ಸಾರಿಗೆ ನೌಕರರ ವೇತನ ಪರಿಷ್ಕರಣೆ ನನ್ನ ಕೈಯಲ್ಲಿಲ್ಲ: ರಾಮಲಿಂಗಾರೆಡ್ಡಿ

| Published : Nov 08 2025, 02:15 AM IST

ಸಾರಾಂಶ

ಶಕ್ತಿ ಯೋಜನೆಯಡಿ ಈ ವರೆಗೆ 593 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ₹15200 ಕೋಟಿ ಖರ್ಚು ಮಾಡಲಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹2 ಸಾವಿರ ಕೋಟಿ ಹಾಗೂ ಹೊಸ ಬಸ್ ಖರೀದಿಗೆ ₹800 ಕೋಟಿ ನೀಡಲಾಗಿದೆ.

ಹುಬ್ಬಳ್ಳಿ:

ಸಾರಿಗೆ ನೌಕರರ ವೇತನ ಪರಿಷ್ಕರಣೆ ನನ್ನ ಕೈಯಲ್ಲಿಲ್ಲ. ಈ ಕುರಿತು ಮುಖ್ಯಮಂತ್ರಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ತಡವಾಗುತ್ತಿದೆ. 1-1-2023ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು. ಅದು ಆಗದ ಕಾರಣ ತಾಂತ್ರಿಕ ದೋಷವಾಗಿ ಸಮಸ್ಯೆಯಾಗಿದೆ. ಶೀಘ್ರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು

ಶಕ್ತಿ ಯೋಜನೆಯಡಿ ಈ ವರೆಗೆ 593 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ₹15200 ಕೋಟಿ ಖರ್ಚು ಮಾಡಲಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹2 ಸಾವಿರ ಕೋಟಿ ಹಾಗೂ ಹೊಸ ಬಸ್ ಖರೀದಿಗೆ ₹800 ಕೋಟಿ ನೀಡಲಾಗಿದೆ ಎಂದರು.

ಸಾರಿಗೆ ಸಂಸ್ಥೆಯಲ್ಲಿ 2016ರಲ್ಲಿ ನೇಮಕಾತಿ ಆಗದೆ ಸಿಬ್ಬಂದಿ ಕೊರತೆಯಿಂದ ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಹೊರ ಗುತ್ತಿಗೆಗೆ ಕಡಿವಾಣವಾಗಲಿದೆ ಎಂದರು.

ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದ್ದು ಕಾಂಗ್ರೆಸ್ ಸಹಿ ಸಂಗ್ರಹ ಅಭಿಯಾನ ಮಾಡುತ್ತಿದೆ. ನನ್ನ ಕ್ಷೇತ್ರದಲ್ಲಿ 50 ಸಾವಿರ ಜನರ ಸಹಿ ಸಂಗ್ರಹವಾಗಿದೆ ಎಂದು ಸಚಿವರು ಹೇಳಿದರು.