ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಆದಷ್ಟು ಶೀಘ್ರ ಪೂರ್ಣಗೊಳಿಸಿ, ಕೆಲವು ರೈಲು ಗಾಡಿಗಳನ್ನು ವಿಸ್ತರಿಸುವ ಜೊತೆಗೆ ಬೆಂಗಳೂರು-ದಾವಣಗೆರೆ-ಉತ್ತರ ಕರ್ನಾಟಕದ ನಡುವಿನ ಪ್ರಯಾಣದ ಸಮಯ ಮತ್ತು ಅಂತರ ಕಡಿಮೆ ಮಾಡುವಂತೆ ರೈಲ್ವೇ ಮಂಡಳಿಯ ಜಯಾವರ್ಮ, ವಿ.ಕೆ.ತ್ರಿಪಾಠಿಯವರಿಗೆ ನೈರುತ್ಯ ರೈಲ್ವೇ ವಲಯದ ಪ್ರಯಾಣಿಕರ ಸಂಘ ಒತ್ತಾಯಿಸಿದೆ.ಉದ್ದೇಶಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ವಿಚಾರ ಅಮೆಗತಿಯಲ್ಲಿ ತೆವಳುತ್ತಾ ಸಾಗುತ್ತಿದೆ. ಈ ಮಾರ್ಗ ಕಾರ್ಯ ರೂಪಕ್ಕೆ ಬಂದಲ್ಲಿ ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಗದಗ, ವಿಜಯಪುರ ಮಧ್ಯೆ 65 ಕಿಮೀ ಅಂತರ ಕಡಿಮೆಯಾಗುತ್ತದೆ ಎಂದು ಸಂಘದ ಕಾರ್ಯದರ್ಶಿ ರೋಹಿತ್ ಎಸ್.ಜೈನ್ ರೈಲ್ವೇ ಮಂಡಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಹೊಸ ರೈಲ್ವೇ ಮಾರ್ಗದಿಂದ 65 ಕಿಮೀ ಅಂತರ ಕಡಿಮೆಯಾಗುವ ಜೊತೆಗೆ ಇಂಧನ ಉಳಿತಾಯ, ಪ್ರಯಾಣಿಕರ ಸಮಯ ಉಳಿಯಲಿದೆ. ಆದಷ್ಟು ಬೇಗನೆ ನೇರ ರೈಲ್ವೇ ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ರೈಲು ಹಳಿಗಳ ಜೋಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ಮಾರ್ಗದ ಕಾಮಗಾರಿಗೆ ವೇಗ ನೀಡಿದರೆ, ದಾವಣಗೆರೆ, ಚಿತ್ರದುರ್ಗ, ತುಮಕೂರು ಭಾಗದ ಪ್ರಯಾಣಿಕರಿಗಷ್ಟೇ ಅಲ್ಲ, ರೈಲ್ವೇ ಮಾರ್ಗ ಹಾದು ಹೋಗಿರುವ ಜಿಲ್ಲೆಗಳ ಜನರಿಗೂ ರೈಲ್ವೇ ಇಲಾಖೆಯಿಂದ ದೊಡ್ಡ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.ಬಹು ವರ್ಷಗಳ ಬೇಡಿಕೆಯಾದ ಹೊಸ ನೇರ ರೈಲ್ವೆ ಮಾರ್ಗದಿಂದ ಹತ್ತಾರು ಅನುಕೂಲ, ಉಪಯೋಗವಿದೆ. ಬೆಂಗಳೂರಿನಿಂದ ಚಿತ್ರದುರ್ಗ ಮಧ್ಯೆ 110 ಕಿಮೀ ಅಂತರ ಕಡಿಮೆಯಾಗುತ್ತದೆ. ತುಮಕೂರು ಜಿಲ್ಲೆ ಸಿರಾ, ಚಿತ್ರದುರ್ಗ ಜಿಲ್ಲೆ ಹಿರಿಯೂರಿಗೆ ಹೊಸ ರೈಲ್ವೇ ನಿಲ್ದಾಣ ಸೌಲಭ್ಯ ಸಿಗಲಿದೆ. ಬೆಂಗಳೂರು-ಅರಸೀಕೆರೆ-ಶಿವಮೊಗ್ಗ ಮಾರ್ಗದಲ್ಲಿ ರೈಲು ಸಂಚಾರ ಶೇ.50 ಕಡಿಮೆಯಾಗಲಿದೆ. ಶಿವಮೊಗ್ಗ-ಬೆಂಗಳೂರಿನ ಮಧ್ಯೆ ಹೆಚ್ಚು ಪ್ರಯಾಣಿಕ ರೈಲುಗಳನ್ನು ಹೊಂದಬಹುದು. ಬೆಂಗಳೂರಿನಿಂದ ಬೆಳಗಾವಿ, ವಿಜಯಪುರ ನಡುವಿನ ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಸಂಚಾರವು ಶೇ.35ರಷ್ಟು ಕಡಿಮೆಯಾಗಲಿದೆ ಎಂದು ವಿವರಿಸಿದ್ದಾರೆ.
ಹರಿಹರ-ಬೀರೂರು-ಅರಸೀಕೆರೆ ಮಾರ್ಗದ ರೈಲು ದಟ್ಟಣೆ ಕಡಿಮೆಯಾಗಲಿದ್ದು, ಹೆಚ್ಚು ಹೆಚ್ಚಿನದಾಗಿ ಸರಕು ಸಾಗಣೆ ಮಾಡಬಹುದು. ಪ್ರಯಾಣದ ದೂರ ಕಡಿಮೆಯಾಗಿ, ಸಾವಿರಾರು ಮನುಷ್ಯ ಗಂಟೆಗಳ ಉಳಿತಾಯ ವಾಗುವ ಜೊತೆಗೆ ರೈಲ್ವೇ ಇಲಾಖೆಗೆ ಇಂಧನ ಉಳಿತಾಯವಾಗುತ್ತದೆ. ಚಿತ್ರದುರ್ಗದ ಕೋಟೆ ಸೇರಿ ಪ್ರವಾಸಿ ತಾಣಗಳಿಗೆ ರಾಜ್ಯ, ಪರ ರಾಜ್ಯ, ವಿದೇಶಗಳಿಂದ ಪ್ರವಾಸಿಗರು ಬಂದು, ಹೋಗಲು ಅನುಕೂಲವಾಗುತ್ತದೆ. ಪ್ರವಾಸಿಗರ ಭೇಟಿಯಿಂದ ಆದಾಯ ಹೆಚ್ಚುವ ಜೊತೆಗೆ ಸ್ಥಳೀಯವಾಗಿ ಹೊಸ ಉದ್ಯೋಗಗಳ ಸೃಷ್ಟಿಯಾಗಿ, ಜನ ಜೀವನವೂ ಸುಧಾರಣೆಯಾಗುತ್ತದೆ ಎಂದು ತಿಳಿಸಿದ್ದಾರೆ.ದಾವಣಗೆರೆ ಜಿಲ್ಲೆಯ ಆನಗೋಡು, ಹೆಬ್ಬಾಳ್, ಚಿತ್ರದುರ್ಗ ಜಿಲ್ಲೆಯ ಭರಮಸಾಗರ, ಸಿರಿಗೆರೆ ಕ್ರಾಸ್, ಐಮಂಗಲ, ಹಿರಿಯೂರು, ಸಿರಾ ಹಾಗು ಊರಕೇರೆಗೆ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ರೈಲು ಹಳಿಗಳೂ ಇಲ್ಲದ ಭಾಗಗಳಿಗೂ ರೈಲು ಸೇವೆ ಒದಗಿಸಿದ ಶ್ರೇಯ ಲಭಿಸುತ್ತದೆ ಎಂದು ಮನವಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ನಿಲುಗಡೆ ಕಾಲಾವಧಿ ಹೆಚ್ಚಿಸಿಬೆಂಗಳೂರು-ಗಾಂಧಿ ದಾಮ್ ರೈಲು ಗಾಡಿಯನ್ನು ಭುಜ್‌ವರೆಗೂ ವಿಸ್ತರಿಸಬೇಕು. ವಾರಕ್ಕೆ 3 ದಿನ ಈ ರೈಲನ್ನು ಸಂಚರಿಸಲು ಕ್ರಮ ಕೈಗೊಳ್ಳಬೇಕು. ಹುಬ್ಬಳ್ಳಿ-ಕೊಚುವಲಿ ರೈಲನ್ನು ವಾರಕ್ಕೆ 3 ದಿನ ಸಂಚರಿಸುವಂತೆ ಮಾಡಬೇಕು. ಬೆಂಗಳೂರಿನಿಂದ ವೈಷ್ಣೋದೇವಿ(ಕತ್ರ) ರೈಲನ್ನು ಹುಬ್ಬಳ್ಳಿ ಮಾರ್ಗವಾಗಿ ಒಂದು ದಿನ ಸಾಧಾರಣ ರೈಲು ಗಾಡಿ ಬಿಡಬೇಕು. ಬೆಂಗಳೂರು-ಅಯೋಧ್ಯೆ ಮಧ್ಯೆ ಹುಬ್ಬಳ್ಳಿ ಮಾರ್ಗವಾಗಿ ಹೊಸ ರೈಲು ಸೇವೆ ಒದಗಿಸಬೇಕು. ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ರೈಲು ಗಾಡಿಗಳ ನಿಲುಗಡೆ ಕಾಲಾವಧಿ ಕನಿಷ್ಠ 5 ನಿಮಿಷಕ್ಕೆ ಹೆಚ್ಚಿಸಬೇಕು ಎಂದು ಸಂಘದ ಕಾರ್ಯದರ್ಶಿ, ನೈರುತ್ಯ ರೈಲ್ವೇ ಮೈಸೂರು ವಿಭಾಗದ ರೈಲ್ವೇ ಸಲಹಾ ಸಮಿತಿ ಸದಸ್ಯ ರೋಹಿತ್ ಎಸ್.ಜೈನ್ ಒತ್ತಾಯಿಸಿದ್ದಾರೆ.