ಕನ್ನಡಪ್ರಭ ವಾರ್ತೆ, ತುಮಕೂರು

ನವಜಾತ ಶಿಶುಗಳಲ್ಲಿ ಕರುಳಿನ ಅಡಚಣೆಯಂತಹ ಮಾರಣಾಂತಿಕ ರೋಗವನ್ನು ಪತ್ತೆ ಹಚ್ಚಿ, ಶಸ್ತ್ರಚಿಕಿತ್ಸೆ ಮಾಡಿ, ನವಜಾತ ಶಿಶುವಿಗೆ ಮರುಜೀವ ನೀಡುವಲ್ಲಿ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಮಕ್ಕಳ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯ ಡಾ.ಸುಬ್ರಮಣ್ಯ ನೇತೃತ್ವದ ತಂಡ ಯಶಸ್ವಿಯಾಗಿದೆ.

ಮಗುವಿನ ಶಸ್ತ್ರ ಚಿಕಿತ್ಸೆ ಮಾಡಿ ಮಗುವಿನ ಕರುಳಿನ ಅಡಚಣೆ ಸಮಸ್ಯೆಯಿಂದ ಪಾರು ಮಾಡಿದ್ದಾರೆ. ಈ ರೋಗದಿಂದ ನವಜಾತ ಶಿಶುವಿನಲ್ಲಿ ಕರುಳು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಿಕೊಂಡು, ಹಾಲು, ದ್ರವ ಹಾಗೂ ಗಾಳಿ ಸರಿಯಾಗಿ ದೇಹದೊಳಗೆ ಸಾಗುವುದಿಲ್ಲ. ಇದು ತುರ್ತುಸ್ಥಿತಿಯಾಗಿದ್ದು, 2,000 ಜೀವಂತ ಜನನಗಳಲ್ಲಿ ಸುಮಾರು ಓರ್ವರಲ್ಲಿ ಕಂಡುಬರುತ್ತದೆ. ಇದನ್ನು ಹಿರ್ಶಸ್ಪ್ರಂಗ್ ಕಾಯಿಲೆ ಎಂದೂ ಕರೆಯಲಾಗುತ್ತದೆ.

ಇಂತಹ ಅಪರೂಪದ ಕಾಯಿಲೆಯಿಂದ ಪಾರಾಗಿರುವ ಮಗು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನದ್ದು. ಸ್ಥಳೀಯ ಪ್ರಾಥಮಿಕ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆಯಿಂದ ಸೇರಿ ಆನಂತರ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ನವಜಾತ ಶಿಶುವನ್ನು ಪರೀಕ್ಷೆಗೊಳಪಡಿಸಲಾಯಿತು. ಪ್ರಾಥಮಿಕ ಪರೀಕ್ಷೆಯಲ್ಲಿ ಜನನದ 18 ಗಂಟೆಯಲ್ಲಿ ಪಿತ್ತರಸದ ಆಸ್ಪಿರೇಟ್‌ಗಳು ಮತ್ತು ಹೊಟ್ಟೆಯ ಉಬ್ಬುವಿಕೆಯನ್ನು ಮಗುವಿನಲ್ಲಿ ಗುರುತಿಸಲಾಯಿತು. ನಂತರ ಆಧುನಿಕ ಸೌಲಭ್ಯ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಸಮಗ್ರವಾಗಿ ಮಗುವನ್ನು ಪರೀಕ್ಷೆಗೊಳಪಡಿಸಿ ರೋಗನಿರ್ಣಯದ ಕೆಲಸವನ್ನು ನಡೆಸಲಾಯಿತು.

ಶಿಶುವಿನ ಪೋಷಕರು ಎದುರಿಸಿದ ಗಮನಾರ್ಹವಾದ ಆರ್ಥಿಕ ಮುಗ್ಗಟ್ಟಿನ ಹೊರತಾಗಿಯೂ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯ ತಜ್ಞ ವೈದ್ಯರ ತಂಡದ ಸಹಯೋಗದ ಪ್ರಯತ್ನ, ಸಕಾಲಿಕ ಬೆಂಬಲದಿಂದ ಶಸ್ತ್ರಚಿಕಿತ್ಸೆ ಮಾಡಿ ಶಿಶುವಿಗೆ ಅಗತ್ಯವಾದ ವೈದ್ಯಕೀಯ ಆರೈಕೆಯನ್ನು ನೀಡಲಾಯಿತು.