ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮನೆಗೊಂದು ಮರ ಊರಿಗೊಂದು ವನ ಹಾಗೆಯೇ ಮರ ಆರೋಗ್ಯಕ್ಕೆ ಮಠ ಸಮಾಜಕ್ಕೆ ಪೂರಕವಾಗಿರುತ್ತದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.ಬೃಹನ್ಮಠದಲ್ಲಿ ಪ್ರತಿ ತಿಂಗಳ 5ನೇ ತಾರೀಖುನಂದು ನಡೆಯುವ 36ನೇ ವರ್ಷದ ಆರನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 12 ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದರು.
ಇಂದು ವಿಶ್ವ ಪರಿಸರ ದಿನ ಹಾಗಾಗಿ ಸಾಮೂಹಿಕ ವಿವಾಹವಾಗುತ್ತಿರುವ ಜೋಡಿಗಳು ತಮ್ಮ ಮದುವೆಯ ಕುರುವಾಗಿ ಒಂದು ಗಿಡ ನೆಡಿ ಮುಂದಿನ ದಿನದಲ್ಲಿ ಇಲ್ಲಿಗೆ ಬಂದಾಗ ಅದು ಸದಾ ನೆನಪಿನಲ್ಲಿರುತ್ತದೆ ಅಲ್ಲದೆ ಪರಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ. ವಿವಾಹಆಗುತ್ತಿರುವ ವಧು-ವರರು ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಿರುವುದು ಇತರರಿಗೆ ಮಾದರಿಯಾದ ಕಾರ್ಯಯಾಗಿದೆ. ಶ್ರೀಮಠದ ಕೊಡುಗೆ ಕಡಿಮೆ ಇರಬಹುದು ಆದರೆ ಆಶೀರ್ವಾದ ದೊಡ್ಡದಾಗಿರುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಇಂದು ವಿಶ್ವಪರಿಸರ ದಿನ. ಭೂಮಿಯನ್ನು ಕಾಪಾಡಿಕೊಳ್ಳಬೇಕು ಮಾನವ ಅನೇಕ ಗ್ರಹಗಳಿಗೆ ಹೋಗಿದ್ದಾನೆ. ಆದರೆ ಅಲ್ಲಿ ಮಾನವ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಜೀವಿಸಲು ಭೂಮಿ ಮುಖ್ಯ. ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್‌ಗಳ ಸ್ಟೇಟಸ್‌ನಲ್ಲಿ ಪರಿಸರ ದಿನದ ಪೋಸ್ಟರ್ ಹಾಕುತ್ತೀರಿ. ಆದರೆ ಸ್ಟೇಟಸ್ ಬದಲಾಗಿ ನಿಮ್ಮ ನಿಮ್ಮ ಜಾಗಗಳಲ್ಲಿ ಗಿಡ ನೆಟ್ಟು ಪರಿಸರ ಸಮತೋಲನವನ್ನು ಕಾಪಾಡಿ ಎಂದು ಕರೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ ಮಾತನಾಡಿ, ಇಂದು ಇಡೀ ಜಿಲ್ಲೆಯಲ್ಲಿ 25 ಕಡೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲು ಊರುಗಳಲ್ಲಿ ಅರಳಿ ಕಟ್ಟೆ ಇರುತ್ತಿದ್ದವು. ಅರಳಿ ಮರದಿಂದ ಉತ್ತಮ ಆಮ್ಲಜನಕ ಸಿಗುತ್ತದೆ. ಗರ್ಭಿಣಿಯರು, ಮಹಿಳೆಯರು ಮರಗಳನ್ನು ಸುತ್ತಿ ಆರೋಗ್ಯವಾಗಿರುತ್ತಿದ್ದರು. ಇಂದು ಅವು ನಾಶವಾಗುತ್ತಿವೆ. ಅವು ಇಂದು ಕಣ್ಮರೆಯಾಗಿವೆ. ಪ್ರತಿದಿನ ತಾಪಮಾನ ಹೆಚ್ಚಾಗಿ ಮಳೆಗಾಲವು ಕಡಿಮೆಯಾಗುತ್ತಿದೆ. ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲೆ ಪರಿಣಾಮ ಆಗುತ್ತಿರುವುದನ್ನು ಕಾಣುತ್ತಿದ್ದೇವೆ ಶಾಲಾಮಕ್ಕಳಲ್ಲಿ ಶೇ.20 ರಿಂದ 30ರಷ್ಟು ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆಯನ್ನು ಕಾಣಬಹುದು ಎಂದರು.
ಶಿರಸಂಗಿಯ ಶ್ರೀ ಬಸವ ಮಹಾಂತ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ 47 ಸಾವಿರಕ್ಕು ಹೆಚ್ಚು ಗಿಡ ನೆಟ್ಟು ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿರುವ ಸಿದ್ಧರಾಜು ಜೋಗಿ ಅವರನ್ನು ಸನ್ಮಾನಿಸಲಾಯಿತು. ನವಜೋಡಿಗಳು ವಿಶ್ವಪರಿಸರ ದಿನಾಚರಣೆ ಅಂಗವಾಗಿ ಮಠದ ಅಂಗಳದಲ್ಲಿ ಗಿಡಗಳನ್ನು ನೆಟ್ಟರು.ನಿಪ್ಪಾಣಿಯ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮಿಗಳು, ಮಹಂತೇಶ್ ಆರ್.ಕಮ್ಮಾರ್ ಮೊದಲಾದವರಿದ್ದರು. ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಹಾಡುಗಳನ್ನು ಹಾಡಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶಿಕ್ಷಕ ಗಿರೀಶಾಚಾರ್ ಸ್ವಾಗತಿಸಿದರು.