ನಾಟಕದಿಂದ ಮನಸ್ಸು ಪರಿವರ್ತನೆ ಮಾಡಿಕೊಳ್ಳಿ

| Published : Jul 06 2025, 01:48 AM IST

ಸಾರಾಂಶ

ಕಾರಾಗೃಹ ನಿವಾಸಿಗಳಿಗಾಗಿ ಧಾರವಾಡ ರಂಗಾಯಣವು ನಾಟಕವನ್ನು ಕಲಿಸುತ್ತಿರುವುದುದು ಹೆಮ್ಮೆಯ ವಿಷಯ

ಧಾರವಾಡ: ಜೀವನದಲ್ಲಿ ಮಾಡಿದ ತಪ್ಪಿಗಾಗಿ ಶಿಕ್ಷೆ ಅನುಭವಿಸುತ್ತಿರುವ ಕೇಂದ್ರ ಕಾರಾಗೃಹದ ವಾಸಿಗಳು ನಾಟಕವನ್ನು ಕೇವಲ ಮನರಂಜನೆಗಾಗಿ ಕಲಿಯದೇ, ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ ಹುಣಸಿಕಟ್ಟಿ ಹಿರೇಮಠದ ಬಸವರಾಜ ದೇವರು ಹೇಳಿದರು.

ರಂಗಾಯಣ, ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯು ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಿದ್ದ ರಂಗ ನಾಟಕ ಶಿಬಿರದದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾರಾಗೃಹ ನಿವಾಸಿಗಳಿಗಾಗಿ ಧಾರವಾಡ ರಂಗಾಯಣವು ನಾಟಕವನ್ನು ಕಲಿಸುತ್ತಿರುವುದುದು ಹೆಮ್ಮೆಯ ವಿಷಯ.ಈ ಮೂಲಕ ಅವರಲ್ಲಿರುವ ಕಲೆ ಗುರುತಿಸಿ, ಶಿಕ್ಷೆಯ ನಂತರದ ಮುಂದಿನ ಜೀವನದಲ್ಲಿ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಸ್ಪೂರ್ತಿ ನೀಡಿದಂತಾಗುತ್ತದೆ. ಇದರ ಸದುಪಯೋಗ ಕಾರಾಗೃಹ ನಿವಾಸಿಗಳು ಪಡೆದುಕೊಂಡು ತಮ್ಮ ಜೀವನ ಸುಧಾರಿಸಿಕೊಳ್ಳಬೇಕು ಎಂದರು.

ಶ್ರೀಕೃಷ್ಣನು ಕಾರಾಗೃಹದಲ್ಲಿಯೇ ಜನಿಸಿ ಲೋಕಕಲ್ಯಾಣ ಮಾಡಿದನು.ನಿಮ್ಮಲ್ಲಿನ ಬದಲಾವಣೆಗೆ ಈ ರಂಗ ನಾಟಕ ಶಿಬಿರ ಪ್ರೇರಣೆಯಾಗಲಿ, ಜೀವನವನ್ನು ಕತ್ತಲಿಂದ ಬೆಳಕಿನೆಡೆಗೆ ಬದಲಾಸಿಕೊಳ್ಳಿ. ಜೀವನದಲ್ಲಿ ತಪ್ಪುಗಳು ನಡೆಯುತ್ತವೆ. ಆದರೆ, ಅವುಗಳನ್ನು ಸರಿಪಡಿಸಿಕೊಂಡು ತಪ್ಪು ನಡೆಯದಂತೆ ಜೀವನ ನಡೆಸುವುದು ಮುಖ್ಯ. ಮಾಡಿದಂತಹ ತಪ್ಪನ್ನು ತಿದ್ದಿಕೊಂಡು ಮುಂದಿನ ಜೀವನದಲ್ಲಿ ಉತ್ತಮ ನಾಗರಿಕರಾಗಿರುವುದು ಅವಶ್ಯ ಎಂದರು.

ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದ ಈ ನಾಟಕದಲ್ಲಿ ನಾವೆಲ್ಲರೂ ಪಾತ್ರಧಾರಿಗಳು. ನಮ್ಮ ಪಾತ್ರಗಳನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂದರು.

ಇಸ್ಲಾಂ-ಇ-ಜಮಾತ್ ಟ್ರಸ್ಟ್‌ನ ಅತೀಕ್ ಅಹ್ಮದ್ ಸಂಗ್ರಸಕೊಪ್ಪ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ನಿರ್ಮಲ ಬಿ.ಆರ್, ಪ್ರಿಜನ್ ಮಿನಿಸ್ಟರಿಯ ಸದಸ್ಯ ಸ್ಯಾಲಿ ಡಿಸೋಜಾ, ದಿವ್ಯಾ ಡಿಸೋಜಾ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಸಾಧನಾ ಸಂಸ್ಥೆಯ ಡಾ. ಇಸಾಬೆಲಾ ಝೇವಿಯರ್ ಇದ್ದರು.