ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಸಮಾಜದ ಸಂಘಟನೆಯ ಜೊತೆಗೆ ಬೇರೆ ಸಮಾಜವನ್ನು ಪ್ರೀತಿ, ವಿಶ್ವಾಸ, ಗೌರವದಿಂದ ಕಾಣಬೇಕು. ಆಗ ನಿಮ್ಮಲ್ಲಿ ನಾಯಕತ್ವವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಶ್ರೀಸಿದ್ಧೇಶ್ವರ ದೇವಸ್ಥಾನದಲ್ಲಿ ಭಾನುವಾರ ತಾಲೂಕು ಗಾಣಿಗ ಸಮಾಜ ಕ್ಷೇಮಾಭಿವದ್ಧಿ ಸಂಘ, ಜ್ಯೋತಿ ಪತ್ತಿನ ಸಹಕಾರಿ ಸಂಘ, ಗಾಣಿಗ ಸಮಾಜ ನೌಕರರ, ಯುವ, ಮಹಿಳಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ಶಕ್ತಿಯಾಗಿ ಮೇಲೆ ಬರಬೇಕಾದರೆ ಎಲ್ಲರನ್ನೂ ನಮ್ಮರೆಂಬ ಭಾವನೆಯಿಂದ ಅಪ್ಪಿಕೊಂಡಾಗ ಅದು ಸಾಧ್ಯವಾಗುತ್ತದೆ. ಸಮಾಜವು ತಾಲೂಕಿನಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಬೇಕು. ಸ್ವಂತ ₹೨೧ ಲಕ್ಷ ಧನ ಸಹಾಯ ಮಾಡುವುದರ ಜೊತೆಗೆ ಬೀಳಗಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರಿಗೂ ಸಹ ಧನ ಸಹಾಯ ಮಾಡಲು ಹೇಳುವುದಾಗಿ ತಿಳಿಸಿದರು.ಸಂಸದ ಪಿ.ಸಿ.ಗದ್ದಿಗೌಡರ ಸನ್ಮಾನ ಸ್ವೀಕರಿಸಿ ಮಾತನಾಡಿ, ಒಳ್ಳೆಯ ಸಂಸ್ಕಾರವನ್ನು ಪಡೆದು ಸಮಾಜದಲ್ಲಿ ಸಾತ್ವಿಕ ಜೀವನವನ್ನು ನಡೆಸುವಂತ ನಾಯಕನಾಗಬೇಕು. ಮಗುವಿದ್ದಾಗಲೇ ಅವನಲ್ಲಿ ಉತ್ತಮ ಸಂಸ್ಕಾರ ತುಂಬುವಂತಹ ಕೆಲಸ ಮಾಡಬೇಕು. ಮಕ್ಕಳಿಗೆ ಪುರಸ್ಕಾರ, ಸನ್ಮಾನ ಮಾಡುವುದರಿಂದ ಅವರಲ್ಲಿ ಉತ್ಸಾಹ, ಹುಮ್ಮಸ್ಸು ಮೂಡುತ್ತದೆ ಎಂದರು.
ಅನ್ಯ ಸಮಾಜದ ಜೊತೆಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡು ಅನನ್ಯವಾದ ಬದುಕು ಸಾಗಿಸಬೇಕು. ಇದರಿಂದಾಗಿ ಸಮಾಜಕ್ಕೆ ಹೆಚ್ಚು ಗೌರವ ಸಲ್ಲುತ್ತದೆ. ಉತ್ತಮ ಸಮಾಜ ಕಟ್ಟಿದ ಹೆಗ್ಗಳಿಕೆ ನಮ್ಮದಾಗುತ್ತದೆ. ದೇಶದ ಅಭಿವದ್ಧಿಯಲ್ಲಿ ಪಕ್ಷಬೇಧ ಮರೆತು ಕೆಲಸ ಮಾಡಬೇಕು ಎಂದರು.ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ಹನುಮಂತ ಸೂಳಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಬಿಜೆಪಿ ಬೆಳಗಾವಿ ವಿಭಾಗದ ಸಹಪ್ರಭಾರಿ ಬಸವರಾಜ ಯಂಕಂಚಿ, ಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಿವಪ್ಪ ಅವಟಿ, ಪಪಂ ಮಾಜಿ ಅಧ್ಯಕ್ಷ ವಿಠ್ಠಲ ಬಾಗೇವಾಡಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸನ್ಮಾನಿಸಿ, ಗೌರವಿಸಲಾಯಿತು.ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಅಭಿನಂದನಾ ಪತ್ರ ಓದಿ ಸಂಸದ ಪಿ.ಸಿ.ಗದ್ದಿಗೌಡರಿಗೆ ಅರ್ಪಿಸಿದರು. ಕುಳ್ಳೂರ-ಯಡಹಳ್ಳಿ ಶ್ರೀಗುರು ಶಿವಯೋಗೀಶ್ವರ ಸಂಸ್ಥಾನ ಕಲ್ಮಠದ ಬಸವಾನಂದ ಭಾರತಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಆರ್.ಜಿ.ಪಾಟೀಲ, ಅಶೋಕ ಲಾಗಲೋಟಿ, ಈರಣ್ಣ ಗಿಡ್ಡಪ್ಪಗೋಳ, ಬಸವರಾಜ ಬಗಲಿ, ಬಿ.ಕೆ.ಸುಳ್ಳದ, ಶೋಭಾ ಬಗಲಿ, ನಿಂಗಪ್ಪ ಹುಗ್ಗಿ, ಹನಮಂತ ಮೆಳ್ಳಿಗೇರಿ ಮತ್ತಿತರಿದ್ದರು.
--ಬಾಕ್ಸ್
ಹೊರ ದಬ್ಬಿದ್ದರಿಂದ ಕಾಂಗ್ರೆಸ್‌ಗೆ ಬಂದೆ: ಸವದಿಬಿಜೆಪಿಯನ್ನು ನಾನು ತಾಯಿಯ ಸ್ಥಾನದಲ್ಲಿ ಕಾಣುತ್ತಾ ಬಂದಿದ್ದೆ. ಅಲ್ಲಿರುವ ಕೆಲವು ನಾಯಕರು ಯಾರದೋ ಮಾತುಗಳನ್ನು ಕೇಳಿ ನನ್ನನ್ನು ಹೊರ ದಬ್ಬಿದರು. ಆಗ ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕಾಯಿತು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್. ಯಡಿಯೂರಪ್ಪ ಬಂದು ನನ್ನನ್ನು ಸೋಲಿಸುವಂತೆ ಭಾಷಣ ಮಾಡಿದರು. ಆದರೆ ನನ್ನ ಕ್ಷೇತ್ರದ ಜನರು ಪ್ರತಿಷ್ಠೆಯಾಗಿ ತೆಗೆದುಕೊಂಡು ನನ್ನನ್ನು ೭೬ ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ತಂದುಕೊಟ್ಟರು. ಕೇವಲ ಒಂದು ಸಮಾಜದಿಂದ ವ್ಯಕ್ತಿ ಬೆಳೆಯಲು ಸಾಧ್ಯವಿಲ್ಲ. ಹಲವಾರು ಸಮಾಜವನ್ನು ಸಮಾನಾಂತರವಾಗಿ ತೆಗೆದುಕೊಂಡು ಹೋದಾಗ ಒಬ್ಬ ವ್ಯಕ್ತಿ ಶಕ್ತಿಯಾಗಿ ಬೆಳೆಯಲು ಸಾಧ್ಯ. ಸಮಾಜದ ಋಣವನ್ನು ಕಡಿಮೆ ಮಾಡಿಕೊಳ್ಳಲು ಶಕ್ತಿ ಇದ್ದಷ್ಟು ಸಹಾಯ ಮಾಡುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು.;Resize=(128,128))
;Resize=(128,128))