ಸಾರಾಂಶ
ಅಮರೇಶ ತಾಳಿಕೋಟಿ
ಕನ್ನಡಪ್ರಭ ವಾರ್ತೆ ರಾಯಬಾಗಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ರಸ್ತೆಗಳಲ್ಲಿ ಸಂಚಾರ ನಿಯಮ ಪಾಲನೆ ಕೂಡ ಆಗುತ್ತಿಲ್ಲ. ಸಹಜವಾಗಿ ಸವಾರರು ಸಂಚಾರ ನಡೆಸಲು ಕೂಡ ತೀವ್ರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದಕ್ಕೇನು ಪರಿಹಾರ ಎಂಬ ಆಲೋಚನೆ ಕೂಡ ಮುಖ್ಯವಾಗಿದೆ. ರಸ್ತೆ ಅಗಲೀಕರಣ, ಶಿಸ್ತು ಬದ್ಧ ಸಂಚಾರ, ರಸ್ತೆ ಮೇಲೆ ವ್ಯಾಪಾರವನ್ನು ಸ್ಥಗಿತ ಮಾಡುವುದು ಸೇರಿದಂತೆ ಹಲವಾರು ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯವರು ಕೈಗೊಳ್ಳಬೇಕಿದೆ.ರಾಯಬಾಗ ಪಟ್ಟಣದಲ್ಲಿ ಸಂಚಾರ ದಟ್ಟಣೆ ಮಿತಿಮೀರಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಪರದಾಡುವ ಪರಿಸ್ಥಿತಿ ಇದೆ. ವಾಹನ ಸಂಚಾರ ಇರುವ ರಸ್ತೆಗಳಲ್ಲಿಯೇ ವ್ಯಾಪಾರ ವಹಿವಾಟು ಆಗುತ್ತಿರುವುದರಿಂದ ಜನಜಂಗುಳಿಗೆ ಪ್ರಮುಖ ಕಾರಣವಾಗಿದ್ದು, ಟ್ರಾಫಿಕ್ ಜಾಮ್‌ಗೂಕ ಕಾರಣವಾಗಿದೆ. ವಾರದ ಆರು ದಿನಗಳ ಕಾಲ ಒಂದು ಕಥೆಯಾದರೆ, ವಾರದ ಸಂತೆ ಸೋಮವಾರ ದಿನದಂದು ಮತ್ತೊಂದು ಪರದಾಟ ಆರಂಭವಾಗುತ್ತದೆ. ಸಂತೆ ಇಲ್ಲದ ದಿನಗಳಲ್ಲಿ ಸಂಚಾರ ನಡೆಸುವುದೇ ದುಸ್ತರ. ಅಂತಹದರಲ್ಲಿ ಸಂತೆ ಇರುವ ದಿನದಂದು ಪಟ್ಟಣದಲ್ಲಿ ಹಾದುಹೋಗಲು ಜನರು ತೀವ್ರ ಹರಸಾಹಸ ಮಾಡಬೇಕಾಗುತ್ತದೆ. ಸಂತೆಯ ದಿನದಂದು ತರಕಾರಿ ಮಾರಾಟಗಾರರು ಹಾಗೂ ಗಾಡಾ ಮೇಲೆ ಮಾರಾಟ ಮಾಡುವ ಮಾರಾಟಗಾರರು ಚಿಂಚಲಿ ರಸ್ತೆ ಮತ್ತು ಹಾರೂಗೇರಿ-ಅಂಕಲಿ ಮುಖ್ಯ ರಸ್ತೆ ಮೇಲೆ ತಮ್ಮ ವ್ಯಾಪಾರ ಕೈಗೊಳ್ಳುತ್ತಾರೆ. ಇದರಿಂದ ವಾಹನ ಸವಾರರಿಗೆ ಮತ್ತು ಜನರಿಗೆ, ಶಾಲೆ ವಿದ್ಯಾರ್ಥಿಗಳಿಗೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ.ಯುವಕರ ಪರಿಸ್ಥಿತಿ ಹೀಗಾದರೆ ವೃದ್ಧರು ಮತ್ತು ಮಹಿಳೆಯರ ಪರಿಸ್ಥಿತಿಯಂತೂ ಹೇಳತೀರದು. ಅವರು ಕೂಡ ಪರದಾಡಿಕೊಂಡೇ ಹರಸಾಹಸ ಪಟ್ಟೇ ಮುಂದೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರ ನಡುವೆ ಇತ್ತೀಚಿಗೆ ಮಾರಾಟಗಾರರು ಬಸ್ ನಿಲ್ದಾಣವನ್ನು ಕೂಡ ತಮ್ಮ ವ್ಯಾಪಾರ ಮಳಿಗೆ ಮಾಡಿಕೊಂಡಿದ್ದಾರೆ. ಹೀಗಾಗಿ ಬಸ್ ನಿಲ್ದಾಣ ಒಳಗೆ ಬಸ್ ಬಂದು ಹೋಗಲು ಕೂಡ ತೀವ್ರ ಸಮಸ್ಯೆ ಉಂಟಾಗಿದೆ. ಇದರಿಂದ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗುತ್ತಿದೆ. ಹತ್ತುವುದು ಇಳಿಯುವುದು ಕೂಡ ತೊಂದರೆಯಾಗುತ್ತಿದ್ದು, ಬಸ್ ಸಂಚಾರಕ್ಕೂ ಅಡಚಣೆಯಾಗುತ್ತಿದೆ.ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡು ಬ್ಯಾಂಕ್‌ಗಳು, ಹೋಟೆಲ್‌ಗಳು ಇವೆ. ಇದರಿಂದಾಗಿ ಇಲ್ಲಿ ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲವಾಗಿದೆ. ಹೀಗಾಗಿ ಬ್ಯಾಂಕ್ ಮತ್ತು ಹೋಟೆಲ್‌ಗೆ ಬರುವ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿಯೇ ಅಡ್ಡಾದಿಡ್ಡಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಜನದಟ್ಟಣೆ ಹೆಚ್ಚಾಗಿ ಸಂಚಾರ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ.ಇದರ ನಡುವೆಯೇ ಪ್ರಸ್ತುತ ಕಬ್ಬು ನುರಿಸುವ ಹಂಗಾಮು ಕೂಡ ನಡೆಯುತ್ತಿದೆ. ಇದರಿಂದಾಗಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ಕೂಡ ಪಟ್ಟಣದ ರಸ್ತೆ ಮಧ್ಯದಲ್ಲಿ ಹಾದು ಹೋಗಬೇಕಿದೆ. ಒಂದು ವೇಳೆ ಅವರು ಅಲ್ಲಿಯೇ ಸಿಲುಕಿದರೆ, ಇನ್ನುಳಿದ ವಾಹನಗಳು ತಾಸುಗಟ್ಟಲೇ ನಿಲ್ಲಬೇಕಾದ ಪರಿಸ್ಥಿತಿ ಉದ್ಭವವಾಗುತ್ತದೆ. ಇಂತಹ ಸಮಯದಲ್ಲಿ ಆ್ಯಂಬುಲೆನ್ಸ್ ವಾಹನಗಳು ಬಂದರೆ ಮುಂದೆ ಹೋಗಲು ಜಾಗ ಕೂಡ ಇಲ್ಲದ ಪರಿಸ್ಥಿತಿ ಎದುರಾಗುತ್ತದೆ. ರಸ್ತೆಯಲ್ಲಿಯೇ ರೋಗಿಗಳು ನರಳಾಡುವ ಪರಿಸ್ಥಿತಿ ಇದೆ. ಸಂತೆ ದಿನ ಸಂಚಾರ ನಿಯಂತ್ರಣಕ್ಕಾಗಿ ಒಂದಿಬ್ಬರು ಪೊಲೀಸರು ಮಾತ್ರ ಇರುತ್ತಾರೆ. ಸಂತೆ ದಟ್ಟಣೆ ಕಂಡು ಅವರು ಕೂಡ ಏನೂ ಮಾಡದೇ ಮೂಕ ಪ್ರೇಕ್ಷಕರಂತೆ ನಿಂತಿರುತ್ತಾರೆ. ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯತ ಇಲಾಖೆಯವರು ಪಟ್ಟಣದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಮತ್ತು ಸಂತೆಗೆ ಬರುವ ಬೇರ ಗ್ರಾಮಗಳ ಗ್ರಾಮಸ್ಥರು ಕೂಡ ಒತ್ತಾಯಿಸುತ್ತಿದ್ದಾರೆ.