ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಿ: ಶ್ರೀದೇವಿ ಪಾಟೀಲ

| Published : Jan 26 2025, 01:30 AM IST

ಸಾರಾಂಶ

ಹೆಣ್ಣನ್ನು ಗೌರವದಿಂದ ಕಾಣಬೇಕೆಂಬ ಮನೋಭಾವವನ್ನು ಮೂಡಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಯಲ್ಲಾಪುರ: ಮಾನವ ಜನ್ಮ ಶ್ರೇಷ್ಠವಾದುದಾಗಿದ್ದು, ಹೆಣ್ಣಾಗಿ ಜನಿಸುವುದು ಇನ್ನೂ ಶ್ರೇಷ್ಠವಾದುದು. ಅದೃಷ್ಟವಂತರ ಕುಟುಂಬದಲ್ಲಿ ಮಾತ್ರ ಹೆಣ್ಣು ಹುಟ್ಟಲು ಸಾಧ್ಯ. ಇಂದು ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆಗಳ ಮೂಲಕ ಯಾವ ಪುರುಷರಿಗೂ ಕಡಿಮೆಯಿಲ್ಲದಂತೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀದೇವಿ ಪಾಟೀಲ ತಿಳಿಸಿದರು.ಜ. ೨೪ರಂದು ಮಂಚಿಕೇರಿಯ ಪಪೂ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ರಾಜ್ಯ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿನಿ ಸಮೃದ್ಧಿ ಭಾಗ್ವತ ಅವರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.ಹೆಣ್ಣನ್ನು ಗೌರವದಿಂದ ಕಾಣಬೇಕೆಂಬ ಮನೋಭಾವವನ್ನು ಮೂಡಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಸರ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.ರಾಜ್ಯ ಯುವ ಪ್ರಶಸ್ತಿ ವಿಜೇತ ಶಿಕ್ಷಕ ಸಣ್ಣಪ್ಪ ಭಾಗ್ವತ ಅವರು, ಹೆಣ್ಣು ಈ ಸಮಾಜದ ಕಣ್ಣು ಎಂದರು.ಅಧ್ಯಕ್ಷತೆ ವಹಿಸಿದ್ದ ಕಂಪ್ಲಿ ಗ್ರಾಪಂ ಸದಸ್ಯ ಗಣೇಶ ರೋಖಡೆ ಮಾತನಾಡಿ, ಹೆಣ್ಣು ಸಮಾಜವನ್ನು ಸಮರ್ಪಕ ಮಾರ್ಗದಲ್ಲಿ ಸಾಗಿಸುವ ಮಹಾ ತಾಯಿಯಾಗಿದ್ದಾಳೆ. ಅವಳ ಆದರ್ಶವೇ ಸಮಾಜಕ್ಕೆ ದಾರಿದೀಪವಾಗುತ್ತದೆ ಎಂದರು.ಮಂಚಿಕೇರಿಯ ಪಪೂ ಕಾಲೇಜು ಪ್ರಾಂಶುಪಾಲ ಡಿ.ಜಿ. ಹೆಗಡೆ, ಮಂಚಿಕೇರಿಯ ವೈದ್ಯಾಧಿಕಾರಿ ಡಾ. ಅಸೀಫ್ ಸಯ್ಯದ್ ಇದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಂಚೀಕೇರಿ ವಿಭಾಗದ ಮೇಲ್ವಿಚಾರಕಿ ಈರವ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಉಪನ್ಯಾಸಕಿ ಸಂಗೀತಾ ಪಟಗಾರ ಸ್ವಾಗತಿಸಿದರು. ಜಯಶ್ರೀ ಮೊಗೇರ ನಿರ್ವಹಿಸಿದರು. ರೇಣುಕಾ ಪೂಜಾರಿ ವಂದಿಸಿದರು. ಕಾರ್ಯಕ್ರಮದ ಪ್ರಯುಕ್ತ ಪ್ರದರ್ಶನಗೊಂಡ ಚಿಕ್ಕಮಕ್ಕಳ ಛದ್ಮವೇಷ ಗಮನ ಸೆಳೆಯಿತು.

ಹೆಣ್ಣುಮಕ್ಕಳು ಪ್ರತಿ ಮನೆಯ ಆಸ್ತಿ

ಹಳಿಯಾಳ: ಹೆಣ್ಣುಮಕ್ಕಳು ಪ್ರತಿ ಮನೆಯ ಆಸ್ತಿ. ಹೆಣ್ಣುಮಗುವಿನಿಂದ ಮನೆ, ಕುಟುಂಬ ಬೆಳೆಯುತ್ತದೆ, ಬೆಳಗುತ್ತದೆ ಎಂಬುದು ಸತ್ಯ. ಹೆಣ್ಣು ಕುಟುಂಬದ ಶಕ್ತಿ ಎಂದು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ ಕದಂ ತಿಳಿಸಿದರು.ಶುಕ್ರವಾರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹೆಣ್ಣುಮಕ್ಕಳ ಹಕ್ಕುಗಳು, ಶಿಕ್ಷಣ, ಆರೋಗ್ಯ, ಪೋಷಣೆಯ ಮಹತ್ವದ ಬಗ್ಗೆ, ಬಾಲ್ಯವಿವಾಹ, ತಾರತಮ್ಯ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಅಸಮಾನತೆ ಸೇರಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಹಲವಾರು ಸವಾಲುಗಳು ಸಮಸ್ಯೆಗಳನ್ನು ಪರಿಹರಿಸಲು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಒಂದು ವೇದಿಕೆಯಾಗಿದೆ ಎಂದರು.

ಮಕ್ಕಳ ತಜ್ಞ, ಹಿರಿಯ ವೈದ್ಯ ಡಾ. ಶ್ರೀಶೈಲ್ ಮಾದಣ್ಣನವರ ಮಾತನಾಡಿ, ಹೆಣ್ಣುಮಗು ಎಂದರೆ ಜೀವನದ ನಿಜವಾದ ಉಡುಗೊರೆ. ಹೆಣ್ಣು ಮಕ್ಕಳೆಂದರೆ ಹೆತ್ತವರ ಪಾಲಿಗೆ ಶಾಶ್ವತವಾಗಿ ಅರಳುವ ಹೂವುಗಳು. ಇದು ವಾಸ್ತವಿಕ ಸತ್ಯವಾದರೂ ಸಮಾಜವು ಹೆಣ್ಣುಮಕ್ಕಳ ಬಗ್ಗೆ ತಾಳುವ ತಾತ್ಸಾರ ಭಾವನೆಯಿಂದ ಹೊರಬರಬೇಕಾಗಿದೆ ಎಂದರು.

ಡಾ. ಗುರುಪ್ರಸಾದ ಆಚಾರಿ ಹಾಗೂ ಸಿಬ್ಬಂದಿ ಇದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮುರಿ ಮಾತನಾಡಿದರು. ಮೆಟ್ರನ್ ತೇಜಸ್ವಿನಿ ಕಾರ್ಯಕ್ರಮ ನಿರ್ವಹಿಸಿದರು.