ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ರೈತರಿಗೆ ತರಬೇತಿ

| Published : Nov 17 2024, 01:20 AM IST

ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ರೈತರಿಗೆ ತರಬೇತಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳೆಗಳಿಗೆ ಕೀಟನಾಶಕಗಳ ಸಿಂಪರಣೆ ಮಾಡುವಾಗ ಮೈಮುಚ್ಚುವ ಹಾಗೆ ಕೋಟ್ ಕಿಟ್‌, ಕನ್ನಡಕ, ಕೈ ಚೀಲಗಳು ಮತ್ತು ಬೂಟುಗಳನ್ನು ಮುಂಜಾಗ್ರತ ಕ್ರಮವಾಗಿ ಧರಿಸುವುದರಿಂದ ದೇಹದ ಮೇಲೆ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ ಎಂದು ಕಾರೇಕೆರೆ ಕೃಷಿ ವಿಜ್ಞಾನ ಕೇಂದ್ರದ ಪ್ರೊಫೆಸರ್ ಬಸವರಾಜ್ ಶುಕ್ರವಾರ ತಿಳಿಸಿದರು. ಸಿಂಪಡಿಸಿದ ಪ್ರದೇಶದಲ್ಲಿ ಜಾನುವಾರುಗಳಿಗೆ ಹುಲ್ಲು ಮೇಯಿಸಲು ಬಿಡಬಾರದು. ಔಷಧಿಯನ್ನು ಸಿಂಪಡಿಸುವಾಗ ಬೀಡಿ, ಸಿಗರೇಟ್ ಸೇದಬಾರದು. ಔಷಧ ಸಿಂಪರಣೆಯ ನಂತರ ಚೆನ್ನಾಗಿ ಸ್ನಾನ ಮಾಡಿ ಬಟ್ಟೆ ಬದಲಾವಣೆ ಮಾಡಬೇಕು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಬೆಳೆಗಳಿಗೆ ಕೀಟನಾಶಕಗಳ ಸಿಂಪರಣೆ ಮಾಡುವಾಗ ಮೈಮುಚ್ಚುವ ಹಾಗೆ ಕೋಟ್ ಕಿಟ್‌, ಕನ್ನಡಕ, ಕೈ ಚೀಲಗಳು ಮತ್ತು ಬೂಟುಗಳನ್ನು ಮುಂಜಾಗ್ರತ ಕ್ರಮವಾಗಿ ಧರಿಸುವುದರಿಂದ ದೇಹದ ಮೇಲೆ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ ಎಂದು ಕಾರೇಕೆರೆ ಕೃಷಿ ವಿಜ್ಞಾನ ಕೇಂದ್ರದ ಪ್ರೊಫೆಸರ್ ಬಸವರಾಜ್ ಶುಕ್ರವಾರ ತಿಳಿಸಿದರು.

ನುಗ್ಗೇಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅರಕಲಗೂಡು, ಚನ್ನರಾಯಪಟ್ಟಣ ಕೃಷಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿಂಪರಣೆಯನ್ನು ಹಿಮ್ಮುಖವಾಗಿ ಮಾಡಬೇಕು. ಸಿಂಪಡಿಸಿದ ಪ್ರದೇಶದಲ್ಲಿ ಜಾನುವಾರುಗಳಿಗೆ ಹುಲ್ಲು ಮೇಯಿಸಲು ಬಿಡಬಾರದು. ಔಷಧಿಯನ್ನು ಸಿಂಪಡಿಸುವಾಗ ಬೀಡಿ, ಸಿಗರೇಟ್ ಸೇದಬಾರದು. ಔಷಧ ಸಿಂಪರಣೆಯ ನಂತರ ಚೆನ್ನಾಗಿ ಸ್ನಾನ ಮಾಡಿ ಬಟ್ಟೆ ಬದಲಾವಣೆ ಮಾಡಬೇಕು. ಔಷಧೋಪಚಾರ ಮಾಡಿದ ಬೀಜಗಳನ್ನು ಆಹಾರವಾಗಿ ತಿನ್ನಬಾರದು, ಜಾನುವಾರುಗಳಿಗೂ ಹಾಕಬಾರದು, ಇದರಿಂದ ಅಲ್ಸರ್ ಕ್ಯಾನ್ಸರ್‌ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದರು.

ಶುಂಠಿ ಬೆಳೆಗೆ ಎಲ್ಲಿ ರೋಗ ಬಂದಿರುತ್ತೋ ಆ ಜಾಗಕ್ಕೆ ಮಾತ್ರ ಔಷಧ ಸಿಂಪಡಣೆ ಮಾಡಬೇಕು. ರೋಗ ಇಲ್ಲದ ಇರುವ ಇಡೀ ಭೂಮಿಗೆ ಔಷಧಿ ಸಿಂಪರಣೆ ಮಾಡಬಾರದು. ಪೊಟ್ಯಾಷ್ ಕೊರತೆಗೆ ಬೋರಾನ್ ಮೆಗ್ನೀಸಿಯಂ ಲಘು ಪೋಷಕಾಂಶಗಳನ್ನು ಕೊಡುವುದರಿಂದ ಬೆಳೆಗಳಲ್ಲಿ ಫಸಲು ಹೆಚ್ಚಾಗುತ್ತದೆ ಎಂದರು. ತೋಟಕ್ಕೆ ಟ್ರ್ಯಾಕ್ಟರ್‌ಗಳ ಮೂಲಕ ಹೆಚ್ಚು ಕೆರೆ ಮಣ್ಣು ಕೊಡುವುದರಿಂದ ಬೇರುಗಳಿಗೆ ಉಸಿರಾಟದ ಸಮಸ್ಯೆಯಾಗಿ ಪಸಲು ಕಮ್ಮಿಯಾಗುತ್ತದೆ. ತೆಂಗಿನ ತೋಟಗಳಿಗೆ ಮಿತವಾಗಿ ಕೆಂಪು ಮಣ್ಣು ಹಾಕಿ. ತೋಟಕ್ಕೆ ಆಳದ ಉಳುಮೆ ಮಾಡಬಾರದು. ತೊಗರಿ ಬೆಳೆಯ ಹೂವಿಗೆ ಬೇವಿನ ಎಣ್ಣೆ ಸಿಂಪರಣೆ ಮಾಡುವುದರಿಂದ ಕೀಟ ಹಾಗೂ ರೋಗಭಾದೆ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು. ಅರಕಲಗೂಡು ಸಹಾಯಕ ಅಧಿಕಾರಿ ಪ್ರಸನ್ನ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಜೀವಿ ದಿನೇಶ್, ವಿಜಯ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಕೊಪ್ಪಲು ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೇ ಮಹದೇವಮ್ಮ ಶಂಕರ್‌, ರೈತ ಸಂಘದ ಅಧ್ಯಕ್ಷ ರಾಮಚಂದ್ರ, ಜಂಬೂರು ಜಗದೀಶ್, ಶಿವಸ್ವಾಮಿ, ಚೈತ್ರ, ರಾಜೇಶ್ವರಿ, ಅರ್ಪಿತ, ಮಂಜುನಾಥ್, ಪುಷ್ಪ, ಇತರರು ಹಾಜರಿದ್ದರು.