ಕನ್ನಡದ ಶ್ರೀಮಂತಿಕೆಗೆ ಅನುವಾದ ಅಗತ್ಯ: ದೀಪಾ

| Published : Nov 23 2025, 02:15 AM IST

ಸಾರಾಂಶ

ವಿಶ್ವಕ್ಕೆ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಗೊತ್ತಾಗಲು ಇನ್ನು ಹೆಚ್ಚು ಕೃತಿಗಳು ಆಂಗ್ಲ ಸೇರಿದಂತೆ ಇತರ ಭಾಷೆಗಳಿಗೆ ಅನುವಾದವಾಗಬೇಕು ಎಂದು ಬುಕರ್‌ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಶ್ವಕ್ಕೆ ಕನ್ನಡ ಸಾಹಿತ್ಯದ ಶ್ರೀಮಂತಿಕೆ ಗೊತ್ತಾಗಲು ಇನ್ನು ಹೆಚ್ಚು ಕೃತಿಗಳು ಆಂಗ್ಲ ಸೇರಿದಂತೆ ಇತರ ಭಾಷೆಗಳಿಗೆ ಅನುವಾದವಾಗಬೇಕು ಎಂದು ಬುಕರ್‌ ಪ್ರಶಸ್ತಿ ಪುರಸ್ಕೃತ ಅನುವಾದಕಿ ದೀಪಾ ಭಾಸ್ತಿ ಅಭಿಪ್ರಾಯಪಟ್ಟರು.

ಶುಕ್ರವಾರ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ತಿಂಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮ್ಯಾಜಿಕ್‌ ಎಂದಾಗಿದ್ದರೆ: ಅನುವಾದದ ಅನುಭವಗಳು’ ವಿಷಯ ಕುರಿತು ಮಾತನಾಡಿ, ದಕ್ಷಿಣ ಭಾರತದ ತಮಿಳು ಅಥವಾ ಮಲಯಾಳಂ ಭಾಷೆಯ ಸಾಹಿತ್ಯ ಕೃತಿಗಳು ಸಾಕಷ್ಟು ಅನುವಾದ ಆಗುತ್ತಿವೆ. ತೆಲುಗಿನ ಕೃತಿಗಳು ಕೂಡ ವಿವಿಧ ಭಾಷೆಗಳಿಗೆ ತರ್ಜುಮೆಯಾಗುತ್ತಿವೆ. ಆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕೃತಿಗಳು ಅನುವಾದವಾಗುತ್ತಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ಬ್ರಿಟಿಷ್‌, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶದವರಿಗೆ ಕನ್ನಡದಲ್ಲಿರುವ ಅಮೂಲ್ಯ ಸಾಹಿತ್ಯ ಕೃತಿಗಳ ಸಾರ ಗೊತ್ತಾಗಬೇಕು. ಆದ್ದರಿಂದ ಮತ್ತೆ ಮತ್ತೆ ಅನುವಾದಗಳು ಆಗಬೇಕು. ಇದು ಒಬ್ಬ ಅನುವಾದಕನಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಕುವೆಂಪು, ದರಾ ಬೇಂದ್ರೆ. ಶಿವರಾಮ ಕಾರಂತರು ಸೇರಿದಂತೆ ಅನೇಕ ಸಾಹಿತಿಗಳ ಅತ್ಯುತ್ತಮವಾದ ಕೃತಿಗಳನ್ನುಅನುವಾದ ಮಾಡಲು ಮುಂದಾಗಬೇಕು ಎಂದು ಹೇಳಿದರು.

2023ರ ಜನವರಿಯಲ್ಲಿ ಕೊಡಗಿನ ಗೌರಮ್ಮನವರ ಕತೆಗಳ ಅನುವಾದದ ಮೊದಲ ಕೃತಿ ಫೇಟ್ಸ್‌ ಗೇಮ್‌ ಆ್ಯಂಡ್‌ ಅದರ್‌ ಸ್ಟೋರೀಸ್‌ ಕೃತಿ ಪ್ರಕಟವಾಯಿತು. ನಾನು ಓದಿದ್ದು ಇಂಗ್ಲಿಷ್‌ ಮಾಧ್ಯಮದಲ್ಲಿ, ನನ್ನ ಕೆಲಸ ಕೂಡ ಇಂಗ್ಲಿಷ್‌ ಭಾಷೆಯನ್ನೊಳಗೊಂಡಿತ್ತು. ಹಾಗಾಗಿ ನನಗೆ ಕನ್ನಡಕ್ಕೆ ಅನುವಾದ ಮಾಡುವುದು ಹೊಸ ಜಗತ್ತನ್ನು ಪರಿಚಯಿಸಿಕೊಟ್ಟಿತು. ಆದ್ದರಿಂದ ನಾನು ಕನ್ನಡವನ್ನು ಹೆಚ್ಚು ಅರ್ಥೈಸಿಕೊಳ್ಳಲು ಪ್ರಯತ್ನ ಆರಂಭಿಸಿದೆ. ಅನುವಾದದ ಕೆಲಸ ಮಾಡುತ್ತಾ ಹೋದಂತೆ ಕನ್ನಡ ಭಾಷೆಗೆ ಹತ್ತಿರವಾಗುತ್ತಾ, ಆಸಕ್ತಿ ಇನ್ನೂ ಹೆಚ್ಚುತ್ತಲೇ ಹೋಯಿತು ಎಂದರು.

ಬ್ರಿಟಿಷರು, ಅಮೆರಿಕನ್ನರು ಮಾತನಾಡುವಂತೆ ನಾವು ಖಂಡಿತವಾಗಿ ಅನುವಾದ ಮಾಡಲು ಸಾಧ್ಯವಿಲ್ಲ. ನಾವು ಭಾರತೀಯರು, ಇಲ್ಲಿ ಸ್ಥಳೀಯವಾಗಿ ಬಳಸುವಂತ ಇಂಗ್ಲಿಷನ್ನೆ ಬಳಸಿಕೊಂಡು ಅನುವಾದ ಮಾಡಬೇಕೆಂದು ಇದ್ದೆ. ಅದನ್ನೇ ಹಾರ್ಟ್‌ ಲ್ಯಾಂಪ್‌ನಲ್ಲಿ ಬಳಕೆ ಮಾಡಿದ್ದೇನೆ. ಬದಲಾಗುತ್ತಿರುವ ಜಗತ್ತಿನಲ್ಲಿ ಇಂಗ್ಲಿಷ್‌ ಒಂದು ಚಾಲ್ತಿಯಲ್ಲಿರುವ ಭಾಷೆ ಆಗಿರಬಹುದು. ಆದರೆ, ಅದೇ ಮುಖ್ಯವಲ್ಲ. ಒಂದು ಭಾಷೆಯಿಂದ ಮತ್ತೊಂದು ಭಾಷೆಯ ಪದಗಳ ಕೊಡುಕೊಳ್ಳುವಿಕೆ ಇದ್ದೇ ಇರುತ್ತದೆ. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಆದ ಕಾರಣ ಕನ್ನಡಕ್ಕೆ ಮಹತ್ವ ಸಿಕ್ಕಿದೆ ಎಂಬುದು ನನ್ನ ಭಾವನೆ. ಕನ್ನಡದಿಂದಾಗಿ ಇಂಗ್ಲಿಷ್‌ ಹೆಚ್ಚು ಪಡೆದುಕೊಂಡಿದೆಯೇ ಹೊರತು ಅಲ್ಲಿಂದ ಇಲ್ಲಿಗೆ ಬಂದದ್ದು ಕಡಿಮೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಚನ್ನಪ್ಪ ಕಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರದ ಸಂಚಾಲಕರಾದ ಹಿರಿಯ ಸಾಹಿತಿ ಎಸ್‌. ಗಂಗಾಧರ, ಪ್ರೊ.ಡಿ.ಕೆ. ಚಿತ್ತಯ್ಯ ಪೂಜಾರ್‌, ಪ್ರೊ. ಷಾಕಿರಾ ಖಾನಂ ಉಪಸ್ಥಿತರಿದ್ದರು.