ವಿಜಯನಗರ ಜಿಲ್ಲೆಯಲ್ಲಿ ಶ್ರದ್ಧಾ-ಭಕ್ತಿಯ ಮೊಹರಂ ಹಬ್ಬ ಆಚರಣೆ

| Published : Jul 18 2024, 01:42 AM IST

ಸಾರಾಂಶ

ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ವಿಜಯನಗರ ಜಿಲ್ಲೆಯಲ್ಲಿ ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಪೀರಲು ದೇವರ ಹಬ್ಬವನ್ನು ಕಳೆದ ಒಂಬತ್ತು ದಿನಗಳಿಂದ ಆಚರಿಸಿ ದೇವರನ್ನು ಗಂಗೆ ಸ್ಥಾನಕ್ಕೆ ಕಳುಹಿಸಿ ಸಂಪನ್ನಗೊಂಡಿತು.

ಹೊಸಪೇಟೆ: ಭಾವೈಕ್ಯತೆಯ ಪ್ರತೀಕ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಜಿಲ್ಲೆಯಲ್ಲಿ ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ಪೀರಲು ದೇವರ ಹಬ್ಬವನ್ನು ಕಳೆದ ಒಂಬತ್ತು ದಿನಗಳಿಂದ ಆಚರಿಸಿ ದೇವರನ್ನು ಗಂಗೆ ಸ್ಥಾನಕ್ಕೆ ಕಳುಹಿಸಿ ಸಂಪನ್ನಗೊಂಡಿತು.

ಹಬ್ಬದ ಹರಕೆ ತೀರಿಸಲು ನಗರದ ದೊಡ್ಡ ರಾಮಾಲಿ ಮಸೀದಿಗೆ ತೆರಳಿ, ಪೀರಲು ದೇವರಿಗೆ ಕೆಂಪು ಸಕ್ಕರೆ ನೈವೇದ್ಯ ಅರ್ಪಿಸಿ, ಭಕ್ತಿ ಪ್ರದರ್ಶನ ಮಾಡಿದರು. ಸಹಸ್ರಾರು ಜನರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಮಸೀದಿ ಮುಂದಿನ ಅಗ್ನಿಹೊಂಡದಲ್ಲಿ ಉಪ್ಪು ಹಾಕಿ ಹರಕೆ ಪೂರೈಸಿದರು. ಮಣ್ಣಿನ ಮಡಿಕೆಯಲ್ಲಿ ಬೆಲ್ಲದ ಹಾಲಿನ ನೈವೇದ್ಯ ಅರ್ಪಿಸಿದರು. ಅಚ್ಚಳ್ಳಿ-ಬಿಚ್ಚಳ್ಳಿ ಹಾಗೂ ಹುಲಿ ವೇಷಧಾರಿಗಳು ಹಲಗೆ ವಾದ್ಯಕ್ಕೆ ಕುಣಿದು ಕುಪ್ಪಳಿಸಿದರು. ದೇವಸ್ಥಾನದ ಹತ್ತಿರ ರಸ್ತೆ ಎರಡೂ ಬದಿಯಲ್ಲಿ ಹೂ-ಹಣ್ಣು, ಕೆಂಪು ಸಕ್ಕರೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿ ನಡೆಯಿತು. ಮಸೀದಿ ಮುಂಭಾಗದ ಅಗ್ನಿಹೊಂಡದಲ್ಲಿ ನಡೆದಾಡಿದ ನೂರಾರು ಭಕ್ತರು, ಭಕ್ತಿಯಿಂದ ಮೈಮರೆತರು. ಸಾವಿರಾರು ಭಕ್ತರು, ಅಗ್ನಿಹೊಂಡದಲ್ಲಿ ಪ್ರದಕ್ಷಿಣೆ ಹಾಕಿದರು. ಯುವಕರು-ಮಕ್ಕಳು ಹಲಗೆ ವಾದ್ಯಕ್ಕೆ ಹೆಜ್ಜೆ ಹಾಕಿ ಕೇಕೆ ಹಾಕಿದರು. ತಡರಾತ್ರಿ ಚಿತ್ತವಾಡ್ಗಿ ಸಣ್ಣ ರಾಮಾಲಿ ಸ್ವಾಮಿ ಹಾಗೂ ಇಲ್ಲಿನ ದೊಡ್ಡ ರಾಮಾಲಿ ಸ್ವಾಮಿ ಪೀರಲು ದೇವರು (ಪಂಜಾ) ಪರಸ್ಪರ ಮುಖಾಮುಖಿಯಾಗುವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು. ಹಿಂದೂ-ಮುಸ್ಲಿಂ ಜೊತೆಗೂಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಸಹೋದರತ್ವ ಭಾವ ಮೆರೆದರು. ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಮಸೀದಿಯಲ್ಲಿ ಇರುವ ಈರಣ್ಣ ದೇವರು ಹಾಗೂ ಪೀರಲು ದೇವರ ಎರಡೂ ದೇವರುಗಳಿಗೆ ಹಿಂದೂ-ಮುಸ್ಲಿಂ ಭಕ್ತರು ಜೊತೆಗೂಡಿ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.

ಪ್ರತಿಷ್ಠಾಪನೆ ಮಾಡಿದ ಎಲ್ಲ ಪೀರಲ ದೇವರಗಳನ್ನು ಮೆರವಣಿಗೆ ಮೂಲಕ ಬುಧವಾರ ತಮ್ಮ ತಮ್ಮ ಸಮೀಪದ ನದಿ, ಹಳ್ಳ ಹಾಗೂ ಕಾಲುವೆಗಳಲ್ಲಿ ವಿಸರ್ಜನೆ ಮಾಡಲಾಯಿತು. ಜಿಲ್ಲೆಯ ಆರು ತಾಲೂಕುಗಳಲ್ಲೂ ಮೊಹರಂ ಹಬ್ಬದ ಆಚರಣೆ ನಡೆಯಿತು. ಹೊಸಪೇಟೆಯ ಕಮಲಾಪುರ, ಮರಿಯಮ್ಮನಹಳ್ಳಿ, ಕಡ್ಡಿರಾಂಪುರ, ಕೆರೆ ತಾಂಡಾ ಸೇರಿದಂತೆ ವಿವಿಧೆಡೆ ಮೊಹರಂ ಹಬ್ಬ ಆಚರಣೆ ನಡೆಯಿತು.

ಇರಾನಿ ರಕ್ತದ ಮಡುವಿನಲ್ಲೇ ಕರ್ಬಲ್ ಆಚರಣೆ:

ನಗರದ ಚಿತ್ತವಾಡ್ಗಿಯಲ್ಲಿ ಬುಧವಾರ ಮೊಹರಂ ಹಬ್ಬದ ಕೊನೆ ದಿನದ ಸಂದರ್ಭದಲ್ಲಿ ಇರಾನಿಗಳು ಎದೆ ಬಡಿದುಕೊಂಡು ರಕ್ತವನ್ನು ಹರಿಸಿ ತಮ್ಮ ದೇವರುಗಳನ್ನು ಕರ್ಬಲ್‌ಗೆ ಕಳುಹಿಸಿದರು.

ಈ ಸಂದರ್ಭದಲ್ಲಿ ಇವರು ತಮ್ಮ ದೇವರನ್ನು ಕರ್ಬಲ್‌ಗೆ ಕಳುಹಿಸುವ ಹಿನ್ನೆಲೆಯಲ್ಲಿ ಭಾವುಕರಾಗಿ ತಮ್ಮ ಕೈ, ಕಾಲು ಮತ್ತು ದೇಹಗಳನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಚಿಮ್ಮುವ ರಕ್ತಕ್ಕೆ ಬಡಿದುಕೊಂಡು ತಮ್ಮ ದೇವರುಗಳನ್ನು ಕರ್ಬಲ್‌ಗೆ ಕರೆದೊಯ್ದರು. ನಗರದ ಚಿತ್ತವಾಡ್ಗಿಯ ಖಾಜಾ ನಗರದಲ್ಲಿರುವ ತಮ್ಮ ನಿವಾಸದ ಬಳಿ ಹತ್ತಾರು ಮೊಹರಂ ದೇವರನ್ನು ಕೂಡಿಸಿ ಆಚರಣೆ ಮಾಡಿದ ಇರಾನಿಗಳು ಮೊಹರಂ ಕೊನೆ ದಿನವಾದ ಬುಧವಾರ ಸಂಜೆ ಚಿತ್ತವಾಡ್ಗಿಯ ಮುಖ್ಯ ರಸ್ತೆಯಲ್ಲಿ ದೇವರುಗಳನ್ನು ಮೆರವಣಿಗೆ ಮಾಡಿ ಕರ್ಬಲ್‌ಗೆ ಕೊಂಡೊಯ್ದರು.