ಬೆಂಗಳೂರಿನಲ್ಲಿ ಮರ, ಕೊಂಬೆ ಬಿದ್ದು 6 ಮಂದಿ ಆಸ್ಪತ್ರೆಗೆ

| Published : May 16 2024, 01:49 AM IST / Updated: May 16 2024, 11:48 AM IST

ಸಾರಾಂಶ

ಬೆಂಗಳೂರಿನಲ್ಲಿ ಮಳೆ, ಗಾಳಿಗೆ ಮರ, ಕೊಂಬೆ ಬಿದ್ದು 6 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಾಯಕಾರಿ ಮರ ತೆರವು ಮಾಡದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

 ಬೆಂಗಳೂರು :  ಪೂರ್ವ ಮುಂಗಾರು ಅವಧಿಯಲ್ಲಿ ಬೆಂಗಳೂರಿನಲ್ಲಿ ಮರ ಹಾಗೂ ಮರದ ಕೊಂಬೆ ಬಿದ್ದು, ಆಸ್ಪತ್ರೆ ಸೇರಿದ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಕಳೆದ ಮಾರ್ಚ್‌ನಿಂದ ಈವರೆಗೆ ಬೆಂಗಳೂರಿನಲ್ಲಿ ಮರ ಹಾಗೂ ಮರದ ಕೊಂಬೆ ಬಿದ್ದು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು 30 ವರ್ಷದ ಒಳಗಿನವರಾಗಿದ್ದಾರೆ. ಮತ್ತೊಬ್ಬರು 38 ವರ್ಷ ಹಾಗೂ ಇನ್ನಿಬ್ಬರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಬಿಬಿಎಂಪಿಯು ನಗರದಲ್ಲಿ ಅಪಾಯಕಾರಿ ಮರ ಹಾಗೂ ಮರದ ಕೊಂಬೆಗಳು, ಒಣಗಿದ ಮರಗಳನ್ನು ತೆರವುಗೊಳಿಸದಿರುವುದೇ ಈ ದುರಂತಕ್ಕೆ ಕಾರಣ ಎಂದು ಗಾಯಗೊಂಡರು ಆರೋಪಿಸಿದ್ದಾರೆ.

ಗಾಯಗೊಂಡವರ ಪೈಕಿ ಇನ್ನೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಮಂದಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೂರು ಮಂದಿಗೆ ಮಾತ್ರ ಬಿಬಿಎಂಪಿ ಈವರೆಗೆ ತಲಾ 5 ಲಕ್ಷ ರು. ಪರಿಹಾರ ನೀಡಿದೆ. ಇನ್ನುಳಿದವರೆಗೆ ಯಾವುದೇ ಪರಿಹಾರ ನೀಡಿಲ್ಲ.

ವಾರದ ಮಳೆಗೆ 336 ಮರ ಧರೆಗೆ

ಮೇ ಆರಂಭದಿಂದ ಈವರೆಗೆ ಒಟ್ಟು ಏಳು ದಿನ ಬೆಂಗಳೂರಿನಲ್ಲಿ ಮಳೆಯಾಗಿದೆ. ಏಳು ದಿನದ ಮಳೆಗೆ ಒಟ್ಟು 336 ಮರ ಹಾಗೂ 697 ಮರದ ಕೊಂಬೆ ಬಿದ್ದಿವೆ. ನಗರದಲ್ಲಿ ಇನ್ನು ಹಲವು ರಸ್ತೆ ಪಕ್ಕದಲ್ಲಿ ಮರದ ಕೊಂಬೆಗಳು ಹಾಗೇ ಬಿದ್ದಿವೆ. ಮರದ ಕೊಂಬೆಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿರುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ಓಡಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸಲಾಗುವುದು. ಈ ರೀತಿ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದಕ್ಕೆ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ ಅರಣ್ಯ ವಿಭಾಗ