ಗಿರಿಜನ ‌ಸಹಕಾರ ಸಂಘ ಸದಸ್ಯರು ಮತದಾನದಿಂದ ವಂಚಿತ: ಮುಖಂಡರ ಆಕ್ರೋಶ

| Published : Feb 06 2025, 12:18 AM IST

ಸಾರಾಂಶ

ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ತಪ್ಪಿನಿಂದ ಬಹುತೇಕ ಸದಸ್ಯರು ಮತದಾನದಿಂದ ವಂಚಿತಗೊಂಡಿದ್ದಾರೆ ಎಂದು ಗಿರಿಜನ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕಿನ ಬಸವನಹಳ್ಳಿಯಲ್ಲಿ ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಆರಂಭಗೊಂಡ ಗಿರಿಜನ ‌ವಿವಿಧೋದ್ದೇಶ ಸಹಕಾರ ಸಂಘವು ಮೂರು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ತಪ್ಪಿನಿಂದ ಬಹುತೇಕ ಸದಸ್ಯರು ಮತದಾನದಿಂದ ವಂಚಿತಗೊಂಡಿದ್ದಾರೆ ಎಂದು ಗಿರಿಜನ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲ್ಯಾಂಪ್ಸ್ ಸೊಸೈಟಿ ಮಾಜಿ ಅಧ್ಯಕ್ಷ ಆರ್.ಕೆ.ಚಂದ್ರು, ಲ್ಯಾಂಪ್ಸ್ ಸಂಘದಲ್ಲಿ ಕೇವಲ 177 ಮಂದಿ‌ ಸದಸ್ಯರು ಮಾತ್ರ ಮತದಾರರ ಪಟ್ಟಿಯಲ್ಲಿ ಇದ್ದಾರೆ.

ಇದರಿಂದ ಸದಸ್ಯರಿಗೆ ಮಾಹಿತಿ ಕೊರತೆಯಿಂದ ಸಂಘದ ಹಣ 1000 ರು. ಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ

ಸಾವಿರಾರು ಮಂದಿ ಸದಸ್ಯರು ಮತದಾನದಿಂದ ವಂಚಿತರಾಗಿದ್ದಾರೆ.

ಸೋಲಿಗ ಗಿರಿಜನ ಸಂಘದ ಅಧ್ಯಕ್ಷ ಬಿ.ಪಿ.ಮಹೇಶ್ ಮಾತನಾಡಿ, 1965 ರಲ್ಲಿ ಪ್ರತ್ಯೇಕವಾದ ಲ್ಯಾಂಪ್ಸ್ ಸಹಕಾರ ಸಂಘ ಸ್ಥಾಪನೆಗೊಂಡಿತು. ಮಾಜಿ ಅಧ್ಯಕ್ಷರಾದ ಕಾಳಪ್ಪ, ನಾಗೇಂದ್ರ, ತಮ್ಮಯ್ಯ, ಜೆ.ಪಿ.ರಾಜು, ಚಂದ್ರು ಅವರು ಸೊಸೈಟಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ‌ ಮೂಲಕ ಲಾಭದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದರು.

ಫೆ.13 ರಂದು ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಸದಸ್ಯರು ನೈಜ ಗಿರಿಜನ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಮೂಲಕ ಲ್ಯಾಂಪ್ಸ್ ಸೊಸೈಟಿ ಉಳಿಸಿ ಆದಿವಾಸಿ ಸಮುದಾಯದ ಏಳಿಗೆ ಕಾಣುವಂತಾಗಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಜೇನು ಕುರುಬರ ಸಂಘಟನಾ ಕಾರ್ಯದರ್ಶಿ ಜೆ.ಟಿ.ಕಾಳಿಂಗ ಮಾತನಾಡಿ, ಕೆಲವು ವ್ಯಕ್ತಿಗಳು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನೈಜ ಗಿರಿಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಂಚಿಸಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಗಿರಿಜನರ ನ್ಯಾಯಯುತ ಬೇಡಿಕೆ, ಈಡೇರಿಕೆಗೆ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಗ್ರ ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಸೋಲಿಗರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಎಚ್.ಸಿದ್ಧಲಿಂಗ, ಗಿರಿಜನ ಮುಖಂಡರಾದ ಜೆ.ಕೆ.ನಂಜಯ್ಯ, ಜೆ.ಎನ್.ವಸಂತ ಇದ್ದರು.