ಸಾರಾಂಶ
ಗೋಕರ್ಣ: ಮನೆ ಕಟ್ಟುವ ಸಂದರ್ಭದಲ್ಲಿ ಅನಿವಾರ್ಯವಾಗಿ ಮರ ಕಟಾವು ಮಾಡಿದ್ದರಿಂದ ಪ್ರಾಯಶ್ಚಿತ್ತವಾಗಿ 101 ಸಸಿ ನೆಡುವ ಕಾರ್ಯದ ಜತೆಗೆ ತನ್ನ ಬಾಲ್ಯದ ಸಹಪಾಠಿಗಳನ್ನು ಒಗ್ಗೂಡಿಸಿ, ಪರಿಸರ ಕಾಳಜಿ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಹನೇಹಳ್ಳಿ ಗ್ರಾಪಂನ ಬಿದ್ರಗೇರಿಯಲ್ಲಿ ಗುರುವಾರ ನಡೆಯಿತು.
ಗೋಕರ್ಣದಲ್ಲಿ ವಿದ್ಯಾಭ್ಯಾಸ ಮಾಡಿ ಪುಣೆಯಲ್ಲಿ ವಿಜ್ಞಾನಿಯಾಗಿರುವ ಅಂಕೋಲಾದ ಡಾ. ಕಿರಣ ಅಂಕ್ಲೇಕರ ಕಳೆದ ವರ್ಷದಿಂದ ಈ ಕಾರ್ಯ ಮಾಡುತ್ತಿದ್ದಾರೆ. ಅದರಂತೆ ಈ ವರ್ಷ ಅರಣ್ಯ ಇಲಾಖೆಯ ಹಿರೇಗುತ್ತಿ ವಲಯ, ಚಾಮಿ ವಿದ್ಯಾವಾಹಿನಿ ಟ್ರಸ್ಟ್, ಸೇವಾಭಾರತಿ, ತಮ್ಮ ಬಾಲ್ಯದ ಸಹಪಾಠಿಗಳು ಸಹಯೋಗದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ವಿವಿಧ ಜಾತಿ ಗಿಡಗಳನ್ನು ನೆಟ್ಟರು.ಡಾ.ಕಿರಣ ಅಂಕ್ಲೇಕರ ಮಾತನಾಡಿ, ಮರ ಕಟಾವು ಮಾಡಿದ್ದಕ್ಕಾಗಿ 101 ಗಿಡ ನೆಟ್ಟಿದ್ದೇನೆ. ವಿದ್ಯಾರ್ಥಿಗಳು ನೆಟ್ಟ ಗಿಡಕ್ಕೆ ಅವರವರ ಹೆಸರು ಇಡಲಾಗಿದೆ. ಅವರೇ ಆ ಗಿಡವನ್ನು ಪೋಷಿಸಬೇಕು. ಮುಂದಿನ ಬಾರಿ ಯಾರು ಉತ್ತಮ ನಿರ್ವಹಣೆ ಮಾಡಿದ್ಧೀರಿ ಎಂಬುದನ್ನು ಪರಿಶೀಲಿಸಿ ಅವರಿಗೆ ಬಹುಮಾನ ನೀಡುತ್ತೇನೆ ಎಂದರು.
ಇಲ್ಲಿನ ವಿಶಾಲ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿವೆ. ನಿಮ್ಮ ಕಾಲಕ್ಕೆ ಪುಟ್ಟಹಳ್ಳಿಯಲ್ಲಿ ಕಾಡು ಮಾಯವಾಗಬಾರದು ಎಂಬ ಉದ್ದೇಶದಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಅಡಿ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಗ್ರಾಮದ ಪ್ರಮುಖರಾದ ಪುರಂದರ ಗೌಡ, ಚಾಮಿ ವಿದ್ಯಾವಾಹಿನಿ ಟ್ರಸ್ಟ್ ಕಾರ್ಯದರ್ಶಿ ಪ್ರಕಾಶ ನಾಡ್ಕರ್ಣಿ, ಖಜಾಂಚಿ ರವಿ ಗುನಗಾ, ರಾಜೀವ ಬೈಲಕೇರಿ, ಶ್ರೀಶೈಲಾ, ಸತೀಶ ಚಂದಾವರ, ಮೋಹನ ಗುನಗ, ಮೋಹನ ಹೆಗಡೆ, ಸುವರ್ಣಾ ಪ್ರಸಾದ ಇದ್ದರು. ಶಿಕ್ಷಕಿ ಭವಾನಿ ಹೊಸ್ಮನೆ ಕಾರ್ಯಕ್ರಮ ನಿರ್ವಹಿಸಿದರು.