ಪ್ರಸ್ತುತ ವ್ಯವಸ್ಥೆ ಅಸಮಾನತೆ ಮತ್ತು ಅನ್ಯಾಯದಿಂದ ಕೂಡಿದೆ. ಈ ವ್ಯವಸ್ಥೆಯನ್ನು ಸರಿಪಡಿಸಿ ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡಲು ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ. ಆದರೆ, ನಮ್ಮಿಂದ ಆಯ್ಕೆಯಾದವರು ರಾಜ್ಯದ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿ ವೈಯುಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿರುವುದು ದುರಂತದ ಸಂಗತಿ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಅಸಮಾನತೆ ಮತ್ತು ಅನ್ಯಾಯದಿಂದ ಕೂಡಿರುವ ವ್ಯವಸ್ಥೆಯ ವಿರುದ್ಧ ಶೋಷಿತ ಸಮುದಾಯ ಸಂಘಟಿತರಾಗಿ ಚಳವಳಿ ಮೂಲಕ ಬದಲಾವಣೆ ಮತ್ತು ಪರಿವರ್ತನೆ ಮಾಡಿ ಸಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ರಂಗಭೂಮಿ ಕಲಾವಿದ ಹಾಗೂ ಸಮಾಜ ಸೇವಕ ಚೇತನ್ ತಿಳಿಸಿದರು.

ತಾಲೂಕಿನ ಶಿಕಾರಿಪುರ ಗ್ರಾಮದಲ್ಲಿ ಆಯೋಜಿಸಿದ್ದ ಸಮಾನತೆ ಸಭೆಯಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ದಲಿತ ಆದಿವಾಸಿ, ಬಹುಜನರೆಲ್ಲರೂ ಜೊತೆಗೂಡಿ ಚಳಿವಳಿ ಮೂಲಕ ಉತ್ತಮ ಆದರ್ಶ ಸಂವಿಧಾನ ಸಮಾಜ ನಿರ್ಮಿಸಬೇಕೆಂಬುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರಸ್ತುತ ವ್ಯವಸ್ಥೆ ಅಸಮಾನತೆ ಮತ್ತು ಅನ್ಯಾಯದಿಂದ ಕೂಡಿದೆ. ಈ ವ್ಯವಸ್ಥೆಯನ್ನು ಸರಿಪಡಿಸಿ ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡಲು ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತೇವೆ. ಆದರೆ, ನಮ್ಮಿಂದ ಆಯ್ಕೆಯಾದವರು ರಾಜ್ಯದ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿ ವೈಯುಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿರುವುದು ದುರಂತದ ಸಂಗತಿ. ಹಾಗಾಗಿ ರಾಜಕೀಯ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.

ರಾಷ್ಟ್ರದ ಸಂವಿಧಾನದ ಅಡಿಯಲ್ಲಿರುವ 2900 ಪಕ್ಷಗಳು ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯುತ್ತಿಲ್ಲ. ನಾವೆಲ್ಲರೂ ಬೇರೆ ಬೇರೆ ಜಾತಿ ಧರ್ಮದಲ್ಲಿ ಹುಟ್ಟಿರಬಹುದು. ಇದ್ಯಾವುದೂ ನಮ್ಮ ಆಯ್ಕೆಯಲ್ಲ. ಆದರೆ ಹುಟ್ಟಿದ ನಂತರ ನಾವು ಸಮ ಸಮಾಜಕ್ಕಾಗಿ ಶ್ರಮಿಸಿದರೆ ಸಂವಿಧಾನದ ಮೂಲ ಆಶಯಗಳನ್ನು ಎತ್ತಿಹಿಡಿಯಬಹುದು. ಇಲ್ಲಿ ನಮಗೆ ನ್ಯಾಯ ಎಂಬುದು ಬಹಳ ಮುಖ್ಯವಾಗುತ್ತದೆ. ಇತಿಹಾಸದ ತಪ್ಪುಗಳನ್ನು ಸರಿಪಡಿಸಿ ಅನ್ಯಾಯಗಳಿಗೆ ನ್ಯಾಯ ಒದಗಿಸಿ ವೈಜ್ಞಾನಿಕ ಮನೋಭಾವದಿಂದ ಸಂವಿಧಾನದ ಪೀಠಿಕೆಯನ್ನು ಎತ್ತಿಹಿಡಿಯಬೇಕಿದೆ. ಅದಕ್ಕಾಗಿ ದಮನಿತರೆಲ್ಲರೂ ಸಂಘಟಿತರಾಗಬೇಕು ಎಂದರು.

ತಾಪಂ ಮಾಜಿ ಅಧ್ಯಕ್ಷೆ ಕಾಂತಮ್ಮ, ಮುಖಂಡರಾದ ಚನ್ನಾರೆಡ್ಡಿ, ಜೈಸಂಬರ್, ಕೃಷ್ಣಪ್ಪ, ಬಾಲರಾಜ್, ಕಾಶಿರಾಂ, ಅಶೋಕ್ ಸೇರಿದಂತೆ ಗ್ರಾಮಸ್ಥರು ಇದ್ದರು.