ಸಾರಾಂಶ
ಸಹಕಾರಿ ವ್ಯವಸ್ಥೆಯಲ್ಲಿ ಕಾಯ್ದೆಗೆ ಅನುಗುಣವಾಗಿಯೇ ಕೆಲಸ ಮಾಡುವ ಅಗತ್ಯತೆ ಇರುವುದರಿಂದ ಪ್ರತಿಯೊಬ್ಬ ಸಹಕಾರಿಗೂ ತರಬೇತಿ ಎನ್ನುವುದು ಅವಶ್ಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ಯು.ಸುರೇಶ್ ವಾಟಗೋಡು ಹೇಳಿದರು.
ಕನ್ನಡಪ್ರಭ ವಾರ್ತೆ ಸಾಗರ
ಸಹಕಾರಿ ವ್ಯವಸ್ಥೆಯಲ್ಲಿ ಕಾಯ್ದೆಗೆ ಅನುಗುಣವಾಗಿಯೇ ಕೆಲಸ ಮಾಡುವ ಅಗತ್ಯತೆ ಇರುವುದರಿಂದ ಪ್ರತಿಯೊಬ್ಬ ಸಹಕಾರಿಗೂ ತರಬೇತಿ ಎನ್ನುವುದು ಅವಶ್ಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ಯು.ಸುರೇಶ್ ವಾಟಗೋಡು ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಮತ್ತು ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಾಗರ ತಾಲೂಕಿನ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘಗಳ ಮೂಲ ಉದ್ದೇಶ ಅರಿಯದೆ ಸಹಕಾರಿ ಸಂಘಗಳಲ್ಲಿ ಕರ್ತವ್ಯನಿರ್ವಹಿಸುವುದು ಕಷ್ಟಸಾಧ್ಯ ಎಂದರು.ಸಹಕಾರಿ ರಂಗದಲ್ಲಿ ಆಯಾ ಕಾಲಕ್ಕೆ ಸೂಚಿಸಲ್ಪಡುವ ನಿಯಮವನ್ನು ಅನುಸರಿಸಿ ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ. ಹಾಗಾಗಿಯೇ ಜಿಲ್ಲಾ ಸಹಕಾರ ಯೂನಿಯನ್ ಸಹಕಾರಿ ವ್ಯವಸ್ಥೆಯ ಬೇರೆಬೇರೆ ವಿಭಾಗದಲ್ಲಿರುವ ಪ್ರತಿಯೊಬ್ಬರಿಗೂ ತರಬೇತಿ ನೀಡುವ ಕೆಲಸಕ್ಕೆ ಮುಂದಾಗಿದೆ. ಪ್ರತಿಯೊಂದು ಸಹಕಾರಿ ಸಂಘಗಳಲ್ಲಿಯೂ ಲೆಕ್ಕಪತ್ರಗಳ ಆಡಿಟ್ ಮಾಡಿಸುವ ಜವಾಬ್ದಾರಿ ಇದೆ. ಇದನ್ನು ಸರಕಾರಿ ಲೆಕ್ಕಪರಿಶೋಧಕರ ಮೂಲಕವೇ ಮಾಡಿಸುವ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ರಾಜು. ಜಿ.ಪಟೇಲ್ ಶಿಬಿರ ಉದ್ಘಾಟಿಸಿದರು. ಗಣಪತಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ನಾರಾಯಣ, ಉಪಾಧ್ಯಕ್ಷ ರಮೇಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಉಮೇಶ್, ಯೂನಿಯನ್ ನಿರ್ದೇಶಕ ಎಸ್.ಎಲ್.ನಿಖಿಲ್, ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಯಶವಂತಕುಮಾರ್, ವ್ಯವಸ್ಥಾಪಕ ಕೆ.ಸಿ. ಹನುಮಂತಪ್ಪ ಮತ್ತಿತರರು ಇದ್ದರು.