ಮೊಳೆ, ಫಲಕ, ಸರಪಳಿಯಲ್ಲಿ ಬಂಧಿಯಾದ ಮರಗಳು!

| Published : Mar 24 2024, 01:30 AM IST

ಸಾರಾಂಶ

ಮಹಾನಗರದಲ್ಲಿ ಗಿಡಮರಗಳು ರಸ್ತೆಯ ಅಕ್ಕಪಕ್ಕದಲ್ಲಿ, ಸುತ್ತಲಿನ ಪರಿಸರದಲ್ಲಿ ನಮಗೆ ಕಾಣಸಿಗುತ್ತವೆ. ಕೆಲವು ಜನನಿಬಿಡ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ಇಂದಿಗೂ ಗಟ್ಟಿಯಾಗಿ ನಿತ್ಯ ನೂರಾರು ಜನರಿಗೆ ನೆರಳಿನ ಆಶ್ರಯ ನೀಡಿ ಸಲಹುತ್ತಿವೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹೇ ಮಾನವ ಏನಾಗಿದೆ ನಿನಗೆ. ನಿನಗಾಗಿ ಉಸಿರು (ಆಮ್ಲಜನಕ) ನೀಡಿ ನಿನ್ನ ಬದುಕಿನ ಭಾಗವಾಗಿರುವ ನನಗೆ ನೀನು ಮಾಡುತ್ತಿರುವುದಾದರೂ ಏನು?

ನನ್ನ ಮೈತುಂಬಾ ಎಲ್ಲೆಂದರಲ್ಲಿ ಮೊಳೆ ಹೊಡೆಯುವ ನಿನಗೆ ನನ್ನ ರೋದನೆ ಕೇಳಿಸುತ್ತಿಲ್ಲವೇ? ಈಗಲಾದರೂ ಬದಲಾಗು, ಬದಲಾಗದೇ ಇದ್ದರೆ ನಿನ್ನ ಅಳಿವಿಗೆ ನೀನೇ ಕಾರಣನಾಗುತ್ತೀಯಾ...

ಅವನ್ಯಾರೋ ಎಲ್ಲಿಂದಲೋ ಬಂದು ನನ್ನ ಮೈತುಂಬಾ ಮೊಳೆ ಹೊಡೆದು ಫಲಕಗಳನ್ನು ನೇತುಹಾಕಿ ಹೋಗುತ್ತಾನೆ. ಇನ್ನೊಬ್ಬ ಬರುತ್ತಾನೆ, ನನಗೆ ಜೈಲಿನಲ್ಲಿರುವ ಖೈದಿಯಂತೆ ಸರಳುಗಳನ್ನು ಹಾಕಿ ವಸ್ತುಗಳನ್ನು ಕಟ್ಟಿ ಹೋಗುತ್ತಾನೆ. ಮತ್ಯಾರೋ ಬರುತ್ತಾನೆ, ನನ್ನ ಬುಡಕ್ಕೆ ಕಸದ ನೆಪವನ್ನಿಟ್ಟುಕೊಂಡು ಬೆಂಕಿ ಹಚ್ಚುತ್ತಾನೆ.

ಹೀಗೆ ನನ್ನ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ಕೇಳುವವರೇ ಇಲ್ಲದಂತಾಗಿದೆ. ಅಲ್ಲೊಬ್ಬ ಇಲ್ಲೊಬ್ಬ ಪರಿಸರಪ್ರೇಮಿ ಧ್ವನಿ ಎತ್ತುತ್ತಾನೆ. ಆದರೆ, ಸರಿಯಾದ ಸ್ಪಂದನೆ ದೊರೆಯದೇ ಅವನೂ ನನ್ನ ಈ ಸ್ಥಿತಿ ನೋಡಿ ಮರಗುತ್ತಾ ಮುಂದೆ ನಡೆಯುತ್ತಾನೆ. ಇದು ಹು-ಧಾ ಮಹಾನಗರದಲ್ಲಿ ನನಗಿರುವ ಸ್ಥಿತಿ. ಈಗಲಾದರೂ ಪರಿಸರ ಪ್ರೇಮಿಗಳು, ಸಾರ್ವಜನಿಕರು ಎಚ್ಚೆತ್ತು ನನ್ನ ರಕ್ಷಣೆಗೆ ಮುಂದಾಗಿ, ಇದು ನನ್ನ ಸಲಹೆಯಲ್ಲ, ನಿಮ್ಮ ಉಳಿವಿಗಾಗಿ ನನ್ನ ಮನವಿ...

ಇದು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿರುವ ನೂರಾರು ಮರಗಳ ರೋದನೆ. ಪ್ರಜ್ಞಾವಂತ ನಾಗರಿಕರಾದವರು ಇಂತಹ ಮರ-ಗಿಡಗಳ ಸ್ಥಿತಿ ನೋಡುತ್ತ ಮುಂದೆ ಸಾಗುತ್ತಿದ್ದಾರೆಯೇ ಹೊರತು ಇವುಗಳ ರಕ್ಷಣೆಗೆ ಮುಂದಾಗುತ್ತಿಲ್ಲ.

ಎಲ್ಲೆಲ್ಲೂ ಅವಾಂತರ:

ಮಹಾನಗರದಲ್ಲಿ ಗಿಡಮರಗಳು ರಸ್ತೆಯ ಅಕ್ಕಪಕ್ಕದಲ್ಲಿ, ಸುತ್ತಲಿನ ಪರಿಸರದಲ್ಲಿ ನಮಗೆ ಕಾಣಸಿಗುತ್ತವೆ. ಕೆಲವು ಜನನಿಬಿಡ ಪ್ರದೇಶಗಳಲ್ಲಿ ನೂರಾರು ವರ್ಷಗಳಿಂದ ಇಂದಿಗೂ ಗಟ್ಟಿಯಾಗಿ ನಿತ್ಯ ನೂರಾರು ಜನರಿಗೆ ನೆರಳಿನ ಆಶ್ರಯ ನೀಡಿ ಸಲಹುತ್ತಿವೆ. ಫುಟ್‌ಪಾತ್‌ ಮೇಲಿರುವ, ರಸ್ತೆಯ ಅಕ್ಕಪಕ್ಕ ಇರುವ ಗಿಡಗಳಿಗೆ ಹಲವರ ಕಾಟ. ಗಿಡಗಳಿಗೆ ಮೊಳೆಗಳನ್ನು ಹೊಡೆದು ಫಲಕ, ಕೇಬಲ್‌ಗಳನ್ನು ನೇತುಹಾಕುವುದು, ಬ್ಯಾನರ್‌, ಬಂಟಿಂಗ್ಸ್‌ ಕಟ್ಟುವುದು, ರಸ್ತೆಯ ಮೇಲಿದ್ದ ಕಸವನ್ನೆಲ್ಲ ಸಂಗ್ರಹಿಸಿ ಗಿಡದ ಬುಡಕ್ಕೆ ಹಾಕಿ ಬೆಂಕಿ ಹಚ್ಚುವುದು, ಪುಟ್‌ಪಾತ್‌ ಮೇಲೆ ಡಬ್ಬಾ ಅಂಗಡಿಗಳನ್ನು ಈ ಮರಗಳಿಗೆ ಸರಪಳಿ ಹಾಕಿ ಕಟ್ಟುವುದು, ಇನ್ನು ಕೆಲವರು ಅಂಗಡಿ, ಮಳಿಗೆಯ ಮುಂದೆ ಗಿಡ ಇರುವುದರಿಂದ ತಮ್ಮ ಅಂಗಡಿ ನಾಮಫಲಕ ಕಾಣುವುದಿಲ್ಲ ಎಂಬ ಒಂದೇ ಕಾರಣಕ್ಕೆ ಬೃಹದಾಕಾರದ ಗಿಡಗಳಿಗೆ ಕೊಡಲಿಯಿಂದ ಕಚ್ಚು ಹಾಕಿ ಒಣಗುವಂತೆ ಮಾಡುತ್ತಿದ್ದಾರೆ.

ಮಹಾನಗರದ ಬಹುತೇಕ ಎಲ್ಲ ಕಡೆಗಳಲ್ಲೂ ಈ ಅವಾಂತರ ಕಂಡುಬರುತ್ತದೆ. ಅದರಲ್ಲಿ ಹೆಚ್ಚಾಗಿ ಕೊಪ್ಪಿಕರ್ ರಸ್ತೆ, ದಾಜಿಬಾನ್‌ ಪೇಟೆ, ದುರ್ಗದಬೈಲ್, ಗೋಕುಲ ರಸ್ತೆ, ಕುಸುಗಲ್ಲ ರಸ್ತೆ, ಗಣೇಶ ಪೇಟೆ, ಕಾರವಾರ ರಸ್ತೆ, ವಿದ್ಯಾನಗರ, ಶಿರೂರಪಾರ್ಕ್ ಭಾಗದಲ್ಲಿ ನೂರಾರು ಮರಗಳು ನೋವು ಅನುಭವಿಸುತ್ತಲೇ ಜನರಿಗೆ ನೆರಳು ನೀಡುತ್ತಿವೆ.

ಜಾಗೃತಿಈಗಾಗಲೇ ಹಲವು ಬಾರಿ ಈ ರೀತಿಯ ಮರಗಳ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ. ನಮ್ಮೊಂದಿಗೆ ಅರಣ್ಯ ಇಲಾಖೆ, ಪಾಲಿಕೆ ಅಧಿಕಾರಿಗಳು ಕೈಜೋಡಿಸಿದಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯವಾಗಲಿದೆ.

- ಮೇಘರಾಜ್‌ ಕೆರೂರು, ಪರಿಸರಪ್ರೇಮಿ

ದೌರ್ಜನ್ಯ

ಪ್ರತಿವರ್ಷವೂ ಜಾಗೃತಿ ಮೂಡಿಸಲಾಗುತ್ತಿದೆ. ಮರಗಳ ಮೇಲೆ ಇಂತಹ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಸ್ಥಳಕ್ಕೆ ತೆರಳಿ ಅಲ್ಲಿನ ಜನರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ.

- ಆರ್‌.ಎಸ್‌. ಉಪ್ಪಾರ, ಆರ್‌ಎಫ್‌ಒ, ಧಾರವಾಡ