ಸಾರಾಂಶ
ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮ ಪಂಚಾಯ್ತಿ ಮಹಿಳಾ ಚಾಲಕಿ ಜಗದೇವಿ ಅವರನ್ನು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ರಾಜ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಘನ ತಾಜ್ಯ ವಾಹನ ವಿಲೇವಾರಿ ಮಹಿಳಾ ಚಾಲಕಿಯರಿಗೆ ಪಂಚಾಯತ್ ರಾಜ್ ಇಲಾಖೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮ ಪಂಚಾಯ್ತಿಯ ಚಾಲಕಿ ಜಗದೇವಿ ಅವರನ್ನು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಸನ್ಮಾನಿಸಿದರು.ಜಿಲ್ಲೆಯ 55 ಪಂಚಾಯ್ತಿಗಳಲ್ಲಿ ಸ್ವಚ್ಛವಾಹಿನಿಯ ಮಹಿಳಾ ಚಾಲಕಿಯರಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳ ಘನತಾಜ್ಯ ವಿಲೆವಾರಿ ಕಾರ್ಯದಲ್ಲಿ ಎನ್‌ಜಿಓ ಸಂಸ್ಥೆ ಮೂಲಕ ಸೇವೆಯಲ್ಲಿ ಚಾಲಕಿಯರಾಗಿ ತೊಡಗಿಸಿಕೊಂಡಿದ್ದು, ಪುರಸ್ಕಾರಕ್ಕೆ ಭಾಜನರಾಗಿದ್ದಕ್ಕೆ ಶುಭ ಹಾರೈಸಿದ್ದಾರೆ.
ಜಗದೇವಿ ಅವರನ್ನು ಸನ್ಮಾನಿಸಿರವುದು ಸಂತಸ ತಂದಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಅಭಿನಂದಿಸಿದ್ದಾರೆ.ಹುಣಸಗಿ ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜಸ್ವಾಮಿ ಹಿರೇಮಠ ಮತ್ತು ಕಾಮನಟಗಿ ಗ್ರಾಮ ಪಂಚಾಯ್ತಿ ಅದ್ಯಕ್ಷ ಸಂತೋಷ ದೇವರಮನೆ ಮಾತನಾಡಿ, ಸ್ವಚ್ಛವಾಹಿನಿಗೆ ಮಹಿಳಾ ಚಾಲಕಿ ಜಗದೇವಿಗೆ ರಾಜ್ಯ ಮಟ್ಟದಲ್ಲಿ ಸಂದ ಗೌರವಕ್ಕೆ ಜಿಲ್ಲೆಯ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಈ ಶತಮಾನದ ಮಾದರಿ ಹೆಣ್ಣು, ಇಂದು ಎಲ್ಲಾ ರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ ಎಂದರು.
ಪಿಡಿಓ ಸಾಹೇಬಗೌಡ ಮಾತನಾಡಿ, ಭಾರತದಲ್ಲಿ ಮಹಿಳಾ ಸಾಧಕಿಯರಾಗಿ ಮಹಿಳಾ ವೈದ್ಯೆ ಆನಂದಿ ಜೋಷಿ, ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ, ಮಹಿಳಾ ಆಟೋ ಚಾಲಕಿ ಶೀಲಾದಾವ್ರೆ, ಮಹಿಳಾ ಪೈಲಟ್ ಸರಳಾ, ಮೊದಲ ರೈಲು ಚಾಲಕಿ ಸುರೇಖಾ ಯಾದವ, ಇಂದಿನ ಎಲ್ಲಾ ಮಹಿಳಾ ಶಕ್ತಿಗೆ ಪ್ರೇರಣೆಯಾಗಿದ್ದಾರೆ ಜಗದೇವಿಗೆ ರಾಜ್ಯ ಗೌರವಕ್ಕೆ ಪಾತ್ರರಾಗಿದ್ದಕ್ಕೆ ಹಾರೈಸಿದರು.ಕಾಮನಟಗಿ ಗ್ರಾಮದ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ರಾಜ್ಯ ಮಟ್ಟದ ಪುರಸ್ಕಾರಕ್ಕೆ ಪಾತ್ರರಾಗಿರುವ ಜಗದೇವಿ ಅವರಿಗೆ ಅಭಿನಂದಿಸಿ ಸಂತಸ ವ್ಯಕ್ತಪಡಿಸಿದರು.