ಟ್ರಾಫಿಕ್ ಪೊಲೀಸರಿಂದ ಸಂಚಾರ ನಿಯಮದ ನಾಮಫಲಕ ಅಳವಡಿಕೆ

| Published : Aug 09 2025, 12:03 AM IST

ಸಾರಾಂಶ

.ಶಿರಸಿ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.

ಶಿರಸಿ: ಜನತೆಯ ಹಲವು ವರ್ಷದ ಬೇಡಿಕೆಯಂತೆ ಶಿರಸಿಯ ಟ್ರಾಫಿಕ್ ಪೊಲೀಸ್ ಠಾಣೆ ಕಳೆದ ೮ ತಿಂಗಳ ಹಿಂದೆ ಪ್ರಾರಂಭಗೊಂಡು ತನ್ನ ಸೇವೆಯನ್ನು ಜನತೆಗೆ ನೀಡುತ್ತಿದೆ. ಇದೀಗ ಸಂಚಾರ ಸೂಚನಾ ನಿಯಮಗಳ ನಾಮಫಲಕ ಅಳವಡಿಸುವ ಕಾರ್ಯ ಸಾಗುತ್ತಿದೆ.ಶಿರಸಿ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ವಾಹನ ಸಂಖ್ಯೆಯು ಹೆಚ್ಚಾಗುತ್ತಿರುವುದನ್ನು ಮನಗಂಡ ಹಿಂದಿನ ಸರ್ಕಾರ ಶಿರಸಿಗೆ ಟ್ರಾಫಿಕ್ ಠಾಣೆಯನ್ನು ಮಂಜೂರು ಮಾಡಿತ್ತು. ಆದರೆ ಕೆಲ ಕಾರಣಗಳಿಂದ ಆರಂಭಕ್ಕೆ ಹಿನ್ನೆಡೆಯಾಗಿತ್ತು. ಶಿರಸಿಗೆ ಮಂಜೂರಾದ ಟ್ರಾಫಿಕ್ ಠಾಣೆ ಆರಂಭಕ್ಕೆ ಶಾಸಕ ಭೀಮಣ್ಣ ನಾಯ್ಕ ಸರ್ಕಾರ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಮೇಲೆ ಒತ್ತಡ ಹೇರಿದ ಪರಿಣಾಮ ಹಾಗೂ ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರ ಮುತುವರ್ಜಿಯಿಂದ ಟ್ರಾಫಿಕ್ ಠಾಣೆಯು ಕಾರ್ಯಾರಂಭಗೊಂಡಿತು. ಮೊದಲ ಪಿಎಸ್‌ಐ ಆಗಿ ಅಧಿಕಾರ ವಹಿಸಿಕೊಂಡ ಮಹಾಂತಪ್ಪ ಕುಂಬಾರ ನೇತೃತ್ವದಲ್ಲಿ ನಗರದ ಕೆಲವು ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದರೂ ಕೆಲವು ಕಡೆಗಳಲ್ಲಿ ಬಾಕಿ ಉಳಿದಿತ್ತು. ಟ್ರಾಫಿಕ್ ಠಾಣೆಯ ನೂತನ ಪಿಎಸ್‌ಐ ಆಗಿ ಅಧಿಕಾರ ವಹಿಸಿಕೊಂಡ ದೇವೇಂದ್ರ ನಾಯ್ಕ ಇದೀಗ ಸಾರ್ವಜನಿಕರಲ್ಲಿ ವಾಹನ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾಮಫಲಕಗಳನ್ನು ಅಳವಡಿಸುತ್ತಿದ್ದಾರೆ.

ಏಕಮುಖ, ದ್ವಿಮುಖ ಸಂಚಾರ, ವಾಹನ ನಿಲುಗಡೆ ನಿಷೇಧ, ವಾಹನ ನಿಲುಗಡೆ ಸ್ಥಳ, ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಕ ಸೂಚನಾ ಫಲಕ, ಸ್ಕೂಲ್ ಝೋನ್ ಹೀಗೆ ಸುಮಾರು ೩೦ ಸಂಚಾರ ನಿಯಮಗಳ ನಾಮಫಲಕಗಳನ್ನು ನಗರದ ಕೆಲವು ಪ್ರಮುಖ ವೃತ್ತಗಳಲ್ಲಿ ಅಳವಡಿಸಲಾಗುತ್ತಿದೆ.

ನಗರದ ಅಂಚೆ ವೃತ್ತ, ಡ್ರೈವರ್ ಕಟ್ಟಾ, ಶಿವಾಜಿ ಚೌಕ, ಮಾರಿಕಾಂಬಾ ಕ್ರಾಸ್, ಝೂ ಸರ್ಕಲ್, ರಾಘವೇಂದ್ರ ಸರ್ಕಲ್, ಮರಾಠಿಕೊಪ್ಪ ಕ್ರಾಸ್, ಅಶ್ವಿನಿ ವೃತ್ತ, ಎಪಿಎಂಸಿ ಕ್ರಾಸ್, ಯಲ್ಲಾಪುರ ನಾಕಾ, ಚಿಪಗಿ ಸರ್ಕಲ್,ಕೋಟೆಕೆರೆ, ನಿಲೇಕಣಿ ಹೀಗೆ ವಾಹನ ದಟ್ಟಣೆ ಹೊಂದಿರುವ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಲಾಗಿದೆ ಎಂದು ತಿಳಿದು ಬಂದಿದೆ.

ಟ್ರಾಫಿಕ್ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ, ಎಎಸ್‌ಐಗಳಾದ ಹೊಸ್ಕಟ್ಟಾ, ಸಂತೋಷ ಸಿರ್ಸಿಕರ್ ನೇತೃತ್ವದಲ್ಲಿ ಸಿಬ್ಬಂದಿ ನಾಮಫಲಕ ಅಳವಡಿಸುವ ಕಾರ್ಯ ಕೈಗೊಂಡಿದ್ದಾರೆ.

ಶಿರಸಿಯಲ್ಲಿ ಆರಂಭಗೊಂಡ ಟ್ರಾಫಿಕ್ ಠಾಣೆಯಿಂದ ರಸ್ತೆ ಸಂಚಾರ ನಿಮಯಗಳ ಕುರಿತು ಜಾಗೃತಿ ಕಾರ್ಯ ನಡೆಸಲಾಗುತ್ತಿದೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಸವಾರರಿಗೆ, ಒನ್‌ವೇ ದಲ್ಲಿ ಸಂಚಾರ ಮಾಡುವವರಿಗೆ, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಟ್ರಾಫಿಕ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲ ಸವಾರರಿಂದ ಸಂಚಾರ ನಿಮಯಗಳ ಉಲ್ಲಂಘನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯದೊಳಗಡೆ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.