ಸಾರಾಂಶ
ಗ್ರಾಮದ ಇಬ್ಬರು ಪ್ರತಿಭಾವಂತರು ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕೆ ಸ್ವಾತಂತ್ರ್ಯೋತ್ಸವ ಸಮಿತಿ ಅದ್ಧೂರಿಯಾಗಿ ಸನ್ಮಾನಿಸಿತು.
ಕನ್ನಡಪ್ರಭ ವಾರ್ತೆ ಕುದೂರು
ಗ್ರಾಮದ ಇಬ್ಬರು ಪ್ರತಿಭಾವಂತರು ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕೆ ಸ್ವಾತಂತ್ರ್ಯೋತ್ಸವ ಸಮಿತಿ ಅದ್ಧೂರಿಯಾಗಿ ಸನ್ಮಾನಿಸಿತು.ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿ ಪ್ರಶಸ್ತಿ ಪಡೆದಿರುವ ಡಾ.ಎನ್.ನಾಗಭೂಷಣ್ ಹಾಗೂ ಪ್ರಸ್ಟಿಜಿಯಸ್ ಡಿಆರ್‌ಡಿಒ ಡೇರ್ ಟು ಡ್ರೀಮ್ 3.0 ಪ್ರಶಸ್ತಿ ಪುರಸ್ಕೃತ ಡಾ.ಕೆ.ಜೆ.ಗುರುರಾಜ್ ಅವರನ್ನು ಸಮಿತಿ ಸದಸ್ಯರು ಆತ್ಮೀಯವಾಗಿ ಸನ್ಮಾನಿಸಿದರು.
ಗ್ರಾಪಂ ಸದಸ್ಯೆ ಲತಾ ಗಂಗಯ್ಯ ಮಾತನಾಡಿ, ಕುದೂರು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಅದ್ಭುತ ಸಾಧನೆ ಮಾಡಿ ಗ್ರಾಮಕ್ಕೆ ಹೆಸರು ತಂದು ಇಂದಿನ ತಲೆಮಾರಿಗೆ ಸಾಧನೆಯ ಕನಸು ಕಟ್ಟಿಕೊಟ್ಟಿದ್ದಾರೆ. ಬಾಲ್ಯದಲ್ಲಿಯೇ ಸಾಧನೆಯ ಕನಸು ಕಂಡುಕೊಂಡು ಹೋಗಿದ್ದರ ಫಲವಾಗಿ ಇಂದು ರಾಷ್ಟ್ರಕ್ಕೆ ದೊಡ್ಡ ಆಸ್ತಿಯಾಗಿ ಕಂಗೊಳಿಸುತ್ತಿದ್ದಾರೆ. ಇಂತಹವರನ್ನು ಸನ್ಮಾನ ಮಾಡುವುದು ಎಂದರೆ ಇಡೀ ಊರಿಗೆ ಊರೆ ತಮಗೆ ತಾವೇ ಹೆಮ್ಮೆಯಿಂದ ಸನ್ಮಾನ ಮಾಡಿಕೊಂಡಂತಾಗಿದೆ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಮ್ಯಜ್ಯೋತಿ ಮಾತನಾಡಿ, ಕುದೂರು ಒಂದು ವಿಶಿಷ್ಟ ಗ್ರಾಮವಾಗಿ ಕಂಗೊಳಿಸುತ್ತಿದೆ. ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುತ್ತಿದೆ. ಸ್ವಾತಂತ್ರ್ಯ ದಿನಾಚಾರಣೆಯನ್ನು ಯಾಂತ್ರಿಕವಾಗಿ ಆಚರಿಸದೆ ಮುಂದಿನ ತಲೆಮಾರಿಗೆ ಸ್ಪೂರ್ತಿ ನೀಡುವ ರೀತಿಯಲ್ಲಿ ಆಯೋಜಿಸಲು ತೀರ್ಮಾನಿಸಿ ಸಾಧಕರನ್ನು ಕರೆಸಿ ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ನೇಕಾರಿಕೆ ವೃತ್ತಿ ಮಾಡಿಕೊಂಡು ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಸ್ವಂತ ಪರಿಶ್ರಮದಿಂದ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನುಷಾರನ್ನು ಸನ್ಮಾನಿಸಲಾಯಿತು.ಡಾ.ಕೆ.ಜೆ.ಗುರುರಾಜ್ ಪರಿಚಯ: ಮೆಕ್ಸಿಕೋದ ಗುಡಲಾಜಾರ ವಿಶ್ವವಿದ್ಯಾಲಯದಿಂದ ಗಣಕಯುಕ್ತ ರಸಾಯನಿಕ ಶಾಸ್ತ್ರದಲ್ಲಿ ತಂತ್ರಜ್ಞಾನ ಮತ್ತು ಪಿ.ಎಚ್‌ಡಿ ಮತ್ತು ಚೀನಾ ಬೀಚಿಂಗ್‌ನ ಥಿಂಗ್ ಹುವಾ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಅನುಭವವನ್ನು ಹೊಂದಿರುತ್ತಾರೆ. 2022ರ ಅಕ್ಟೋಬರ್‌ನಲ್ಲಿ ಭಾರತ ಸರ್ಕಾರದ ರಕ್ಷಣಾ ಸಚಿವಾಲಯ ರಕ್ಷಣಾ ಸಂಶೋಧನ ಮತ್ತು ಅಭಿವೃದ್ದಿ ಸಂಸ್ಥೆಯಿಂದ ಅವರ ನಾವಿನ್ಯತೆ ಸಂಶೋಧನೆಗಳನ್ನು ಗುರುತಿಸಲು "ಪ್ರಸ್ಟಿಜಿಯಸ್ ಡಿಆರ್‌ಡಿಒ ಡೇರ್ ಟು ಡ್ರೀಮ್ 3.0 " ಪ್ರಶಸ್ತಿಯನ್ನು ಪಡೆದಿದ್ದಾರೆ. ಐದು ವರ್ಷಗಳಿಗಿಂತ ಹೆಚ್ಚು ಶೈಕ್ಷಣಿಕ ಅನುಭವ ಹೊಂದಿರುವ 50ಕ್ಕೂ ಹೆಚ್ಚು ಪ್ರಕಟಿತ ಲೇಖನಗಳೊಂದಿಗೆ ಡಾ.ಗುರುರಾಜ್ ಶಿಕ್ಷಣ ಮತ್ತು ಸಂಶೋಧನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.ಡಾ.ಎನ್.ನಾಗಭೂಷಣ್ ಪರಿಚಯ: ಭವಿಷ್ಯದಲ್ಲಿ ಮೂತಭೂತ ಗಣಿತ ಮತ್ತು ವಿಜ್ಞಾನವನ್ನು ಆಕರ್ಷಕವಾಗಿ ಬೋಧಿಸುವುದು ಹೇಗೆ ಎಂಬುದರ ಕುರಿತು ಸಂಶೋಧನ ಲೇಖನವನ್ನು ಎನ್‌ಸಿಇಆರ್‌ಟಿ ಭವನ ನವದೆಹಲಿಯಲ್ಲಿ ಪ್ರಸ್ತುತ ಪಡಿಸಿದ್ದರು. ಆಗ ತೀರ್ಪುಗಾರರಾಗಿದ್ದವರು ಎ.ಪಿ.ಜೆ ಅಬ್ದುಲ್ ಕಲಾಂ ಮತ್ತು ಡಾ.ಕಸ್ತೂರಿರಂಗನ್. 2020ರಲ್ಲಿ ನಾಗಭೂಷಣ್‌ಗೆ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪುರಸ್ಕಾರ ಪಡೆದಿದ್ದರು. 2015ರ ಆ.15ರಂದು ಶಿಕ್ಷಣ ಕ್ಷೇತ್ರದ ತಮ್ಮ ಸಂಶೋಧನ ಪ್ರಬಂಧವನ್ನು ಮೆಚ್ಚಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶಸ್ತಿ ನೀಡಿದ್ದರು.