ಸಂಚಾರ ದುಸ್ತರ<bha>;</bha> ಜನರಿಗೆ ಸಂಚಕಾರ

| Published : Jan 12 2024, 01:45 AM IST

ಸಾರಾಂಶ

ಕಲಾದಗಿ-ಕಾಗವಾಡ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ಬನಹಟ್ಟಿಯಲ್ಲಿ ಇಕ್ಕಟ್ಟಾದ ರಸ್ತೆಯಿಂದ ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಬಕವಿಗೆ ಇರುವ ಇಕ್ಕಟ್ಟಾಗಿರುವ ವರಕವಿ ಈಶ್ವರ ಸಣಕಲ್ ಹೆಸರಿನ ಒಂದೇ ಮುಖ್ಯ ರಸ್ತೆಯಲ್ಲಿ ದಿನವಿಡೀ ಸಂಚಾರ ದಟ್ಟಣೆಯಾಗುತ್ತಿದೆ. ಹೀಗಾಗಿ ಇಲ್ಲಿ ಸಂಚಾರ ಎಂದರೆ ತೀರಾ ದುಸ್ತರವಾಗಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಲಾದಗಿ-ಕಾಗವಾಡ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ಬನಹಟ್ಟಿಯಲ್ಲಿ ಇಕ್ಕಟ್ಟಾದ ರಸ್ತೆಯಿಂದ ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಬಕವಿಗೆ ಇರುವ ಇಕ್ಕಟ್ಟಾಗಿರುವ ವರಕವಿ ಈಶ್ವರ ಸಣಕಲ್ ಹೆಸರಿನ ಒಂದೇ ಮುಖ್ಯ ರಸ್ತೆಯಲ್ಲಿ ದಿನವಿಡೀ ಸಂಚಾರ ದಟ್ಟಣೆಯಾಗುತ್ತಿದೆ. ಹೀಗಾಗಿ ಇಲ್ಲಿ ಸಂಚಾರ ಎಂದರೆ ತೀರಾ ದುಸ್ತರವಾಗಿದೆ.

ಈಗಾಗಲೇ ಆಸಂಗಿ ಕ್ರಾಸ್‌ನಿಂದ ವೈಭವ ಚಿತ್ರಮಂದಿರದವರೆಗೆ, ಎಸ್‌ಆರ್‌ಎ ಕಾಲೇಜಿನಿಂದ ಮಹಾಲಿಂಗಪೂರ ನಾಕಾದವರೆಗೆ ರಸ್ತೆ ಅಗಲೀಕರಣದೊಂದಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ವೈಭವ ಚಿತ್ರಮಂದಿರದಿಂದ ಕಾಲೇಜು ಮೈದಾನವರೆಗೆ ಸುಮಾರು ಒಂದೂವರೆ ಕಿಮೀನಷ್ಟು ರಸ್ತೆ ಅಗಲೀಕರಣಗೊಂಡಿಲ್ಲ. ಹೀಗಾಗಿ ನಗರದ ಮಧ್ಯಭಾಗದಲ್ಲಿ ದಿನಂಪ್ರತಿ ಸಂಚಾರ ನಡೆಸಲು ಜನತೆ ಹರಸಾಹಸಪಡುವಂತಾಗಿದೆ.

ಸ್ವಯಂಪ್ರೇರಿತ ಕಟ್ಟಡ ನಿರ್ಮಾಣ:

ಈಗಾಗಲೇ ಈ ಪ್ರದೇಶದಲ್ಲಿ ಜನತೆ ಸ್ವಯಂಪ್ರೇರಿತವಾಗಿ ಸರ್ಕಾರದ ನಿಯಮಾನುಸಾರ ಹಾಗೂ ಪ್ರಾಧಿಕಾರ ಅನುಮತಿಯಂತೆ ರಸ್ತೆಗೆ ಜಾಗ ಬಿಟ್ಟು ನ್ಯಾಯಬದ್ಧವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಈ ಮೊದಲಿದ್ದ ರಸ್ತೆ ಬದಿಯ ಕಟ್ಟಡಗಳು ಪಾಳು ಬೀಳುತ್ತಿವೆ. ರಸ್ತೆ ಅಗಲೀಕರಣದ ನಂತರ ಕೆಲವರು ಕಟ್ಟಡಗಳನ್ನು ನಿರ್ಮಿಸಿಕೊಳ್ಳಬೇಕೆಂಬ ವಿಚಾರದಲ್ಲಿದ್ದು, ಕಳೆದ ೧೫ ವರ್ಷಗಳಿಂದ ಈ ಭಾಗದಲ್ಲಿ ಅಗಲೀಕರಣ ಭರವಸೆ ಹಾಗೇ ಉಳಿದಿದೆ.

ಇತ್ತ ರಬಕವಿ ನಗರದಲ್ಲಿ ರಾಮಪುರ ಮಾರ್ಗವಾಗಿರುವ ವರಕವಿ ಈಶ್ವರ ಸಣಕಲ್ ರಸ್ತೆಯಲ್ಲಿ ದಶಕಗಳ ಹಿಂದೆ ಸಾರಿಗೆ ನಿಗಮದ ಎರಡು ಬಸ್‌ಗಳು ನಗರದ ಮಧ್ಯ ಸರಾಗವಾಗಿ ಸಂಚರಿಸುತ್ತಿದ್ದವು. ಆದರೀಗ ರಬಕವಿ ನಗರಕ್ಕಿರುವ ಒಂದೇ ಮುಖ್ಯ ರಸ್ತೆಯಲ್ಲಿ ಎರಡು ಟಂಟಂ ವಾಹನಗಳು ಸಂಚರಿಸಲಾಗದಷ್ಟು ಕಿರಿದಾಗಿದೆ. ಇದು ನಿತ್ಯ ಸಂಚಾರ ದಟ್ಟಣೆ ಆಗುತ್ತಿದೆ. ಹಾಗಾಗಿ ವ್ಯಾಪಾರ ವಹಿವಾಟಿಗಾಗಿ ಗ್ರಾಮೀಣ ಭಾಗಗಳಿಂದ ಬರುವ ಜನರು ಕೂಡ ಸಂಚಾರ ಅವ್ಯವಸ್ಥೆ ಕಂಡು ಕೆಂಡ ಕಾರುವಂತಾಗಿದೆ.

ಸಿಟಿಎಸ್ ಅಸ್ತಿತ್ವಕ್ಕೆ ಬಂದ ನಂತರ ಮುಂದಿನ ಸ್ಥಳ ಅತಿಕ್ರಮಣಗೊಂಡಿದೆ ಎನ್ನಲಾಗುತ್ತಿದೆ. ಆಡಳಿತ ನಡೆಸುವವರು ಅತಿಕ್ರಮಣಕಾರರಿಗೆ ತಿಳಿವಳಿಕೆ ಪತ್ರ ನೀಡಿ ಅವರ ಮೂಲ ಖರೀದಿ ದಸ್ತುಗಳ ಪ್ರಕಾರ ಜಾಗ ತೆರವುಗೊಳಿಸಲು ಸೂಚಿಸಬೇಕು. ಇಲ್ಲವಾದಲ್ಲಿ ತಮ್ಮ ಅಧೀನದ ನೋಂದಣಿ ಇಲಾಖೆಯಲ್ಲಿನ ಲಭ್ಯ ದಾಖಲೆಗಳನ್ನು ಬಳಸಿ ಅತಿಕ್ರಮಣ ತೆರವುಗೊಳಿಸಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ.

ಮುಖ್ಯ ರಸ್ತೆಯ ಅಗಲೀಕರಣಕ್ಕೆ ಬೇಕಾದ ಸ್ಥಳವನ್ನು ಸ್ವಾಧೀನಪಡಿಸಿಕೊಂಡಿರುವ ಒಂದೇ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಬೇಕು. ಈ ಹಿಂದೆ ಶಾಸಕ ಸಿದ್ದು ಸವದಿ ಮತ್ತು ಮಾಜಿ ಸಚಿವೆ ಉಮಾಶ್ರೀ ಈ ಬಗ್ಗೆ ಚಿಂತನೆ ಮಾಡಿದ್ದರಾದರೂ ಅದು ಇದೂವರೆಗೆ ಜಾರಿಗೊಂಡಿಲ್ಲ. ಹೀಗಾಗಿ ರಬಕವಿಯ ಈಶ್ವರ ಸಣಕಲ್ ರಸ್ತೆಯ ಅಗಲೀಕರಣಕ್ಕೆ ಶಾಸಕರು ಮುಂದಾಗಬೇಕೆಂಬುದು ರಬಕವಿ ಜನತೆಯ ಆಗ್ರಹವಾಗಿದೆ.

ರಾಜಕೀಯ ಇಚ್ಛಾಶಕ್ತಿ ಕೊರತೆ:

ಬನಹಟ್ಟಿಯ ಮಧ್ಯಭಾಗದಲ್ಲಿರುವ ಕುಡಚಿ-ಜಮಖಂಡಿ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ರಾಜಕೀಯ ಇಚ್ಛಾಶಕ್ತಿ ಎದ್ದು ಕಾಣುತ್ತಿದೆ. ಜನತೆ ಮಾನಸಿಕವಾಗಿ ರಸ್ತೆ ಅಗಲೀಕರಣಗೊಳ್ಳಲಿದೆ ಎಂದುಕೊಂಡು ಕಟ್ಟಡಗಳನ್ನೂ ಕೂಡ ಕಾನೂನುಬದ್ಧವಾಗಿಯೇ ಕಟ್ಟಿಕೊಂಡಿದ್ದಾರೆ. ರಸ್ತೆಗೆ ಸಮರ್ಪಕವಾಗಿ ಸ್ಥಳ ಒದಗಿಸಿಯೇ ಕಟ್ಟಡ ನಿರ್ಮಿಸಿದ್ದಾರೆ. ಆದರೆ ಇಲ್ಲಿಯವರೆಗೂ ಅಗಲೀಕರಣಗೊಳ್ಳದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ. ಈಗಂತೂ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಿದ್ದು, ದಿನಂಪ್ರತಿ ನೂರಾರು ಕಬ್ಬಿನ ಟ್ರ್ಯಾಕ್ಟರ್‌ಗಳು ಇದೇ ಮಾರ್ಗವಾಗಿ ಸಂಚರಿಸುತ್ತಿವೆ. ಸಣ್ಣ ಪುಟ್ಟ ಅಪಘಾತವಾದರೆ ಯಾರು ಹೊಣೆ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಅಲ್ಲದೆ, ಮಾರುಕಟ್ಟೆಗೆ ತೆರಳುವ ಮಹಿಳೆಯರು ಮಕ್ಕಳು ಹಾಗೂ ವೃದ್ಧರು ಹರಸಾಹಸ ಪಟ್ಟೇ ಮಾರುಕಟ್ಟೆಗೆ ಆಗಮಿಸಬೇಕಿದೆ.ರಸ್ತೆ ಅಗಲೀಕರಣವು ಬಹುದಿನಗಳ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ರಸ್ತೆ ಅಗಲೀಕರಣ ಕಾರ್ಯ ತಕ್ಷಣ ನಡೆಯಬೇಕು. ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಬೇಕಿದೆ.

-ಪ್ರಶಾಂತ ಕೊಳಕಿ, ಕಾರ್ಯದರ್ಶಿ, ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ, ಬನಹಟ್ಟಿ.

---------

ಬನಹಟ್ಟಿ ನಗರಕ್ಕೆ ಪರ್ಯಾಯವಾಗಿ ಹಲವಾರು ರಸ್ತೆಗಳಿವೆ. ಆದರೆ ರಬಕವಿ ನಗರಕ್ಕೆ ಇರುವ ಒಂದೇ ಮುಖ್ಯ ರಸ್ತೆಯಲ್ಲಿ ವಾಹನ ಮತ್ತು ಜನತೆ ಸಂಚರಿಸುವುದೇ ನಿತ್ಯದ ಸಾಹಸವಾಗಿದೆ. ಅತಿಕ್ರಮಣವಾಗಿದ್ದರೆ ತೆರವುಗೊಳಿಸಿ ಇಲ್ಲದಿದ್ದರೆ ರಸ್ತೆ ಅಗಲೀಕರಣಕ್ಕೆ ಸ್ಥಳ ವಶಕ್ಕೆ ಪಡೆಯುವು ಮೂಲಕ ಬಹು ವರ್ಷಗಳ ಜನತೆಯ ಬೇಡಿಕೆಯನ್ನು ಆಡಳಿತವೀರರು ಸಾಕಾರಗೊಳಿಸಬೇಕಿದೆ.

- ಚಿದಾನಂದ ಸೊಲ್ಲಾಪುರ, ಕನ್ನಡಪರ ಹೋರಾಟಗಾರರು, ರಬಕವಿ.