ಸಾರಾಂಶ
ದೇಶದ ಅತ್ಯಾಕರ್ಷಣೀಯ ಬೀಚುಗಳಲ್ಲಿ ಮಲ್ಪೆಯೂ ಒಂದಾಗಿದ್ದು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಜೊತೆಗೆ ಬೀಚಿನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಮಲ್ಪೆ
ಮಲ್ಪೆಯ ಕಡಲತೀರದಲ್ಲಿ ಜೀವರಕ್ಷಕ ಸಿಬ್ಬಂದಿಗೆ ತರಬೇತಿ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಡಲಿನ ಸೊಬಗನ್ನು ಸವಿಯಲು ಬರುವ ಹೊರಜಿಲ್ಲೆಯ ಪ್ರವಾಸಿಗರ ಇಲ್ಲಿನ ಆಳ, ಅಲೆಗಳ ಬಗ್ಗೆ ಅರಿವಿಲ್ಲದೆ ಅನಾಹುತಗಳಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯ ಜಿಲ್ಲಾಡಳಿತ ಜೀವರಕ್ಷಕರಿಗೆ ಈ ತರಬೇತಿಯನ್ನು ನೀಡಿದ್ದು, ಮುಂದೆ ಅವರಿಂದ ಸಂಭಾವ್ಯ ಅಹಿತಕರ ಘಟನಗಳನ್ನು ತಡೆಯುವುದಕ್ಕೆ ಸಾಧ್ಯವಾಗಲಿದೆ ಎಂದರು. ದೇಶದ ಅತ್ಯಾಕರ್ಷಣೀಯ ಬೀಚುಗಳಲ್ಲಿ ಮಲ್ಪೆಯೂ ಒಂದಾಗಿದ್ದು, ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಜೊತೆಗೆ ಬೀಚಿನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತಿದೆ ಎಂದವರು ಹೇಳಿದರು. ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ಜೀವರಕ್ಷಕರನ್ನು ಮಲ್ಪೆ, ಮರವಂತೆ, ಕಾಪು, ತ್ರಾಸಿ, ಬೀಚ್‌ಗಳಲ್ಲಿ ನೇಮಿಸಲಾಗುತ್ತಿದೆ, ಈಗಾಗಲೇ ಮೊದಲ ಹಂತದಲ್ಲಿ 17 ಜನ ಜೀವರಕ್ಷಕರಿಗೆ ತರಬೇತಿಯನ್ನು ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ನಗರಸಭೆ ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ನ್ಯಾಷನಲ್ ಲೈಫ್ ಸೇವಿಂಗ್ಸ್ ಸೊಸೈಟಿಯಿಂದ ಮಾನ್ಯತೆ ಪಡೆದ ಪುತ್ತೂರಿನ ವಾರಾಣಾಸಿ ಡೆವಲಪ್‌ಮೆಂಟ್ ಅಂಡ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಜೀವ ರಕ್ಷಕ ತಂಡದವರಿಗೆ ಉತ್ತಮ ಈಜುಗಾರಿಕೆ, ಕೃತಕ ಉಸಿರಾಟ ನೀಡುವುದು, ಪ್ರಥಮಚಿಕಿತ್ಸೆ ನೀಡುವುದು, ಪ್ರಜ್ಞಾಹೀನರಿಗೆ ಸಾಗಿಸುವುದು ಸೇರಿದಂತೆ ಮತ್ತಿತರ ತರಬೇತಿಯನ್ನು ನೀಡುವುದರೊಂದಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.