ಪರಿಣಾಮ ಬೀರದ ಸಾರಿಗೆ ನೌಕರರ ಮುಷ್ಕರ

| Published : Aug 06 2025, 01:15 AM IST

ಸಾರಾಂಶ

ಬೆಳಗ್ಗೆ ಕೆಲವು ಬಸ್‌ಗಳು ಮಾತ್ರ ಡಿಪೋದಿಂದ ಹೊರಟವು, ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಅವರನ್ನು ಮನವೊಲಿಸಲಾಯಿತು. ಮಧ್ಯಾಹ್ನದ ನಂತರ ಬಸ್ಸುಗಳು ಎಂದಿನಂತೆ ಸಂಚರಿಸಿದವು .

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹಿಂಬಾಕಿ ವೇತನ, ಸೇವಾ ಭದ್ರತೆ, 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನ ಹಾಗೂ ನಿವೃತ್ತಿ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಗಳ ಒಕ್ಕೂಟ ಹಾಗೂ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಜಿಲ್ಲಾ ಕೇಂದ್ರದಲ್ಲಿ ಅಂತಹ ಪರಿಣಾಮ ಬೀರದೆ ಭಾಗಶಃ ಯಶಸ್ವಿಯಾಯಿತು. ಬೆಳಗ್ಗೆ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿದವು, ನಂತರ ಮಧ್ಯಾಹ್ನದವರೆಗೆ ಬಸ್ ಸಂಚಾರ ಸ್ಥಗಿತಗೊಂಡಿತ್ತು, ಮಧ್ಯಾಹ್ನದ ನಂತರ ಎಂದಿನಂತೆ ಸಂಚಾರ ಪ್ರಾರಂಭವಾಯಿತು, ಸ್ಥಗಿತದ ಸಂದರ್ಭದಲ್ಲಿ ಖಾಸಗಿ ಬಸ್ಸುಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಾಲಾಗಿ ನಿಂತು ಚಾಮರಾಜನಗರ- ಮೈಸೂರಿಗೆ ಪ್ರಯಾಣಿಕರನ್ನು ಕರೆದೊಯ್ದಿದ್ದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಲಿಲ್ಲ .

ಬೆಳಗ್ಗೆ 6 ಗಂಟೆಯಿಂದ 11 ಗಂಟೆ ತನಕ ಬಸ್ ಸಂಚಾರದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಇದರಿಂದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ನಂತರ ಯಾವುದೇ ತೊಂದರೆ ಇಲ್ಲದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಎಂದಿನಂತೆ ಬಸ್ ಸಂಚಾರ ಆರಂಭವಾಯಿತು. ಮುಷ್ಕರದಿಂದ ವಿದ್ಯಾರ್ಥಿಗಳು, ನೌಕರರು ಹಾಗೂ ದೂರದೂರಿಗೆ ಹೋಗಬೇಕಾದ ಪ್ರಯಾಣಿಕರು ಸ್ವಲ್ಪ ಮಟ್ಟಿಗೆ ಪರದಾಡುವ ಸ್ಥಿತಿ ಎದುರಿಸಬೇಕಾಯಿತು, ರಾಜ್ಯ ಸರ್ಕಾರ ಯಾವುದೇ ಸ್ಪಷ್ಟ ಭರವಸೆ ನೀಡದ ಹಿನ್ನೆಲೆಯಲ್ಲಿ ನೌಕರರು ಕೆಲಸಕ್ಕೆ ಹಾಜರಾಗದೆ ಮುಷ್ಕರ ಆರಂಭಿಸಿದ್ದರು.

ಈ ಕುರಿತು ಮಾತನಾಡಿದ ಕೆಎಸ್ಆರ್ ಟಿಸಿ ಡಿಸಿ ಅಶೋಕ್ ಕುಮಾರ್, ಬೆಳಗ್ಗೆ ಕೆಲವು ಬಸ್‌ಗಳು ಮಾತ್ರ ಡಿಪೋದಿಂದ ಹೊರಟವು, ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಅವರನ್ನು ಮನವೊಲಿಸಲಾಯಿತು. ಮಧ್ಯಾಹ್ನದ ನಂತರ ಬಸ್ಸುಗಳು ಎಂದಿನಂತೆ ಸಂಚರಿಸಿದವು ಎಂದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಬಸ್ ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಾರಿಗೆ ನೌಕರರ ಪ್ರತಿಭಟನೆ ವಿಚಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಲಿದ್ದು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನೌಕರರು ಹೆದರಿ ಕೆಲಸಕ್ಕೆ ಹಾಜರಾದರು.

ಕೆಎಸ್‌ಆರ್‌ಟಿಸಿ ಬಸ್ ಮುಷ್ಕರದಿಂದಾಗಿ ಮೈಸೂರು, ಬೆಂಗಳೂರಿಗೆ ತೆರಳಬೇಕಾದ ಪ್ರಯಾಣಿಕರು ರೈಲಿನಲ್ಲಿ ಸಂಚರಿಸಿದರು.