಬಿಟ್ಟು ಸ್ಪಂದಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಬೆಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ರವರು, ಕಾಡಾನೆಗಳ ಹಾವಳಿ ನಿಯಂತ್ರಿಸಲು ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಈಗಿರುವ ಕಾಡಾನೆಗಳನ್ನು ಹಿಮ್ಮಟ್ಟಿಸುವ ಅಥವಾ ಸೆರೆ ಹಿಡಿಯುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು. ಕೊನೆಗೆ ಚನ್ನಪಟ್ಟಣ ಕ್ಷೇತ್ರ ಶಾಸಕ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಡಿ.14ರಂದು ಅರಣ್ಯಾಧಿಕಾರಿಗಳು ಹಾಗೂ ರೈತರ ಸಭೆ ನಡೆಸುವ ಆಶ್ವಾಸನೆ ನೀಡಿದ ಮೇರೆಗೆ ಪ್ರತಿಭಟನಾಕಾರರು ಧರಣಿ ಹಿಂಪಡೆದರು.ರೈತರ ಬೇಡಿಕೆಗಳೇನು?:
ವನ್ಯಜೀವಿಗಳ ಹಾವಳಿಯ ಕಾರಣ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೆರೆಕಟ್ಟೆ , ಜಲಾಶಯಗಳು ಹಾಗೂ ಪಂಪ್ ಸೆಟ್ ನೀರಾವರಿ ಭೂಪ್ರದೇಶಕ್ಕೆ ಒಳಪಟ್ಟ ಸುಮಾರು 12 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ವಿಸ್ತೀರ್ಣದ ಖುಷ್ಕಿ ಭೂಮಿಯನ್ನು ಆರೇಳು ವರ್ಷಗಳಿಂದ ಬೆಳೆ ಬೆಳೆಯಲಾಗದೆ ಬೀಳು ಬಿಡಲಾಗಿದೆ. ಅಲ್ಲದೆ, ಮಾನವ ಪ್ರಾಣ ಹಾನಿ, ಅಂಗ ಊನತೆಗಳು, ಜಾನುವಾರಗಳ ಹತ್ಯೆ, ನೀರಾವರಿ ಪರಿಕರಗಳು ಹಾಗೂ ತೋಟದ ಬೆಳೆಗಳ ನಾಶಕ್ಕೆ ಕೇವಲ 25 ಕೋಟಿ ರು. ಮಾತ್ರ ಪರಿಹಾರ ನೀಡಲಾಗಿದೆ ಎಂದು ಟೀಕಿಸಿದರು.ವನ್ಯಜೀವಿಗಳು ನಿರಂತರವಾಗಿ ಕೃಷಿ ಭೂಮಿಗೆ ದಾಂಗುಡಿ ಇಡುತ್ತಿರುವ ಪರಿಣಾಮ ವೈಜ್ಞಾನಿಕವಾಗಿ 1 ಸಾವಿರ ಕೋಟಿ ರು.ಗಳಿಗೂ ಹೆಚ್ಚು ನಷ್ಟವಾಗಿದೆ. 50 ಸಾವಿರಕ್ಕೂ ಹೆಚ್ಚು ನಷ್ಟದ ಅರ್ಜಿಗಳಿಗೆ 25 ಕೋಟಿ ಪರಿಹಾರ ನೀಡಿರುವುದು ಬಾಧಿತ ರೈತರಿಗೆ ಭಿಕ್ಷೆ ನೀಡಿದಂತಾಗಿದೆ. ವರ್ಷದಿಂದ ವರ್ಷಕ್ಕೆ ಆನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮುಂಗಾರು - ಹಿಂಗಾರು ಎನ್ನದೆ ಎಲ್ಲಾ ಋತುಮಾನಗಳಲ್ಲಿ ಆಕ್ರಮಣ ಮಾಡುತ್ತಿರುವ ಆನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆಗೆ ಸಾಧ್ಯವಾಗದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಕಾಡಾನೆಗಳನ್ನು ವ್ಯವಸ್ಥಿತವಾಗಿ ಹಿಮ್ಮಟ್ಟಿಸಲು ರಚಿಸಲಾದ ಆನೆ ಕಾರ್ಯಪಡೆಯಲ್ಲಿ ಕೇವಲ 24 ಕಾಲಾಳುಗಳನ್ನು ಹೊರತು ಪಡಿಸಿ ಉಳಿದ ಯಾವ ಅಧಿಕಾರಿಗಳೂ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದೊಂದು ನಾಮಕಾವಸ್ಥೆ ಮಾಡಿರುವ ಕಾರ್ಯಪಡೆ ಎನ್ನುವಂತಾಗಿದೆ. ಬನ್ನೇರುಘಟ್ಟ ಅಭಯಾರಣ್ಯ ಮತ್ತು ಕಾವೇರಿ ವನ್ಯಜೀವಿ ಧಾಮದ ಪಾತ್ರದಲ್ಲಿ ನಿರ್ಮಿಸಿರುವ ರೇಲ್ವೆ ಬ್ಯಾರಿಕೇಡ್, ಟೆಂಟಿಕಲ್ ಸೋಲಾರ್ , ಆನೆ ಕಂದಕಗಳನ್ನು ದಾಟಿ ಬರುತ್ತಿರುವ ಸಲಗಗಳು ಹಾಗೂ ಪುಂಡಾನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಯಾವ ತಾಂತ್ರಿಕ ಮಾನದಂಡ ಅನುಸರಿಸುತ್ತಿದೆ ಎಂದು ಧರಣಿ ನಿರತರು ಪ್ರಶ್ನಿಸಿದರು.ಈ ಜಿಲ್ಲೆಯಲ್ಲಿ ಸೆರೆ ಹಿಡಿಯಲಾಗಿದ್ದ ಎರಡು ಪುಂಡಾನೆಗಳು ವಾಪಸ್ ಇಲ್ಲಿಗೆ ಹೇಗೆ ಬಂದವು. ಆನೆಗಳ ಸಂತತಿ ಹೆಚ್ಚಾಗಿದ್ದು, ಇದಕ್ಕೆ ಅನುಗುಣವಾಗಿ ಅರಣ್ಯ ಭಾಗದಲ್ಲಿ ಅವುಗಳ ಆಹಾರ ಉತ್ಪಾದನೆಗೆ ಏನು ಕ್ರಮ ಕೈಗೊಂಡಿದ್ದೀರಿ. ಕಾಡು ಹಂದಿಗಳ ನಿಯಂತ್ರಣ ಮತ್ತು ಸಂತಾನ ಹರಣಕ್ಕೆ ಯಾವ ಕಾರ್ಯ ಯೋಜನೆ ರೂಪಿಸಿದ್ದೀರಿ ಎಂದು ಕೇಳಿದರು.
ಈ ಹಿಂದೆ ಸಿಸಿಎಫ್ ಮತ್ತು ಇತರೆ ಅಧಿಕಾರಿಗಳು ಮೂರು ತಿಂಗಳಲ್ಲಿ ಶಾಶ್ವತವಾಗಿ ಕಾಡಾನೆಗಳನ್ನು ಅವುಗಳ ಮೂಲ ನೆಲೆಗೆ ಹಿಮ್ಮಟ್ಟಿಸುವುದಾಗಿ ನೀಡಿದ್ದ ಭರವಸೆ ಏನಾಯಿತು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಸೂಚಿಸಲ್ಪಟ್ಟ 175 ಕಿ.ಮೀ ಬಾಕಿ ಇರುವ ಕಂದಕ, ಸೋಲಾರ್ ತಂತಿ ಬೇಲಿ, ರೆಬೆಲ್ ಸ್ಟೋನ್ ವಾಲ್ ಮತ್ತು ರೈಲ್ವೆ ಬ್ಯಾರಿಕೇಡ್ ಗಳ ಸುರಕ್ಷತಾ ಕಾರ್ಯಗಳ ಕಾರಣಕ್ಕೆ 100 ಕೋಟಿ ರು.ಗಳ ಅನುದಾನ ಅವಶ್ಯಕತೆ ಬಗ್ಗೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಧರಣಿ ನಿರತರು ಪ್ರಶ್ನೆ ಮಾಡಿದರು.ಧರಣಿಯಲ್ಲಿ ರೈತರಾದ ರವೀಂದ್ರ, ಹೊಂಬೇಗೌಡ, ಎಂ.ವೆಂಕಟೇಶ್ , ಸಿ.ಎಸ್.ಕುಮಾರ್ , ಶಿವಣ್ಣ, ಮಂಜುನಾಥ್ , ಅಂತೋಣಿರಾಜ್ , ಮಲ್ಲಿಕಾರ್ಜುನ್ , ಪುಟ್ಟಲಿಂಗೇಗೌಡ, ಚಿಕ್ಕಪುಟ್ಟೇಗೌಡ, ರಾಮಕೃಷ್ಣಯ್ಯ, ಮಲ್ಲಿಕಾರ್ಜುನ, ಕೃಷ್ಣೇಗೌಡ , ರಾಮಯ್ಯ, ವೆಂಕಟೇಶ್, ಸಿದ್ದರಾಜು, ಸಿದ್ದಯ್ಯ ಮತ್ತಿತರರು ಭಾಗವಹಿಸಿದ್ದರು.