ಯಾದಗಿರಿ ಜಿಲ್ಲೆಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರ ಬಿಸಿ

| Published : Aug 05 2025, 11:45 PM IST

ಸಾರಾಂಶ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಸಾರಿಗೆ ನೌಕರರು ಮಂಗಳವಾರ ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟಿಸಿದ್ದರಿಂದ ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಲಕ್ಷಾಂತರ ಪ್ರಯಾಣಿಕರು ಪರದಾಡಿದ ಪ್ರಸಂಗ ಎದುರಾಗಿತ್ತು.

ಕನ್ನಡಪ್ರಭ ವಾರ್ತೆ ಯಾದಗಿರಿ

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಸಾರಿಗೆ ನೌಕರರು ಮಂಗಳವಾರ ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟಿಸಿದ್ದರಿಂದ ಯಾದಗಿರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಲಕ್ಷಾಂತರ ಪ್ರಯಾಣಿಕರು ಪರದಾಡಿದ ಪ್ರಸಂಗ ಎದುರಾಗಿತ್ತು. ಮಧ್ಯಾಹ್ನದ ವೇಳೆಗೆ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎರಡು ದಿನ ತಾತ್ಕಾಲಿಕವಾಗಿ ಮುಷ್ಕರ ಹಿಂಪಡೆಯಲಾಗಿದೆ ಎಂದು ಹೇಳಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ದೇವೆಂದ್ರಪ್ಪ ಮ್ಯಾಗೇರಿ, ಮಂಗಳವಾರ ಸಂಜೆಯಿಂದ ಬಸ್ ಸಂಚಾರ ಶುರುವಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ ಮುಷ್ಕರದ ಲಾಭ ಪಡೆದ ಕೆಲವು ಖಾಸಗಿ ವಾಹನಗಳು, ನಿಗದಿತ ಎಂದಿನ ದರಕ್ಕಿಂತ ದುಪ್ಪಟ್ಟು ಹಣ ಪ್ರಯಾಣಿಕರಿಂದ ವಸೂಲಿ ಮಾಡಿಕೊಂಡವು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಕರೆ ಮೇರೆಗೆ ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದ ಯಾದಗಿರಿ ಜಿಲ್ಲೆಯ ನಾಲ್ಕು ಡಿಪೋಗಳ ಸುಮಾರು 700 ಚಾಲಕರು, ನಿರ್ವಾಹಕರು, ಮೆಕ್ಯಾನಿಕ್‌ಗಳು ಕರ್ತವ್ಯಕ್ಕೆ ಮಂಗಳವಾರ ಹಾಜರಾಗಲಿಲ್ಲ.

ಮುಷ್ಕರದ ಬಗ್ಗೆ ಅಷ್ಟೊಂದು ಮಾಹಿತಿ ಇರದಿದ್ದ ಅನೇಕ ಪ್ರಯಾಣಿಕರು ಬೆಳಿಗ್ಗೆಯಿಂದಲೇ ಎಂದಿನಂತೆ ಬಸ್‌ ನಿಲ್ದಾಣಗಳಿಗೆ ಆಗಮಿಸಿದಾಗ, ಮುಷ್ಕರದ ಬಿಸಿ ಅನುಭವಿಸಿದರು. ಆಗಷ್ಟೇ ಸಂಚಾರಕ್ಕೆ ಸಜ್ಜಾಗಿದ್ದ ನಾಲ್ಕು ಡಿಪೋಗಳ ಕೇವಲ 18 ಬಸ್ ಗಳು ಮಾತ್ರ ನಿಗದಿತ ಊರುಗಳಿಗೆ ಹೋಗಿದ್ದು, ಬಿಟ್ಟರೆ ಉಳಿದ್ಯಾವ ಬಸ್‌ಗಳೂ ಸಹ ರಸ್ತೆಗಿಳಿಯಲಿಲ್ಲ.

ಬೇರೆ, ಬೇರೆ ಊರುಗಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಸಾವಿರಾರು ಜನರು, ಶಾಲಾ ಕಾಲೇಜುಗಳಿಗೆ ತೆರಳಲಿದ್ದ ವಿದ್ಯಾರ್ಥಿಗಳು ಬಸ್ ಸಂಚಾರ ಸ್ಥಗಿತಗೊಂಡ ಬಗ್ಗೆ ಮಾಹಿತಿ ಪಡೆದು, ವಾಪಸ್ ಹೋಗಲೂ ಪರದಾಡಿದರು. ಈ ವೇಳೆ, ಬಸ್ ಸಂಚಾರ ಮುಷ್ಕರದಿಂದ ಸ್ಥಗಿತಗೊಂಡಿದೆ ಎಂಬ ಮಾಹಿತಿ ಗೊತ್ತಾಗುತ್ತಲೇ ನೂರಾರು ಖಾಸಗಿ ವಾಹನಗಳು, ಆಟೊ ರಿಕ್ಷಾಗಳು ಬಸ್ ನಿಲ್ದಾಣ ಹಾಗೂ ಬೀದಿಗಿಳಿದವಾದರೂ, ದುಪ್ಪಟ್ಟು ದರ ಪ್ರಯಾಣಿಕರ ಕಂಗಾಲಾಗಿಸಿತ್ತು.

ನಗರ ಸಂಚಾರಕ್ಕೆ ಮೀಸಲಾಗಿದ್ದ ಸಾವಿರಾರು ಆಟೊ ರಿಕ್ಷಾಗಳು ದೂರದ ಊರುಗಳಿಗೆ ಪ್ರಯಾಣ ಬೆಳೆಸಿದವು. ಹೀಗಾಗಿ, ಡಬಲ್ ಹಣ ನೀಡಿ ಪ್ರಯಾಣಿಸುವ ಅನಿವಾರ್ಯ ಒಂದಡೆಯಾದರೆ, ದೂರ ಮತ್ತು ಬೇರೆ ರಾಜ್ಯಗಳಿಗೆ ಹೋಗುವ ಅನೇಕ ಪ್ರಯಾಣಿಕರು ವಾಪಸ್ ಮನೆಗೆ ತೆರಳಿದರು. ಇನ್ನೂ ಕೆಲವರು ರೈಲುಗಳಲ್ಲಿ ಪ್ರಯಾಣಿಸಿದರು.

ಜಿಲ್ಲೆಯಲ್ಲಿ ನಾಲ್ಕು ಬಸ್ ಡಿಪೋಗಳಿದ್ದು, ಈ ಎಲ್ಲ ಕಡೆಗಳಿಂದ ನಿತ್ಯವು 232 ಬಸ್‌ಗಳ ನಿರ್ಗಮನವಾಗುತ್ತಿದ್ದು, ಇವೆಲ್ಲವೂ 372 ಶೆಡ್ಯೂಲ್ ಪ್ರಕಾರ ಸಂಚರಿಸುತ್ತದೆ. ಪ್ರತಿನಿತ್ಯ ಜಿಲ್ಲೆಯ ನಾಲ್ಕು ಡಿಪೊಗಳಿಂದ ಸುಮಾರು 1.30 ಲಕ್ಷ ಜನರು ಪ್ರಯಾಣ ಮಾಡುತ್ತಾರೆ.

ಎಚ್ಚರಿಕೆಯ ಮಧ್ಯೆಯೂ ಮುಷ್ಕರ:

ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಸಾರಿಗೆ ನೌಕರರ 300-400 ಸಿಬ್ಬಂದಿಗಳ ಜತೆಗೆ ಮಾತುಕತೆ ನಡೆಸಿ ಮುಷ್ಕರ ಬೇಡ, ಕಾನೂನು ಕೈಗೆ ತೆಗದುಕೊಳ್ಳಬೇಡಿ, ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದೇವೆ. ಆದರೂ, ಸಹ ಸಂಸ್ಥೆಯ ಸೂಚನೆ ಮೀರಿ ಮುಷ್ಕರದಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯೂ ಕೊಟ್ಟಿದ್ದೇವೆ ಎಂದು ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲಕುಮಾರ ಚಂದರಗಿ ತಿಳಿಸಿದರು.

ಕೋರ್ಟ್ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಮುಷ್ಕರ ವಾಪಸ್

ಯಾದಗಿರಿ: ಮಂಗಳವಾರ ಬೆಳಗ್ಗೆಯಿಂದ ಆರಂಭಗೊಂಡಿದ್ದ ಮುಷ್ಕರ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎರಡು ದಿನ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ದೇವೆಂದ್ರಪ್ಪ ಮ್ಯಾಗೇರಿ, ಮಂಗಳವಾರ ಸಂಜೆಯಿಂದಲೇ ಬಸ್ ಸಂಚಾರ ಶುರುವಾಗಲಿದೆ ಎಂದಿದ್ದಾರೆ. ಮಂಗಳವಾರ ಮತ್ತು ಬುಧವಾರ ಈ ಎರಡು ದಿನ ಮುಷ್ಕರ ಬೇಡ ಎಂಬ ಕೋರ್ಟ್ ಆದೇಶದ ಹಿನ್ನಲೆಯಲ್ಲಿ, ಸೋಮವಾರ ಮಧ್ಯಾಹ್ನ ಸಂಘದ ರಾಜ್ಯಾಧ್ಯಕ್ಷರು ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಅವರು ಹೇಳಿದ್ದಾರೆ. ಆ.7 ರಿಂದ ಮುಷ್ಕರ ಮತ್ತೆ ಮುಂದುವರೆಯುವ ಬಗ್ಗೆ ಸಂಘದ ರಾಜ್ಯಾಧ್ಯಕ್ಷರು ಸೂಚನೆ ನೀಡಿದರೆ ಮುಷ್ಕರ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.