ಅಥಣಿ: ಜೋಡಿ ವಿದ್ಯುತ್‌ ಟ್ರಾನ್ಸಫಾರ್ಮರ್‌ಗಳಲ್ಲಿ ಶಾರ್ಟ್‌ ಸರ್ಕ್ಯೂಟ್‌ ಉಂಟಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡ ಪರಿಣಾಮ ಎರಡು ಬೈಕ್‌ಗಳು ಸುಟ್ಟು ಕರಕಲಾಗಿರುವ ಘಟನೆ ಪಟ್ಟಣದ ಕುಂಬಾರ ಬಾವಿ ಬಳಿ ಸಂಭವಿಸಿದೆ.

ಪಟ್ಟಣದ ಬಿಇಒ ಕಚೇರಿ ಹಿಂಭಾಗದ ಕುಂಬಾರ ಬಾವಿ ಬಳಿಯ 250 ಕೆವಿ ವಿದ್ಯುತ್ ಪರಿವರ್ತಕದಲ್ಲಿ ರಾತ್ರಿ ದೋಷ ಉಂಟಾಗಿತ್ತು. ಹೆಸ್ಕಾಂ ಸಿಬ್ಬಂದಿ ಅದನ್ನು ಸರಿಪಡಿಸಿ ಮತ್ತೆ ಯಥಾಸ್ಥಿತಿಯಂತೆ ವಿದ್ಯುತ್ ಪೂರೈಕೆ ಮಾಡಿದ್ದರು. ಆದರೆ, ತಡರಾತ್ರಿ 2 ಗಂಟೆ ಸುಮಾರಿಗೆ ವಿದ್ಯುತ್ ಪರಿವರ್ತಕಗಳಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡು ಪರಿವರ್ತಕ ಸ್ಪೋಟಗೊಂಡಿದೆ. ಬೆಂಕಿಯ ಕೆನ್ನಾಲಿಗೆ ಹತ್ತಿರವಿದ್ದ ಬೈಕುಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದರು. ವಿದ್ಯುತ್ ಪರಿವರ್ತಕಗಳ ಸಮೀಪದ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕೂಡಲೇ ಅಗ್ನಿಶಾಮಕ ಠಾಣೆಗೆ ಮತ್ತು ಹೆಸ್ಕಾಂ ಸಿಬ್ಬಂದಿಗೆ ಮಾಹಿತಿ ರವಾನಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅನಾಹುತವನ್ನು ತಪ್ಪಿಸಿದರು.

ಜನವಸತಿ ರಸ್ತೆಯ ಪಕ್ಕದಲ್ಲಿರುವ ಈ ವಿದ್ಯುತ್ ಪರಿವರ್ತಕಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಥಣಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಜಿ.ವಿ ಸಂಪಣ್ಣವರ, ಗುರುವಾರ ಮಧ್ಯಾಹ್ನ ಅಕಾಲಿಕ ಮಳೆಯಾಗಿದ್ದು, ಈ ವಿದ್ಯುತ್ ಪರಿಕರಗಳಲ್ಲಿ ತಾಂತ್ರಿಕ ದೋಷವಾದ ಕಾರಣ ರಾತ್ರಿ ವೇಳೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಸ್ಪೋಟಗೊಂಡಿರುವ ಪರಿವರ್ತಕ ಮತ್ತು ಪರಿಕರಗಳನ್ನು ಶೀಘ್ರ ಸಿಬ್ಬಂದಿ ಸರಿಪಡಿಸಲಿದ್ದಾರೆ. ಸಾರ್ವಜನಿಕರು ಇದಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.