ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲೂಕಿನ ವಿವಿಧ ಭಾಗದಲ್ಲಿ ಸೋಮವಾರ ಸಂಜೆ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಗಾಳಿ ಮಳೆ ರಭಸಕ್ಕೆ ಹಲವು ಕಡೆ ಮರಗಳು ಧರೆಗುರುಳಿದ್ದು, ಕಸಳದಲ್ಲಿ ಕಟ್ಟಡದ ಮೇಲೆ ಅಳವಡಿಸಿದ್ದ ತಗಡಿನ ಶೀಟ್‌ಗಳು ಕಾಗದದಂತೆ ಹಾರಿದ ದೃಶ್ಯಗಳು ಕಂಡು ಬಂದಿವೆ.ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಕಳೆದ 2 ದಿನಗಳಿಂದ ಸಂಜೆ ವೇಳೆ ಮಳೆಯಾಗುತ್ತಿದೆ. ಸೋಮವಾರ ನಗರದಲ್ಲಿ ಬೆಳಗ್ಗೆಯಿಂದ ಭಾರೀ ಬಿಸಿಲಿನ ವಾತಾವರಣ ಕಂಡು ಬಂತು., ಸಂಜೆ 4 ಗಂಟೆ ಆಗುತ್ತಿದಂತೆ ಕಪ್ಪು ಮೋಡ ಕವಿದು, ಗುಡುಗು, ಮಿಂಚು, ಗಾಳಿ ಸಹಿತ ಭಾರೀ ಮಳೆ ಸುರಿಯಿತು. ಕಳಸ ಸೇರಿದಂತೆ ಮೊದಲಾದ ಕಡೆ ಆಲಿಕಲ್ಲು ಸುರಿದ ಸಹ ವರದಿಯಾಗಿದೆ. ಕೆಲವು ನಿಮಿಷಗಳೇ ಮಳೆ ಸುರಿದರೂ ಮಳೆ ಆರ್ಭಟ ಜೋರಾಗಿ ಕಂಡು ಬಂದಿದೆ,
ಹಾರಿ ಹೋದ ಶಾಮಿಯಾನಕಳಸದ ಪ್ಲಾಂಟರ್ಸ್ ಕ್ಲಬ್ ಮದುವೆ ಮನೆ ಶಾಮಿಯಾನ ಚೇರ್ ಇತರೆ ಡೆಕೋರೇಷನ್ ಗಾಳಿ ಮಳೆಗೆ ಎಲ್ಲವೂ ನೀರು ಪಾಲಾಗಿದೆ. ಮಳೆ ಗಾಳಿಯ ರೌದ್ರಾವತಾರಕ್ಕೆ ಶಾಮಿಯಾನ ಗಾಳಿಯಲ್ಲಿ ಹಾರಿ ಹೋಗಿತ್ತು. ಕಳಸದ ಕುದುರೆ ಮುಖ ರಸ್ತೆಯಲ್ಲಿ ಬಿಲ್ಡಿಂಗ್ ಒಂದರ ತಗಡಿನ ಸೀಟುಗಳು ಗಾಳಿ ರಭಸಕ್ಕೆ ಹಾರಿ ಹೋಗಿವೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಜೋರಾಗಿ ಬೀಸಿದ ಗಾಳಿಯಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾವೊಂದರ ಮೇಲೆ ತೆಂಗಿನಕಾಯಿ ಗೊಂಚಲು ಬಿದ್ದ ಪರಿಣಾಮ ಆಟೋ ಜಖಂಗೊಂಡಿದೆ.
ರಸ್ತೆಯಲ್ಲಿ ಭಾರೀ ನೀರು, ವಿದ್ಯುತ್ ಕಟ್
ಮಳೆಯ ತೀವ್ರತೆಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನೀರು ನದಿಯಂತೆ ಹರಿದು ಹಳ್ಳಗಳಲ್ಲಿ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. ವಾಹನ ಸಂಚಾರವೂ ಸ್ಥಗಿತಗೊಂಡಿತ್ತು. ಇನ್ನೂ ದೊಡ್ಡ ಹಲಸಿನ ಮರ ಮುಖ್ಯರಸ್ತೆಗೆ ತುಂಡಾಗಿ ಬಿದ್ದು ಸಂಚಾರಕ್ಕೆ ಕೆಲ ಸಮಯ ಅಡ್ಡಿ ಉಂಟು ಮಾಡಿತ್ತು. ಇದರಿಂದ ವಿದ್ಯುತ್ ತಂತಿ ಸಹ ತುಂಡಾಗಿದ್ದರಿಂದ ವಿದ್ಯುತ್ ಇಲ್ಲದೇ ಜನರು ತೊಂದರೆ ಅನುಭವಿಸಬೇಕಾಯಿತು.