ಇಂದು ತಂತ್ರಜ್ಞಾನ ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಸಂದರ್ಭ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉತ್ತಮ ತರಬೇತಿಗಳ ಅಗತ್ಯವಿದೆ. ತರಬೇತಿ ಮೂಲಕ ರೆಡ್ ಕ್ರಾಸ್ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲು ಸಾಧ್ಯ ಎಂದು ರಾಜ್ಯ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.

ಉಡುಪಿ: ಇಂದು ತಂತ್ರಜ್ಞಾನ ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಸಂದರ್ಭ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉತ್ತಮ ತರಬೇತಿಗಳ ಅಗತ್ಯವಿದೆ. ತರಬೇತಿ ಮೂಲಕ ರೆಡ್ ಕ್ರಾಸ್ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲು ಸಾಧ್ಯ ಎಂದು ರಾಜ್ಯ ರೆಡ್ ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಹೇಳಿದರು.ಸೋಮವಾರ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಮಂಗಳೂರು ವಿವಿ ಮತ್ತು ಉಡುಪಿ ಜಿಲ್ಲಾ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಪದವಿ ಕಾಲೇಜುಗಳ ರೆಡ್‌ಕ್ರಾಸ್ ಅಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಅಧ್ಯಕ್ಷತೆ ವಹಿಸಿ, ರೆಡ್‌ಕ್ರಾಸ್ ವತಿಯಿಂದ ಹಲವು ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.

ಮಂಗಳೂರು ವಿವಿಯ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ರೆಡ್ ಕ್ರಾಸ್ ಕಾರ್ಯಕ್ರಮಗಳ ವಿವರ ನೀಡಿದರು. ಕುಂದಾಪುರ ರೆಡ್ ಕ್ರಾಸ್ ಘಟಕದ ಸಭಾಪತಿ ಜಯಕರ ಶೆಟ್ಟಿ ಎಸ್., ಖಜಾಂಚಿ ಶಿವರಾಮ ಶೆಟ್ಟಿ, ಜಿಲ್ಲಾ ಖಜಾಂಚಿ ರಮಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್ ಟಿ. ವಂದಿಸಿದರು. ನಿಧಿ ಸಂಗ್ರಹಣೆ ಬಹುಮಾನ: ಇದೇ ಸಂದರ್ಭ ಕಳೆದ ವರ್ಷದ ಜಿನೇವಾ ಒಪ್ಪಂದ ಜಾಥಾ ಮತ್ತು ನಿಧಿ ಸಂಗ್ರಹಣೆಯಲ್ಲಿ ಪ್ರಥಮ ಬಹುಮಾನ ಪಡೆದ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು, ದ್ವಿತೀಯ ಬಹುಮಾನ ಪಡೆದ ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ತೃತೀಯ ಬಹುಮಾನ ಪಡೆದ ಶಿರ್ವದ ಸೈಂಟ್ ಮೇರಿಸ್ ಕಾಲೇಜುಗಳಿಗೆ ಬಹುಮಾನ ವಿತರಿಸಲಾಯಿತು.