ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್‌ ರಾಜ್‌ ಅವರಿಗೆ ಕರ್ನಾಟಕ ಟೆಲಿವಿಷನ್‌ ಪ್ರೊಡ್ಯೂಸರ್‌ ಅಸೋಸಿಯೇಷನ್‌ ವತಯಿಂದ ನುಡಿ ನಮನ ಸಲ್ಲಿಸಲಾಯಿತು.

ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟಿ ಉಮಾಶ್ರೀ, ‘ಕಿರುತೆರೆಯ ಒತ್ತಡದ ಜೀವನವನ್ನು ಹೆಚ್ಚು ತೆಗೆದುಕೊಳ್ಳಬೇಡಿ. ಸಾಧ್ಯವಾದಷ್ಟು ಒತ್ತಡ ಜೀವನದಿಂದ ದೂರ ಇದ್ದು, ಆರೋಗ್ಯದ ಕಡೆಗೂ ಗಮನ ಕೊಡಿ. ನನಗಿಂತ ಚಿಕ್ಕವರು ನನ್ನ ಕಣ್ಣ ಮುಂದೆಯೇ ಹೀಗೆ ಅಕಾಲಿಕವಾಗಿ ನಿಧನರಾಗುತ್ತಿರುವುದನ್ನು ನೋಡಿದಾಗ ಮನಸ್ಸಿಗೆ ತುಂಬಾ ಸಂಕಟವಾಗುತ್ತದೆ. ನನ್ನ ಮಕ್ಕಳ ವಯಸ್ಸಿನವರ ನಮನ ಕಾರ್ಯಕ್ರಮಕ್ಕೆ ನಾನೇ ಬರೋದು ಅಂದರೆ ತುಂಬಾ ನೋವಾಗುತ್ತದೆ. ಇಂಥ ಘಟನೆಗಳು ಮುಂದೆ ನಡೆಯದಿರಲಿ. ಒತ್ತಡದ ಜೀವನಕ್ಕಿಂತ ಆರೋಗ್ಯವಂತ ಜೀವನ ಮುಖ್ಯ’ ಎಂದು ತಿಳಿಸಿದರು.

ನಟ, ನಿರ್ದೇಶಕ ಬಿ.ಸುರೇಶ್‌ ಮಾತನಾಡಿ, ‘ಕಿರುತೆರೆಯಲ್ಲಿ ಕರ್ನಾಟಕ ಟೆಲಿವಿಷನ್‌ ಪ್ರೊಡ್ಯೂಸರ್‌ ಅಸೋಸಿಯೇಷನ್‌ ಹುಟ್ಟು ಹಾಕಿದ್ದೇ ದಿಲೀಪ್‌ ರಾಜ್‌ ಹಾಗೂ ಅವರ ಪತ್ನಿ ವಿದ್ಯಾ ಅವರು. ಈಗ ಅವರೇ ಶುರು ಮಾಡಿಸಿದ ಸಂಘವೇ ದಿಲೀಪ್‌ ರಾಜ್‌ ಅವರಿಗೆ ನುಡಿ ನಮನ ಸಲ್ಲಿಸುವಂತಾಗಿರುವುದು ತುಂಬಾ ದುಃಖದ ಸಂಗತಿ. ಕಿರುತೆರೆ ನಿರ್ಮಾಪಕರ ಸಂಘ ದಿಲೀಪ್‌ ರಾಜ್‌ ಕುಟುಂಬದ ಜೊತೆಗೆ ಇರುತ್ತದೆ’ ಎಂದರು.

ದಿಲೀಪ್‌ ರಾಜ್‌ ಪತ್ನಿ ವಿದ್ಯಾ ಅವರು ಮಾತನಾಡಿ, ‘ನನಗೆ ಎಲ್ಲವನ್ನು ಕಲಿಸಿಕೊಟ್ಟು ನನ್ನ ಮುಂದೆ ಬಿಟ್ಟು ದಿಲೀಪ್‌ ಹೋಗಿಬಿಟ್ಟ. ಅವನಿಲ್ಲದೆ ನಾನು ಏನು ಮಾಡಕ್ಕೆ ಆಗಲ್ಲ. ಆತ ನನ್ನ ಜೊತೆಗೆ ಇರುತ್ತಾನೆ’ ಎಂದು ಭಾವುಕರಾದರು. ವಿನಯಾ ಪ್ರಸಾದ್‌ ಅವರು ಹಾಡಿನ ಮೂಲಕ ನುಡಿ ನಮನ ಸಲ್ಲಿಸಿದರು.


ಕರ್ನಾಟಕ ಟೆಲಿವಿಷನ್‌ ಪ್ರೊಡ್ಯೂಸರ್‌ ಅಸೋಸಿಯೇಷನ್‌ ಅಧ್ಯಕ್ಷ ಅರವಿಂದ್‌, ಉಪಾಧ್ಯಕ್ಷ ಜೆ.ಕೆ.ಸುನೀಲ್‌, ಕಾರ್ಯದರ್ಶಿ ಬಾಲಾಜಿ, ಜಂಟಿ ಕಾರ್ಯದರ್ಶಿ ಆರೂರು ಜಗದೀಶ್‌, ನಿರ್ಮಾಪಕ ಶಿವಕುಮಾರ್‌, ಕಲರ್ಸ್‌ ಕನ್ನಡ ಪ್ರೊಗ್ರಾಮಿಂಗ್‌ ಹೆಡ್‌ ಸುಧೀಂದ್ರ ಭಾರದ್ವಜ್‌, ಜೀ ಕನ್ನಡ ವಾಹಿನಿಯ ಫಿಕ್ಷನ್‌ ಹೆಡ್‌ ಚೇತನ್‌ ಸೋಲಾಜಿ, ನವೀನ್ ಕೃಷ್ಣ ಹಾಗೂ ನವೀನ್ ಸಜ್ಜು ಸೇರಿದಂತೆ ಕಿರುತೆರೆಯ ಬಹಳಷ್ಟು ನಿರ್ಮಾಪಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವ್ಯಾಸರಾಜ್ಸೋಸಲೆ ಮತ್ತು ಅವರ ತಂಡದವರು ದಿಲೀಪ್ ರಾಜ್ ಅವರಿಗೆ ನುಡಿ ನಮನವನ್ನು ಸಂಗೀತದ ಮೂಲಕ ಸಲ್ಲಿಸಿದರು.