ನಾಗಮಲೆಗೆ ಚಾರಣ ನಿಷೇಧ: ಜೀಪ್‌ ಚಾಲಕರ ಅಳಲು

| Published : Feb 19 2024, 01:33 AM IST

ಸಾರಾಂಶ

ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವುದನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧ ಮಾಡಿರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಜೀಪ್ ಚಾಲಕರು ಅರಣ್ಯಾಧಿಕಾರಿಗಳ ಬಳಿ‌ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವುದನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ನಿಷೇಧ ಮಾಡಿರುವುದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ಜೀಪ್ ಚಾಲಕರು ಅರಣ್ಯಾಧಿಕಾರಿಗಳ ಬಳಿ‌ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ. ರಾಜ್ಯದ ಚಾರಣ ಸ್ಥಳಗಳಲ್ಲಿ ಟ್ರಕ್ಕಿಂಗ್ ಹೋಗುವವರ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಈ ದಿಸೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣ ಹೋಗುವವರನ್ನು ತಾತ್ಕಾಲಿಕವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಜ.26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕುಮಾರ ಪರ್ವತಕ್ಕೆ ಸಾವಿರಾರು ಚಾರಣಿಗರು ಆಗಮಿಸಿ ರಾತ್ರಿ ತಂಗಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪರಿಸರ ತಜ್ಞರು ಅರಣ್ಯ ಉಳಿವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಗಿರಿ ಪ್ರದೇಶಗಳಿಗೆ ಪ್ರತಿವಾರವೂ ಸಾವಿರಾರು ಚಾರಣಿಗರು ಆಗಮಿಸಿದರೆ ಅವರನ್ನು ನಿಯಂತ್ರಿಸುವುದು, ತಪಾಸಣೆ ಮಾಡುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗುತ್ತದೆ. ಜತೆಗೆ ಪರಿಸರಕ್ಕೂ ಹಾನಿಯಾಗುತ್ತದೆ. ಜಲ ಮೂಲಗಳು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚು. ಇದನ್ನು ಮನಗಂಡು ರಾಜ್ಯದ ಎಲ್ಲಾ ಚಾರಣ ತಾಣಗಳಲ್ಲೂ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಹಾಗೂ ಆನ್‌ಲೈನ್ ಬುಕ್ಕಿಂಗ್ ಇಲ್ಲದ ಚಾರಣ ತಾಣಗಳಲ್ಲಿ ಚಾರಣಿಗರನ್ನು ನಿರ್ಬಂಧಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದರು.

ಚಾರಣಕ್ಕೆ ತಡೆ: ಈ ದಿಸೆಯಲ್ಲಿ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್ ವನ್ಯಜೀವಿ ವ್ಯಾಪ್ತಿಯಲ್ಲಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವ ಚಾರಿಣಿಗರ ಪ್ರವೇಶವನ್ನು ಸರ್ಕಾರದ ಆದೇಶದಂತೆ ಈಗಾಗಲೇ ನಿರ್ಬಂಧಿಸಲಾಗಿದೆ. ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಸಂಬಂಧ ಸರ್ಕಾರದ ಮುಂದಿನ ಆದೇಶದ ಬಳಿಕ ಬುಕ್ಕಿಂಗ್ ಆರಂಭಿಸಲಾಗುವುದು. ಸದ್ಯ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ತೆರಳುವ ಅವಕಾಶ ನೀಡಲಾಗಿದೆ. ಈ ದಿಸೆಯಲ್ಲಿ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್ ವನ್ಯಜೀವಿ ವ್ಯಾಪ್ತಿಯಲ್ಲಿನ ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಚಾರಣಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಸದ್ಯ ಕಾಲ್ನಡಿಗೆಯಲ್ಲಿ ನಾಗಮಲೆಗೆ ತೆರಳಬಹುದಾಗಿದೆ. ಜನಜೀವನಕ್ಕೆ ತೊಂದರೆ:ಇಂತಹ ಕಠಿಣ ನಿಯಮಗಳಿಂದ ಇಲ್ಲಿಯ ಗ್ರಾಮಸ್ಥರು ಜೀವನ ನಡೆಸಲು ತುಂಬಾ ತೊಂದರೆಯಾಗಿದ್ದು ಮಹದೇಶ್ವರಬೆಟ್ಟದಿಂದ ನಾಗಮಲೆಗೆ ನೂರಾರು ಸಂಖ್ಯೆಯಲ್ಲಿ ಪ್ರತಿ ದಿನ ಭಕ್ತರು ಆಗಮಿಸುತ್ತಿದ್ದರಿಂದ ಈ ಭಾಗದ ಎಷ್ಟೋ ಮಂದಿ‌ ಜೀಪ್ ಚಾಲಕರು ಹಾಗೂಇಂಡಿಗನತ್ತ ಗ್ರಾಮದ ಆಸು ಪಾಸುನಲ್ಲಿರುವ ಕೆಲ‌ ಜನತೆ ವ್ಯಾಪಾರ ವಹಿವಾಟು ನಡೆಸಿ ಜೀವನ‌ ನಡೆಸುತ್ತಿದ್ದಾರೆ. ಹಾಡಿ ಮಹಿಳೆಯರು ಮಜ್ಜಿಗೆ ಹಾಗು ಪಾನಕವನ್ನು ಮಾರಾಟ ಮಾಡುತ್ತಿದ್ದಾರೆ. ಜಾನುವಾರು ಮೇಯಿಸುತ್ತಿದವರು ಜೀಪ್ ಚಾಲಕರಾಗಿದ್ದಾರೆ ದಿಢೀರನೆ ಇಂತಹ ನಿರ್ಧಾರದಿಂದ ನಮಗೆ ದಿಕ್ಕೆ ತೋಚದಂತಾಗಿದೆ ಎಂದು ತಮ್ಮ ಅಳಲನ್ನು ಚಾಲಕರು ತೋಡಿಕೊಂಡಿದ್ದಾರೆ.

ಮೂಲಭೂತ ಸೌಲಭ್ಯಗಳಿಲ್ಲದ ಈ ಭಾಗದಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸಲು ಆಸಕ್ತಿ ತೋರದ ಅರಣ್ಯ ಸಚಿವರು ಇಂತಹ ಕಠಿಣ ನಿಯಮಗಳನ್ನು‌ ಹೊರಡಿಸಿ ಕಾಡಂಚಿನ ಜನತೆಗೆ ತೊಂದರೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜೀಪ್ ಚಾಲಕ ಮುರುಗೇಶ್ ಹಾಗೂ ಬೆಳ್ಳಿ ಇನ್ನಿತರ ಚಾಲಕರು ತಮ್ಮ ಆಕ್ರೋಶವ್ಯಕ್ತಪಡಿಸಿದ್ದಾರೆ.