ಸಾರಾಂಶ
ಬೆಳಗಾವಿ : ಶಕ್ತಿ ಯೋಜನೆಯಿಂದ ರಾಜ್ಯದಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದ್ದು, ಟಿಕೆಟ್ ದರ ಹೆಚ್ಚಳ ಮಾಡುವ ಚಿಂತನೆ ನಡೆದಿದೆ ಎಂದು ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಒಂದಾಗಿದ್ದು, ಇದರಿಂದ ಸಾರಿಗೆ ಇಲಾಖೆ ನಷ್ಟದಲ್ಲಿದ್ದರೂ ಸರ್ಕಾರ ಮುನ್ನಡೆಸಿಕೊಂಡು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಲಾಭದಲ್ಲಿ ಬರುವಂತೆ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.
ಫೆಬ್ರವರಿ ತಿಂಗಳಲ್ಲಿ ನಾನು ಅಧಿಕಾರ ಸ್ವೀಕರಿಸಿದ್ದೇನೆ. ರಾಜ್ಯದಲ್ಲಿ 375 ಬಸ್ ಖರೀದಿ ಮಾಡಿದ್ದು, ಮತ್ತೆ 300 ಬಸ್ ಖರೀದಿಸಲಾಗುತ್ತಿದೆ. ಶಕ್ತಿ ಯೋಜನೆಯಿಂದ ಬಸ್ ಸಮಸ್ಯೆ ಹಾಗೂ ಇನ್ನಿತರ ಲೋಪದೋಷ ಗಮನಕ್ಕೆ ಬಂದಿದ್ದು, ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದ ಅವರು, ಹಳ್ಳಿಗಳಲ್ಲಿ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆ ಆಗುತ್ತಿದೆ. ನಗರಕ್ಕಿಂತ ಹಳ್ಳಿಗಳಿಗೆ ಹೋಗಲು ಬಸ್ ಸಮಸ್ಯೆ ಇದೆ, ಹಳ್ಳಿಗಳಿಗೆ ಹೊಸದಾಗಿ ಬಸ್ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
ಕಾನೂನು ಪ್ರಕಾರ 10 ಲಕ್ಷ ಕಿಮೀ ಚಲಿಸಿದ ಬಸ್ ಡೆಮಾಲಿಸ್ ಮಾಡಬೇಕು. ಕೆಲವೊಂದು ಕಾರಣಗಳಿಂದ ಬಸ್ ಗಳನ್ನು 14 ಲಕ್ಷ ಕಿಮೀ ಓಡಿಸುತ್ತಿದ್ದೇವೆ. ಹಳೇ ಬಸ್ ಗಳು ಮಾರ್ಗಮಧ್ಯೆ ನಿಲ್ಲುತ್ತಿವೆ ಎಂದು ನಮಗೂ ದೂರು ಬಂದಿವೆ ಎಂದು ಹೇಳಿದರು.
2ಎ ಮೀಸಲಾತಿ ಕುರಿತು ಅಧಿವೇಶನದಲ್ಲಿ ಚೆರ್ಚೆ:ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಾನು ಸಿದ್ಧ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿಚಾರ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡುವಂತೆ ಸ್ಪೀಕರ್‌ಗೆ ಮನವಿ ಮಾಡಿದ್ದು, ಸಮಯಾಕಾಶ ಕೇಳಿದ್ದಾರೆ. ಈ ಬಗ್ಗೆ ಸ್ಪೀಕರ್ ನಿರ್ಧಾರದ ಬಳಿಕ ಎಲ್ಲಾ ಶಾಸಕರು ಸೇರಿ ಸಿಎಂಗೆ ತಿಳಿಸುತ್ತೇವೆ. ಅದಕ್ಕೆ ಸಿಎಂ ಏನು ಉತ್ತರ ಕೊಡುತ್ತಾರೆ ಕಾಯ್ದು ನೋಡುತ್ತೇವೆ. ಮೀಸಲಾತಿ ನೀಡಲು ಕಾನೂನುಗಳಲ್ಲಿ ಏನಾದರೂ ತೊಂದರೆ ಇದೆ ಎನ್ನುವುದನ್ನು ಗಮನಿಸಿ, ಈ ಬಗ್ಗೆ ಬರುವ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಅಸಹಾಯಕತೆಯಿಂದ ರಾಜೀನಾಮೆ ಬಗ್ಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜಕ್ಕಾಗಿ ನಾವು ತ್ಯಾಗ ಮಾಡಲು ಸಿದ್ಧ ಎಂದು ಹೇಳಿದ್ದೇನೆ. ಅಪಾರ್ಥ ಕಲ್ಪಿಸುವುದು ಬೇಡ. ಪತ್ರಕರ್ತರು ಅಧಿಕಾರ ತ್ಯಾಗ ಮಾಡಲಿಕ್ಕೂ ಸಿದ್ಧನಾ ಎಂದು ಕೇಳಿದಾಗ ನಾನು ಸಿದ್ಧ ಎಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.