ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಹಿರಿಯ ರಂಗಭೂಮಿ ಕಲಾವಿದ ಶಾರದಾ ಪ್ರತಿಷ್ಠಾನದ ಸ್ಥಾಪಕ ಸದಸ್ಯ ಚಿ.ರಮೇಶ್ ಅವರಿಗೆ ಶಾರದಾ ಸೇವಾ ಪ್ರತಿಷ್ಠಾನ ಹಾಗೂ ಉತ್ಸವ ಸಮಿತಿ ಕಲ್ಲಡ್ಕ ವತಿಯಿಂದ ನುಡಿನಮನ ಕಾರ್ಯಕ್ರಮ ಕಲ್ಲಡ್ಕ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆಯಿತು.ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸ್ಥಾಪಕರಾದ ಡಾ.ಪ್ರಭಾಕರ್ ಭಟ್ ಮಾತನಾಡಿ, ರಂಗಭೂಮಿಯೇ ಚಿ.ರಮೇಶ್ ಅವರ ಬದುಕಾಗಿತ್ತು. ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ. ಅವರು ಮಾಡುತ್ತಿದ್ದ ನಾಟಕದ ಪಾತ್ರ ಜೀವನದಲ್ಲಿ ನಾವು ಇರಬೇಕಾದ ಸಂದೇಶ ನೀಡುವ ಪಾತ್ರವಾಗಿತ್ತು ಅಮೂಲಕ ಜನರಿಗೆ ಹೆಚ್ಚು ಪ್ರಿಯರಾಗಿದ್ದರು, ಅನೇಕ ಹಾಸ್ಯ ನಾಟಕಗಳ ಮೂಲಕವೂ ಮಿಂಚಿದ್ದರು. ನಾಟಕದಲ್ಲಿ ನಾನು ನೀಡುವ ಸಂದೇಶದಂತೆಯೇ ಬದುಕಬೇಕು ಎಂಬ ಕಲ್ಪನೆಯಲ್ಲಿ ಬದುಕು ಸಾಗಿಸಿದವರು ಅವರು ಎಂದರು. ವೈಯಕ್ತಿಕ ಜೀವನದಲ್ಲಿ ಅನೇಕ ಕಷ್ಟಗಳಿದ್ದರು ಇತರರಿಗೆ ನೋವು ಕೊಟ್ಟವರಲ್ಲ, ನಗುಮೊಗದಿಂದ ಮಾತನಾಡುತ್ತಿದ್ದರು. ಅಜಾತಶತ್ರುವಾಗಿ ಬದುಕು ಕಳೆದವರು ಎಂದರು.ಕಲಾಸಂಗಮ ನಾಟಕ ತಂಡದ ಸಂಸ್ಥಾಪಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಚಿ.ರಮೇಶ್ ಕಳೆದ 28 ವರ್ಷಗಳಿಂದ ಕಲಾಸಂಗಮದ ಕಲಾವಿದನಾಗಿ ಬದ್ಧತೆಯ ಬದುಕು ಸಾಗಿಸಿದವರು, ಅವರ ನಿಷ್ಠೆ ಪ್ರತಿಯೊಬ್ಬ ಕಲಾವಿದನಿಗೂ ಮಾದರಿ ಎಂದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ರಾಧಾಕೃಷ್ಣ ಅಡ್ಯಂತಾಯ, ನರಸಿಂಹ ಕಲ್ಲಡ್ಕ, ಪದ್ಮನಾಭ ರೈ.ನಾಗೇಶ್ ಕಲ್ಲಡ್ಕ ನುಡಿ ನಮನ ಸಲ್ಲಿಸಿದರು.ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಅಧ್ಯಕ್ಷ ಯತಿನ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ವಂದಿಸಿದರು. ಕೋಶಾಧಿಕಾರಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.