ಸಾರಾಂಶ
ಶನಿವಾರಸಂತೆಯ ಪತ್ರಿಕಾ ವಿತರಕ ಕೆ.ಎನ್. ಕುಮಾರಸ್ವಾಮಿ ಅವರು ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿಸೋಮವಾರಪೇಟೆ ಪತ್ರಿಕಾ ಭವನದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪತ್ರಿಕೆ ಮತ್ತು ಪತ್ರಿಕಾ ವಿತರಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಅವಿನಾಭಾವ ಸಂಬಂಧ ಇದೆ ಎಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಹೇಳಿದ್ದಾರೆ.ಶನಿವಾರಸಂತೆಯ ಪತ್ರಿಕಾ ವಿತರಕ ಕೆ.ಎನ್. ಕುಮಾರಸ್ವಾಮಿ ಅವರು ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕಾ ವಿತರಕರು ಇಂದು ಸಾಕಷ್ಟು ಸಮಸ್ಯೆಗಳ ನಡುವೆ ಮನೆ ಮನೆಗೆ ಮಳೆ, ಚಳಿ ಎನ್ನದೆ ಪತ್ರಿಕೆ ವಿತರಿಸುವ ಮೂಲಕ ಪತ್ರಿಕೆಗಳ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ ಯಾವುದೇ ಕೆಲಸವನ್ನಾದರೂ, ಶ್ರಮ ವಹಿಸಿ ಮಾಡಿದಲ್ಲಿ, ಯಶಸ್ಸು ಸಾಧ್ಯ ಎಂದರು.ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ, ಪತ್ರಿಕೆ ಮತ್ತು ಜನರ ನಡುವೆ ಕೆಲಸ ಮಾಡಿ ಸಾಕಷ್ಟು ಜನರು ಉತ್ತುಂಗದ ಸ್ಥಾನಕ್ಕೇರಿದ್ದಾರೆ. ಪತ್ರಿಕೆ ಜ್ಞಾನ ಸಂಪಾದನೆಗೆ ದಾರಿಯಾಗಿದ್ದು, ಹಣದೊಂದಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಲಿದೆ ಎಂದರು.
ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಕಾರ್ಯದರ್ಶಿ ಡಿ.ಪಿ. ಲೋಕೇಶ್, ಸಹ ಕಾರ್ಯದರ್ಶಿ ಹೋಮೇಶ್ ಮಣಗಲಿ, ಖಜಾಂಚಿ ದುಷ್ಯಂತ್, ನಿರ್ದೇಶಕರಾದ ಜಯಪ್ಪ ಹಾನಗಲ್ಲು, ಟೋಮಿ ಥಾಮಸ್(ನಾ ಕನ್ನಡಿಗ), ಎಸ್.ಆರ್. ವಸಂತ್, ಸುಕುಮಾರ್, ಜೈನುದ್ದೀನ್, ಕುಶಾಲನಗರ ಸಂಘದ ಕಾರ್ಯದರ್ಶಿ ವಿನ್ಸೆಂಟ್ ಇದ್ದರು.