ಮೈಸೂರು-ಬೆಳಗಾವಿ ಮದ್ಯೆ ಸಂಚರಿಸುವ ವಿಶ್ವ ಮಾನವ ರೈಲು । ಪ್ರಯಾಣಿಕರಿಂದ ರೇಲ್ವೆ ಸ್ಟೇಷನ್‌ ಮಾಸ್ಟರ್‌ಗೆ ತರಾಟೆ

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ತಾಲೂಕಿನ ರಾಮಗಿರಿ ಸ್ಟೇಷನ್‌ನಲ್ಲಿ ನಿಲ್ಲಿಸಬೇಕಾಗಿದ್ದ ರೈಲು ವೇಗವಾಗಿ ಮುಂದೆ ಸಾಗಿದ್ದರಿಂದ ಅಲ್ಲಿ ಇಳಿಯಬೇಕಾಗಿದ್ದ ಪ್ರಯಾಣಿಕರು ರೈಲಿನ ಚೈನು ಎಳೆದು ನಿಲ್ಲಿಸಿ ನಿಲ್ದಾಣದಲ್ಲಿ ಇಳಿದ ಘಟನೆ ರಾಮಗಿರಿಯಲ್ಲಿ ನಡೆದಿದೆ.

ಮೈಸೂರು-ಬೆಳಗಾವಿ ಮದ್ಯೆ ಸಂಚರಿಸುವ ವಿಶ್ವ ಮಾನವ ( 20675 / 20676) ವೇಗದೂತ ರೈಲಿಗೆ ರಾಮಗಿರಿಯಲ್ಲಿ ನಿಲುಗಡೆ ಇದೆ. ಆದರೆ ಅಲ್ಲಿ ರೈಲು ನಿಲ್ಲದೆ ವೇಗವಾಗಿ ಮುಂದೆ ಚಲಿಸಿದ್ದರಿಂದ ರಾಮಗಿರಿಯಲ್ಲಿ ಇಳಿಯಬೇಕಾಗ ಪ್ರಯಾಣಿಕರು ಗಾಬರಿಯಾಗಿದ್ದಾರೆ.

ಹುಬ್ಬಳ್ಳಿ, ಹರಿಹರ, ದಾವಣಗೆರೆ, ಚಿಕ್ಕಜಾಜೂರು ಕಡೆಯಿಂದಯಿಂದ ರಾಮಗಿರಿಗೆ ಆಗಮಿಸುವ ಪ್ರಯಾಣಿಕರಿಗೆ ಟಿಕೆಟ್ ನೀಡಲಾಗಿದೆ. ಆದರೆ ರಾಮಗಿರಿ ರೈಲು ನಿಲ್ದಾಣದಲ್ಲಿ ರೈಲು ನಿಲ್ಲದೆ ಮುಂದೆ ಚಲಿಸಿದ್ದು ಅನೇಕರಲ್ಲಿ ಆಶ್ಚರ್ಯ ಉಂಟು ಮಾಡಿದೆ.

ಯಾವುದೇ ಮುನ್ಸೂಚನೆ ನೀಡದೇ, ಕಾರಣ ಕೂಡ ತಿಳಿಸದೆ, ಅಕಸ್ಮಿಕ ರೈಲು ರದ್ದಾಗಿರುವ ಕುರಿತು ಸಾರ್ವಜನಿಕ ಪ್ರಕಟಣೆ ನೀಡದೆ ಈ ರೀತಿ ಮಾಡಿರುವುದು ಅಪೇಕ್ಷಣೀಯವಲ್ಲವೆಂದು ಪ್ರಯಾಣಿಕರು ದೂರಿದ್ದಾರೆ. ರೈಲಿನಿಂದ ಪ್ರಾಣಭಯದಿಂದ ಇಳಿದ ಪ್ರಯಾಣಿಕರು ರಾಮಗಿರಿ ರೇಲ್ವೆ ಸ್ಟೇಷನ್‌ ಮಾಸ್ಟರ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಮಗಿರಿ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡಲು ಬರುತ್ತಿಲ್ಲ. ಲಾಕ್ ಆಗಿದ್ದು, ರೈಲು ನಿಲುಗಡೆಯನ್ನು ಕೂಡ ರದ್ದು ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೇ ರದ್ದು ಮಾಡಿರುವುದು ಪ್ರಯಾಣಿಕರಿಗೆ ಗೊಂದಲ ಉಂಟು ಮಾಡಿತು. ರೈಲಿಗೆ ತೆರಳಲು ಆಗಮಿಸಿದ್ದ ಪ್ರಯಾಣಿಕರು ಕೂಡ ವಾಪಾಸಾದ ಪ್ರಸಂಗ ನಡೆಯಿತು.

ಪ್ರತಿಭಟನೆಗೆ ನಿರ್ಧಾರ:

ರಾಮಗಿರಿ ಹೋಬಳಿ ಕೇಂದ್ರವಾಗಿದ್ದು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವಾಗಿದೆ. ಅಲ್ಲದೆ ಇಲ್ಲಿನ ರೈಲು ಸಂಪರ್ಕ ಸುಮಾರು 40-45 ಗ್ರಾಮಗಳ ಸಂಪರ್ಕ ಕೊಂಡಿಯಾಗಿದೆ. ಇಲ್ಲಿ ಸುಮಾರು ಮೂರು ವರ್ಷಗಳಿಂದ ವಿಶ್ವ ಮಾನವ (20675/20676) ಎಕ್ಸ್ ಪ್ರೆಸ್ ರೈಲು ಹಾಗೂ ಹುಬ್ಬಳ್ಳಿ-ಬೆಂಗಳೂರು ಮೇಲ್ (17391/17392) ರೈಲು ಗಾಡಿ ನಿಲುಗಡೆ ಹೊಂದಿದ್ದವು ಈಗ ಮೇಲ್ ಟ್ರೈನ್ ಕೂಡ ಆ.15 ರಿಂದ ನಿಲುಗಡೆ ರದ್ದೂಗೊಳ್ಳಲಿದ್ದು, ರಾಮಗಿರಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿಕರು ಆ. 11 ರಂದು ಭಾನುವಾರ ರೈಲು ತಡೆದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ರಾಮಗಿರಿ ಐತಿಹಾಸಿಕ ಸ್ಥಳ ಇಲ್ಲಿಗೆ ವಿಶ್ವ ಮಾನವ ರೈಲು ಸಂಪರ್ಕ ಅತ್ಯಗತ್ಯವಿದ್ದು, ರೈಲು ರದ್ದಾಗಿರುವುದು ಬೇಸರ ತಂದಿದೆ. ವಿಷಯ ತಿಳಿದ ಕೂಡಲೇ ಹುಬ್ಬಳ್ಳಿ ಜನರಲ್ ಮ್ಯಾನೇಜರ್ ಹಾಗೂ ರೈಲ್ವೆ ಕಾರ್ಯದರ್ಶಿಗೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಅಲ್ಲದೆ ಏನೇ ಕಾರಣ ಇದ್ದರು ಕೂಡ ಸದ್ಯಕ್ಕೆ ನಿಲುಗಡೆ ಮುಂದುವರೆಸಬೇಕು ಎಂದು ಸೂಚಿಸಿದ್ದೇನೆ. ಪರಿಪೂರ್ಣ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವೆ.

-ಗೋವಿಂದ್ ಕಾರಜೋಳ, ಸಂಸದ