ಪಿಎಂ ಕಿಸಾನ್ ಫಲಾನುಭವಿ ರೈತರಿಗೆ ಹಣ ಬಿಡುಗಡೆ-ಡಾ. ಗುರುಪ್ರಸಾದ

| Published : Jun 21 2024, 01:07 AM IST

ಸಾರಾಂಶ

ಪಿಎಂ ಕಿಸಾನ್ 17ನೇ ಕಂತಿನಡಿ 9.26 ಕೋಟಿ ಫಲಾನುಭವಿ ರೈತರಿಗೆ ರು. 20 ಸಾವಿರ ಕೋಟಿ ವರ್ಗಾವಣೆ ಮಾಡಲಾಗುವುದು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಹೇಳಿದರು.

ರಾಣಿಬೆನ್ನೂರು: ಪಿಎಂ ಕಿಸಾನ್ 17ನೇ ಕಂತಿನಡಿ 9.26 ಕೋಟಿ ಫಲಾನುಭವಿ ರೈತರಿಗೆ ರು. 20 ಸಾವಿರ ಕೋಟಿ ವರ್ಗಾವಣೆ ಮಾಡಲಾಗುವುದು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್. ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಸಮ್ಮಾನ ನಿಧಿ ಬಿಡುಗಡೆ ಸಮಾರಂಭದ ಅಂಗವಾಗಿ ಏರ್ಪಡಿಸಲಾಗಿದ್ದ ಮುಂಗಾರು ಹಂಗಾಮಿನ ಬೆಳೆಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಸಖಿಯರನ್ನು ಕೃಷಿ ಪರ ವಿಸ್ತರಣಾ ಕಾರ್ಯಕರ್ತೆಯರೆಂದು ಪ್ರಮಾಣೀಕರಿಸುವುದರ ಬಗ್ಗೆ ಮತ್ತು ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಸೋಯಾಅವರೆ ಹಾಗೂ ಇನ್ನಿತರ ಬೆಳೆಗಳಲ್ಲಿ ಬರುವ ಕೀಟಗಳು, ಅವುಗಳ ಸಮಗ್ರ ಹತೋಟಿ ಕ್ರಮಗಳ ಕುರಿತು ಮಾಹಿತಿ ನೀಡಿದರು. ಹಾವೇರಿ ಉಪ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಎಚ್.ಕೆ. ಮಾತನಾಡಿ, ಸಮ್ಮಾನ ನಿಧಿಯ ಕುರಿತು ಹಾಗೂ ಕೃಷಿ ಇಲಾಖೆಯಲ್ಲಿ ದೊರಕುವ ವಿವಿಧ ಯೋಜನೆ ಮತ್ತು ಸೌಲಭ್ಯಗಳ ಬಗ್ಗೆ ರೈತರಿಗೆ ವಿವರಣೆ ನೀಡಿದರು.ಕಜ್ಜರಿ ಗ್ರಾಪಂ ಸದಸ್ಯೆ ಗೀತಾ ಮಡಿವಾಳರ ಮಾತನಾಡಿ, ರೈತರು ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾಂತ್ರಿಕ ಮಾಹಿತಿಯನ್ನು ಪಡೆದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳಬೇಕು ಎಂದರು. ಮಣ್ಣು ವಿಜ್ಞಾನ ವಿಷಯ ತಜ್ಞೆ ಡಾ. ರಶ್ಮಿ ಸಿ. ಎಂ. ಮಾತನಾಡಿ, ಮುಂಗಾರು ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಮತ್ತು ರಾಸಾಯನಿಕ ಗೊಬ್ಬರ ಉಪಯೋಗಿಸದೇ, ಸಾವಯವ ಗೊಬ್ಬರ ಅಥವಾ ಹಸಿರು ಗೊಬ್ಬರವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಣ್ಣಿಗೆ ಉಪಯೋಗಿಸಬೇಕು. ಇದರಿಂದ ಉತ್ಪಾದನೆಯ ಮಟ್ಟವನ್ನು ಕಾಯ್ದುಕೊಳ್ಳಲು ಸಹಾಯಕವಾಗುವುದಲ್ಲದೆ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತದೆ ಎಂದರು. ಮುಂಗಾರು ಹಂಗಾಮಿನಲ್ಲಿ ಜಾನುವಾರುಗಳಿಗೆ ಬರುವ ರೋಗಗಳು ಹಾಗೂ ನಿರ್ವಹಣೆ ಕುರಿತು ವಿಜ್ಞಾನಿ ಡಾ. ಮಹೇಶ ಕಡಗಿ, ಪಿಎಂ ಕಿಸಾನ್ ಯೋಜನೆ ಕಾರ್ಯಕ್ರಮದ ನೇರ ಪ್ರಸಾರ ಹಾಗೂ ಕೃಷಿ ತಂತ್ರಜ್ಞಾನ ಮೊಬೈಲ್ ಆ್ಯಪ್‌ನ ಬಳಕೆಯ ಮಹತ್ವ ಬಗ್ಗೆ ಹಿರಿಯ ತಾಂತ್ರಿಕ ಅಧಿಕಾರಿ ಚಂದ್ರಕಾಂತ ಕೋಟಬಾಗಿ ಹಾಗೂ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳ ನಿರ್ವಹಣೆ ಬಗ್ಗೆ ಬೇಸಾಯಶಾಸ್ತ್ರ, ವಿಷಯ ತಜ್ಞೆ ಡಾ. ಸಿದ್ಧಗಂಗಮ್ಮ ಕೆ.ಆರ್. ಮಾಹಿತಿ ನೀಡಿದರು. ಮುಂಗಾರು ಬೆಳೆಗಳಲ್ಲಿ ರೋಗಗಳ ನಿರ್ವಹಣೆ ಬಗ್ಗೆ ಸಸ್ಯ ಸಂರಕ್ಷಣೆ ವಿಷಯ ತಜ್ಞೆ ಡಾ. ಬಸಮ್ಮ ಹಾದಿಮನಿ ಹಾಗೂ ಮಣ್ಣು ನೀರು ಸಂರಕ್ಷಣಾ ಕ್ರಮಗಳು ಕುರಿತು ನಿಕ್ರಾ ಯೋಜನೆ ಹಿರಿಯ ಸಂಶೋಧಕಿ ಡಾ. ಲಕ್ಷ್ಮಿ ಪಾಟೀಲ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೆವಿಕೆ ಸಿಬ್ಬಂದಿ ವರ್ಗ ಮತ್ತು ಸುಮಾರು 70ಕ್ಕೂ ಹೆಚ್ಚು ರೈತ / ರೈತ ಮಹಿಳೆಯರು ಹಾಜರಿದ್ದರು.