ಮೇದರಹಳ್ಳಿ ರೈಲ್ವೆ ಗೇಟ್ ಹತ್ತಿರ ಟ್ರಾಫಿಕ್ ಸಮಸ್ಯೆ

| N/A | Published : Jun 20 2024, 01:15 AM IST

ಸಾರಾಂಶ

ಕ್ಷೇತ್ರದ ಮೇದರಹಳ್ಳಿ ರೈಲ್ವೆ ಕ್ರಾಸ್ ಬಳಿ ಅನೇಕ ವರ್ಷಗಳಿಂದ ರೈಲುಗಳು ಚಲಿಸಿದ ಬಳಿಕ ಗೇಟ್ ತೆಗೆದ ಮೇಲೆ ಎರಡು ಕಡೆಯಿಂದ ವಾಹನ ಸವಾರರು ಅಡ್ಡಾದಿಡ್ಡಿ ಚಲಿಸಿ ಮತ್ತಷ್ಟು ಟ್ರಾಪಿಕ್ ಜಾಮ್‌ಗೆ ಕಾರಣವಾಗುತ್ತಿದ್ದು, ಕೆಲಸಗಳಿಗೆ ಹೋಗುವವರಿಗೆ ದಿನನಿತ್ಯ ಸಮಸ್ಯೆ ಎದುರಾಗುತ್ತಿದೆ.

 ಪೀಣ್ಯ ದಾಸರಹಳ್ಳಿ :  ಕ್ಷೇತ್ರದ ಮೇದರಹಳ್ಳಿ ರೈಲ್ವೆ ಕ್ರಾಸ್ ಬಳಿ ಅನೇಕ ವರ್ಷಗಳಿಂದ ರೈಲುಗಳು ಚಲಿಸಿದ ಬಳಿಕ ಗೇಟ್ ತೆಗೆದ ಮೇಲೆ ಎರಡು ಕಡೆಯಿಂದ ವಾಹನ ಸವಾರರು ಅಡ್ಡಾದಿಡ್ಡಿ ಚಲಿಸಿ ಮತ್ತಷ್ಟು ಟ್ರಾಪಿಕ್ ಜಾಮ್‌ಗೆ ಕಾರಣವಾಗುತ್ತಿದ್ದು, ಕೆಲಸಗಳಿಗೆ ಹೋಗುವವರಿಗೆ ದಿನನಿತ್ಯ ಸಮಸ್ಯೆ ಎದುರಾಗುತ್ತಿದೆ.

ಶೆಟ್ಟಿಹಳ್ಳಿ ಕಡೆಯಿಂದ ಮೇದರಹಳ್ಳಿ ಕಡೆ ಹಾಗೂ ಮೇದರಹಳ್ಳಿಯಿಂದ ಶೆಟ್ಟಿಹಳ್ಳಿಗೆ ವಾಹನಗಳು ಚಲಿಸಲು ಈ ರಸ್ತೆ ಅವಲಂಬಿಸಿದ್ದಾರೆ.

ಒಂದು ಬಾರಿ ಗೇಟ್‌ ಹಾಕಿದರೆ ನಂತರ ತೆಗೆದಾಗ ಒಮ್ಮೆಲೆ ವಾಹನಗಳ ದಟ್ಟಣೆಯಿಂದ ಶಬ್ದ ಮತ್ತು ವಾಯು ಮಾಲಿನ್ಯದ ಕಿರಿಕಿರಿ ಹೆಚ್ಚಾಗುತ್ತದೆ. ಇದರಿಂದ ತುರ್ತು ಕೆಲಸಗಳಿಗೆ ತೆರಳುವವರು ಮತ್ತಷ್ಟು ಸಮಸ್ಯೆಗೆ ಒಳಗಾಗಬೇಕಿದೆ. ಒಮ್ಮೆಲೇ ವಾಹನ ಸವಾರರು ನಾಮುಂದು, ತಾಮುಂದು ಎಂದು ಚಲಿಸಲಾರಂಭಿಸಿ ಮತ್ತಷ್ಟು ಟ್ರಾಪಿಕ್ ಉಂಟಾಗಿ ಮುಂದೆ ಚಲಿಸಲು ಕಿರಿಕಿರಿಯಾಗುತ್ತದೆ. ಹೀಗೆ ಚಲಿಸುವಾಗ ಅಕ್ಕ ಪಕ್ಕದ ವಾಹನಗಳಿಗೆ ತಾಗಿ ಜಗಳ ಮಾಡಿಕೊಂಡಿರುವ ಉದಾಹರಣೆಗಳು ಇವೆ ಎಂದು ಸ್ಥಳೀಯರು ತಿಳಿಸಿದರು.

ಒಂದರ ಹಿಂದೆ ಒಂದು ರೈಲು, ಗೂಡ್ಸ್ ಗಾಡಿ ರೈಲು ಬರುತ್ತಾ ಇರುತ್ತವೆ. ಆಗ 10 ನಿಮಿಷಕ್ಕೆ ಮುಂಚೆ ಗೇಟ್ ಹಾಕಲಾಗುತ್ತದೆ. ಈಗ 5ನಿಮಿಷಕ್ಕೆ ಒಂದು ರೈಲುಗಳು ಬರುತ್ತವೆ. ಈ ವೇಳೆ ಸಾಲುಗಟ್ಟಿ ನಿಂತ ವಾಹನ ಸವಾರರು ಬೆಳಗ್ಗೆ ಸಮಯದಲ್ಲಿ ಗಂಟೆಗಟ್ಟಲೆ ಕಿರಿಕಿರಿ ಅನುಭವಿಸಿದರೆ, ಮಧ್ಯಾಹ್ನದ ವೇಳೆ ಸುಡು ಬಿಸಿಲಿನಲ್ಲಿ 20 ನಿಮಿಷಗಳವರೆಗೂ ಕಾಯಬೇಕಾಗುತ್ತದೆ. ಮಳೆ ಬಂದರೆ ಆ ಭಾಗದಲ್ಲಿ ನಿಲ್ಲಲು ಜಾಗವಿಲ್ಲದೆ ಮಳೆಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಸಂಜೆಯಾದರೆ ಪ್ರತಿ 10 ನಿಮಿಷಕ್ಕೆ ಒಂದರಂತೆ ರೈಲುಗಳು ಬರುತ್ತವೆ. ಆಗ ರೈಲಿನ ಗೇಟ್ ದಾಟಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗುತ್ತದೆ. ಇದು ದಿನನಿತ್ಯದ ಸಮಸ್ಯೆಯಾಗಿ ಜನರು ಬೇಸತ್ತಿದ್ದಾರೆ.

ಪಕ್ಕದಲ್ಲಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಚಾಲನೆಯಲ್ಲಿದ್ದು, ಕಾಮಗಾರಿಯ ವಿಳಂಬದಿಂದ ವಾಹನ ಚಾಲಕರು ರೈಲ್ವೆ ಹಳಿ ಕ್ರಾಸ್ ಮಾಡಲು ಹೈರಾಣ ಆಗುತ್ತಿದ್ದಾರೆ. ರೈಲ್ವೆ ಕ್ರಾಸ್‌ನಲ್ಲಿ ಹಳಿಗಿಂತ ಮುಂಚೆ ರಸ್ತೆಗಳಲ್ಲಿ ರಸ್ತೆ ವಿಭಜಕ ಅಳವಡಿಸುವುದರಿಂದ ವಿರುದ್ದ ದಿಕ್ಕಿನಿಂದ ಬರುವ ವಾಹನಗಳು ಅಡ್ಡದಿಡ್ಡಿ ಬರುವುದನ್ನು ತಪ್ಪಿಸಿದಂತಾಗುತ್ತದೆ. ಎದುರು ಬರುವ ವಾಹನಗಳು ಸರಾಗವಾಗಿ ಚಲಿಸಬಹುದಾಗಿದೆ ಎಂಬುದು ಸ್ಥಳೀಯರ ವಾದ.

ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದಗೌಡ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಿಸಿದ್ದರು. ಬಳಿಕ ಜನರ ಉಪಯೋಗಕ್ಕೆ ಬಾರದೆ ನಿಂತಲ್ಲೆ ನಿಂತಾಗಿದೆ. ಈಗ ಅಂಡರ್ ಪಾಸ್ ಮಳೆ ನೀರು ತುಂಬಿಕೊಂಡು ಕೆಟ್ಟವಾಸನೆ ಬೀರುತ್ತಿದೆ. ಅಲ್ಲದೆ ಸೊಳ್ಳೆಗಳು ತುಂಬಿಕೊಂಡು ಜನರ ಆರೋಗ್ಯ ಕೆಡುವಂತಾಗಿದೆ‌. ಅಂಡರ್ ಪಾಸ್‌ಗೆ ಚಾಲನೆ ನೀಡಿದರೆ ಟ್ರಾಫಿಕ್ ಸಮಸ್ಯೆ ತಪ್ಪುತ್ತದೆ.

ನಾನು ಎರಡನೇ ಬಾರಿ ಶಾಸಕನಾದ ಮೇಲೆ ಆಂಡರ್ ಪಾಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದೆ. ಅದರೆ ಹಿಂದಿನ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡದೆ ನೆನಗುದಿಗೆ ಬಿದ್ದಿದೆ. ಈಗ ಕೇಂದ್ರ ರೈಲ್ವೆ ಸಚಿವರಾಗಿ ವಿ.ಸೋಮಣ್ಣ ಅವರಿದ್ದಾರೆ. ಅವರ ಗಮನಕ್ಕೆ ತಂದು ಬೇಗ ಕೆಲಸವಾಗುವಂತೆ ಮಾಡುತ್ತೇನೆ.

-ಎಸ್.ಮುನಿರಾಜು, ಶಾಸಕ.

Read more Articles on